ವ್ಯಾಟಿಕನ್‌ ಸಿಟಿ[ಜ.02]: ಹೊಸ ವರ್ಷದ ಹಿನ್ನೆಲೆಯಲ್ಲಿ ಜನರೊಂದಿಗಿನ ಭೇಟಿಯ ವೇಳೆ ತಮ್ಮನ್ನು ಕೈ ಹಿಡಿದು ಎಳೆದ ಮಹಿಳೆಯೊಬ್ಬಳ ಮೇಲೆ ಪೋಪ್‌ ಫ್ರಾನ್ಸಿಸ್‌ ಸಿಟ್ಟಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ತಡೆಗೋಡೆ ಆಚೆ ನಿಂತಿದ್ದ ಜನರನ್ನು ಭೇಟಿ ಮಾಡುತ್ತಾ ಬರುತ್ತಿದ್ದ ವೇಳೆ ಮಹಿಳೆಯೊಬ್ಬರು ಪೋಪ್‌ ಫ್ರಾನ್ಸಿಸ್‌ ಅವರ ಕೈಯನ್ನು ಹಿಡಿದು ಎಳೆದರು. ಇದರಿಂದ ಆಕ್ರೋಶಗೊಂಡ ಪೋಪ್‌, ಆಕೆಯ ಕೈ ಮೇಲೆ ಎರಡು ಏಟುಕೊಟ್ಟು ಆಕೆಯಿಂದ ಬಿಡಿಸಿಕೊಂಡಿದ್ದಾರೆ.

ಈ ಘಟನೆಯ ವಿಡಿಯೋ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಪೋಪ್‌ ಕೂಡ ಒಬ್ಬ ಮನುಷ್ಯ. ಅವರಿಗೂ ನೋವಾಗುತ್ತದೆ ಎಂದು ಅನೇಕ ಮಂದಿ ಪೋಪ್‌ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೇ ವೇಳೆ ಮಹಿಳೆ ಅತ್ಯುತ್ಸಾಹದಿಂದ ವರ್ತಿಸುವ ವೇಳೆ ‘ನಾನು ತಾಳ್ಮೆ ಕಳೆದುಕೊಂಡೆ’ ಎಂಬುದನ್ನು ಪೋಪ್‌ ಒಪ್ಪಿಕೊಂಡಿದ್ದಾರೆ. ‘ನಾವು ಹಲವು ಬಾರಿ ತಾಳ್ಮೆ ಕಳೆದುಕೊಳ್ಳುತ್ತೇವೆ. ಅದು ನನಗೂ ಆಗಿದೆ. ಇದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾರೆ.