ಹಳೆಯದಾಗುತ್ತಿವೆ ಭಾರತದ ಮಿಗ್-21: ಹಾರಾಡುವ ಶವಪೆಟ್ಟಿಗೆಗಳಿಗೆ 2025ರಲ್ಲಿ ನಿವೃತ್ತಿ?
ಮಿಗ್-21 ಜಗತ್ತಿನ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟ ಯುದ್ಧ ವಿಮಾನದ ಮಾದರಿಗಳಲ್ಲಿ ಒಂದಾಗಿದ್ದು, 1959ರಿಂದ 1985ರ ತನಕ 11,000 ವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
• 1955ರಲ್ಲಿ ತನ್ನ ಮೊದಲ ಹಾರಾಟ ನಡೆಸಿದ ಮಿಗ್-21 ಯುದ್ಧ ವಿಮಾನವನ್ನು ಸೋವಿಯತ್ ವಾಯು ಸೇನೆ ಅದರ ನಿವೃತ್ತಿಯ ತನಕ, ಅಂದರೆ 1985ರ ತನಕ ಬಳಸಿತು.
• ತನ್ನ ಯಾಂತ್ರಿಕ ದೋಷಗಳು ಮತ್ತು ಅಪಘಾತಗಳಿಗೆ ಹೆಸರಾದ ಮಿಗ್-21 ಯುದ್ಧ ವಿಮಾನವನ್ನು 'ಹಾರಾಡುವ ಶವ ಪೆಟ್ಟಿಗೆ' ಎಂದೂ ಕರೆಯಲಾಗುತ್ತಿತ್ತು.
• ಭಾರತ ತನ್ನ ಬಳಿ ಇರುವ ಮಿಗ್-21 ವಿಮಾನಗಳನ್ನು ಬಹುತೇಕ 60 ವರ್ಷಗಳ ಸುದೀರ್ಘ ಸೇವೆಯ ಬಳಿಕ, 2025ರಲ್ಲಿ ನಿವೃತ್ತಿಗೊಳಿಸಲು ಆಲೋಚಿಸುತ್ತಿದೆ.
ಶೀತಲ ಸಮರದ ಕಾಲದಿಂದಲೂ ಬಳಕೆಯಲ್ಲಿರುವ, ಹಳೆಯ ಯುದ್ಧ ವಿಮಾನದ ಮಾದರಿಯಾಗಿರುವ ಮಿಗ್-21 ವಿಮಾನವನ್ನು ಇಂದಿಗೂ ಭಾರತೀಯ ವಾಯುಪಡೆ ಬಳಸುತ್ತಿದೆ. ಆದರೆ, ಭವಿಷ್ಯದ ಒಳಿತಿಗಾಗಿ ಭಾರತ ಈ ಯುದ್ಧ ವಿಮಾನಗಳನ್ನು 2025ರ ವೇಳೆಗೆ ನಿವೃತ್ತಿಗೊಳಿಸಲಿದೆ. ಈ ಮೂಲಕ, ಭಾರತೀಯ ವಾಯುಪಡೆಯಲ್ಲಿ ಮಿಗ್-21 ಯುದ್ಧ ವಿಮಾನದ ಸುದೀರ್ಘ, ಮತ್ತು ಸವಾಲುಗಳಿಂದ ಕೂಡಿದ ಅವಧಿಗೆ ಮುಕ್ತಾಯ ಹಾಡಲಿದೆ.
ಶ್ರೀಮಂತ ಮತ್ತು ಆಸಕ್ತಿಕರ ಪರಂಪರೆ: ಮಿಗ್-21 ಜಗತ್ತಿನ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸಲ್ಪಟ್ಟ ಯುದ್ಧ ವಿಮಾನದ ಮಾದರಿಗಳಲ್ಲಿ ಒಂದಾಗಿದ್ದು, 1959ರಿಂದ 1985ರ ತನಕ 11,000 ವಿಮಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಮಿಗ್-21ರ ಪಯಣ ಅತ್ಯಂತ ಆಸಕ್ತಿಕರವಾಗಿದ್ದು, ಆರಂಭದ ಸಮಯದ ಅತ್ಯಾಧುನಿಕ ಯುದ್ಧ ವಿಮಾನ ಎಂಬ ಬಿರುದಿನಿಂದ ಹಾರಾಡುವ ಶವ ಪೆಟ್ಟಿಗೆ ಎಂಬ ಹೆಸರಿನ ತನಕ ಸಾಗಿ ಬಂದಿತ್ತು. ಈಗ ಮಿಗ್-21 ವಿಮಾನವನ್ನು ವಾಯು ಸಮರದ ಹಳೆಯದಾದ ಪಳೆಯುಳಿಕೆ ಎಂದೇ ಪರಿಗಣಿಸಲಾಗಿದೆ. ಮಿಗ್-21 ಇಂದಿಗೂ ಜಾಗತಿಕವಾಗಿ ಕಾರ್ಯಾಚರಿಸುತ್ತಿರುವ ಅತ್ಯಂತ ಹಳೆಯ ಸೋವಿಯತ್ ಯುದ್ಧ ವಿಮಾನಗಳಲ್ಲಿ ಒಂದಾಗಿದ್ದು, ಅದಕ್ಕಿಂತಲೂ ಹಳೆಯದಾದ ಯುದ್ಧ ವಿಮಾನಗಳಾದ ಮಿಗ್-17 ಮತ್ತು ಮಿಗ್-19ಗಳು ಇಂದಿಗೂ ಹಾರಾಟ ನಡೆಸುತ್ತಿವೆ.
ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!
ಮಿಗ್-21 ತನ್ನ ಮೊದಲ ಹಾರಾಟವನ್ನು ಎರಡನೇ ಮಹಾಯುದ್ಧದ ಹತ್ತು ವರ್ಷಗಳ ಬಳಿಕ, ಅಂದರೆ 1955ರಲ್ಲಿ ನಡೆಸಿತು. ಇದನ್ನು ಸೋವಿಯತ್ ವಾಯುಪಡೆ 1959 ಅಧಿಕೃತವಾಗಿ ಸೇರ್ಪಡೆಗೊಳಿಸಿತು. ಮಿಗ್-21 ವಿಮಾನವನ್ನು 26 ವರ್ಷಗಳ ಸುದೀರ್ಘ ಕಾಲ ಉತ್ಪಾದಿಸಲಾಗಿದ್ದು, ಅಂತಿಮವಾಗಿ 1985ರಲ್ಲಿ ಅದರ ನಿರ್ಮಾಣವನ್ನು ಸ್ಥಗಿತಗೊಳಿಸಲಾಯಿತು. ಮಿಗ್-21 ವಿಮಾನದ ಚೀನೀ ಆವೃತ್ತಿಯಾದ ಚೆಂಗ್‌ದು ಜೆ-7 ವಿಮಾನ 2013ರ ತನಕ ಉತ್ಪಾದನೆಗೊಂಡಿತು. ಉತ್ತರ ಕೊರಿಯಾ ಅತ್ಯಂತ ಹಳೆಯದಾದ, ಕೊರಿಯನ್ ಯುದ್ಧದ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಮಿಗ್-19 ವಿಮಾನ ಮಾದರಿಗಳ ಜೊತೆಗೆ, ಮಿಗ್-21 ಮತ್ತು ಚೀನೀ ನಿರ್ಮಿತ ಚೆಂಗ್‌ದು ಜೆ-7 ವಿಮಾನಗಳನ್ನೂ ಬಳಸುತ್ತಿದೆ.
ಮಿಗ್-21 ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ 1963ರಲ್ಲಿ ಪರಿಚಯಿಸಲಾಯಿತು. ಆ ಸಮಯದಲ್ಲಿ ಮಿಗ್-21 ಒಂದು ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ ಎನಿಸಿಕೊಂಡು, 1970ರ ದಶಕದಿಂದ 2000ನೇ ದಶಕದ ಮಧ್ಯಭಾಗದ ತನಕ ಭಾರತೀಯ ವಾಯುಪಡೆಯ ಕೇಂದ್ರ ಸ್ಥಾನವನ್ನು ಹೊಂದಿತ್ತು. 1971ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಈ ವಿಮಾನ ಅತ್ಯಂತ ಮುಖ್ಯ ಪಾತ್ರ ವಹಿಸಿತ್ತು. ಇದರ ಅತ್ಯಂತ ನಿಖರ ಬಾಂಬ್ ದಾಳಿ ಸಾಮರ್ಥ್ಯ ಭಾರತೀಯ ವಾಯುಪಡೆಗೆ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ನಡೆಸಿ, ಹಲವಾರು ಶತ್ರು ವಿಮಾನಗಳು ಪತನಗೊಳ್ಳುವಂತೆ ಮಾಡಲು ನೆರವಾಗಿತ್ತು.
ಮಿಗ್-21ರ ವಿಶೇಷತೆಗಳು: ಮಿಕೋಯನ್ - ಗುರೆವಿಚ್ ಮಿಗ್-21 ಯುದ್ಧ ವಿಮಾನವನ್ನು ಒಂದು ಸೂಪರ್‌ಸಾನಿಕ್, ಎಲ್ಲ ಹವಾಮಾನಗಳಲ್ಲೂ ಕಾರ್ಯಾಚರಿಸುವ, ಶಾಸ್ತ್ರೀಯ ವಿನ್ಯಾಸ ಹೊಂದಿರುವ ಯುದ್ಧ ವಿಮಾನವಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಇದರ ಸಣ್ಣ ಗಾತ್ರದ ದೇಹವನ್ನು ಒಂದು ಸಶಕ್ತ ಇಂಜಿನ್ನಿನ ಸುತ್ತಲೂ ನಿರ್ಮಿಸಲಾಗಿತ್ತು. ವಿಮಾನಕ್ಕೆ ಡೆಲ್ಟಾ ವಿಂಗ್ ಮತ್ತು ಸ್ವೆಪ್ಟ್ ಬ್ಯಾಕ್ ವಿನ್ಯಾಸಗಳು ಇನ್ನಷ್ಟು ಪೂರಕವಾಗಿದ್ದವು. ವಿಮಾನದ ಸುವ್ಯವಸ್ಥಿತ ವಿಧಾನ ಮತ್ತು ಅತ್ಯಂತ ವೇಗದ ಕಾರ್ಯಾಚರಣೆಗಳನ್ನೂ ಸುಲಭವಾಗಿ ನಿರ್ವಹಿಸುವ ಸಾಮರ್ಥ್ಯಕ್ಕೆ ಇಂತಹ ವಿನ್ಯಾಸದ ಆಯ್ಕೆ ಪೂರಕವಾಗಿತ್ತು.
ಈಗಾಗಲೇ ಸಾಕಷ್ಟು ಹಳೆಯದಾಗಿದ್ದರೂ, ಮಿಗ್-21 ಯುದ್ಧ ವಿಮಾನ ತನ್ನ ಸರಳ ನಿಯಂತ್ರಣ ವ್ಯವಸ್ಥೆಗಳು, ಸಶಕ್ತ ಇಂಜಿನ್ ಮತ್ತು ಆಧುನಿಕ ಆಯುಧಗಳು ಮತ್ತು ಏವಿಯಾನಿಕ್ಸ್ ಕಾರಣಗಳಿಂದ ಇಂದಿಗೂ ಆಧುನಿಕ ವೈಮಾನಿಕ ಯುದ್ಧ ಸನ್ನಿವೇಶಗಳಲ್ಲಿ ಪ್ರಮುಖ ವಿಮಾನವಾಗಿಯೇ ಉಳಿದಿದೆ. ಈ ವೈಶಿಷ್ಟ್ಯಗಳು ವಿಮಾನದ ಸುದೀರ್ಘ ಬಾಳಿಕೆಗೆ ಕಾಣಿಕೆ ನೀಡಿದ್ದು, ಆಧುನಿಕ ವೈಮಾನಿಕ ಯುದ್ಧಗಳಿಗೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿವೆ. ಮಿಗ್-21ರ ಏರೋಡೈನಾಮಿಕ್ ಸಂರಚನೆ ಅದು ಸೂಪರ್‌ಸಾನಿಕ್ ವೇಗದಲ್ಲಿ ಸಾಗಲು ಮತ್ತು ವಿವಿಧ ರೀತಿಯ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅನುಕೂಲಕರವಾಗಿದೆ.
2000ನೇ ಇಸವಿಯಲ್ಲಿ, ಭಾರತೀಯ ವಾಯುಪಡೆ ತನ್ನ ಬಳಿ ಇದ್ದ ಮಿಗ್-21 ಟೈಪ್-75 ಯುದ್ಧ ವಿಮಾನಗಳ ಬಳಗವನ್ನು ಮಿಗ್-21 ಬೈಸನ್ ಆವೃತ್ತಿಗೆ ಅಭಿವೃದ್ಧಿ ಪಡಿಸಲು ನಿರ್ಧರಿಸಿತು. ಈ ಅಭಿವೃದ್ಧಿ, ವಿಮಾನದ ಕದನ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತಿತ್ತು. ಇದರಲ್ಲಿ ನೂತನ ರೇಡಾರ್ ವ್ಯವಸ್ಥೆ, ಆಧುನಿಕ ಆಯುಧಗಳು ಮತ್ತು ಒಂದು ಇಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳನ್ನು ಅಳವಡಿಸಲಾಗಿತ್ತು. ಬೈಸನ್ ಆವೃತ್ತಿ ಐದು ಹಾರ್ಡ್ ಪಾಯಿಂಟ್‌ಗಳನ್ನು ಹೊಂದಿದ್ದು, ಇವುಗಳು ಗಾಳಿಯಿಂದ ಗಾಳಿಗೆ ಮತ್ತು ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ಆಯುಧಗಳನ್ನು ಅಳವಡಿಸಲು ಸೂಕ್ತವಾಗಿದ್ದವು. ಅದರೊಡನೆ ಮಿಗ್-21 ವಿಮಾನ 23 ಎಂಎಂ ಕ್ಯಾನನ್ ಹೊಂದಿದ್ದು, ಭಾರತೀಯ ವಾಯುಪಡೆಯ ಬತ್ತಳಿಕೆಯ ಪ್ರಬಲ ಅಸ್ತ್ರವಾಗಿತ್ತು.
ಮಿಗ್-21 ಜಾಗತಿಕವಾಗಿ ಅತ್ಯಂತ ಕುಶಲವಾಗಿ ಚಲಿಸುವ ವಿಮಾನಗಳಲ್ಲಿ ಒಂದಾಗಿದೆ. ಸಾಂಪ್ರದಾಯಿಕ ನಿಯಂತ್ರಣ ವ್ಯವಸ್ಥೆಯ ಮೇಲೆ ಅವಲಂಬಿತವಾಗಿದ್ದರೂ, ಈ ವಿಮಾನ ಪ್ರತಿ ಸೆಕೆಂಡಿಗೆ 270 ಡಿಗ್ರಿಗಳಷ್ಟು ಉರುಳುವಿಕೆಯ ದರವನ್ನು ಹೊಂದಿದೆ. ಅದರೊಡನೆ, ಮಿಗ್-21ರ ಕಾರ್ಯಾಚರಣಾ ವೇಗವೂ ಅತ್ಯಂತ ವ್ಯಾಪಕವಾಗಿದ್ದು, ಇದು ಪ್ರತಿ ಗಂಟೆಗೆ 300 ಕಿಲೋಮೀಟರ್‌ಗಿಂತ ಕಡಿಮೆ ವೇಗದಿಂದ, ಪ್ರತಿ ಗಂಟೆಗೆ 1,300 ಕಿಲೋಮೀಟರ್‌ಗಳಷ್ಟು ವೇಗದಲ್ಲಿ ಸಾಗಿ ಕಾರ್ಯಾಚರಣೆ ನಡೆಸಬಲ್ಲದು. ಮಿಗ್-21 ಅತ್ಯುತ್ತಮ ಥ್ರಸ್ಟ್ ಟು ವೆಯ್ಟ್ (ಒತ್ತಡದಿಂದ ತೂಕ) ಅನುಪಾತ ಹೊಂದಿದ್ದು, ಅತ್ಯಂತ ಸನಿಹದ ಕಾದಾಟಗಳಿಗೂ ವಿಮಾನ ಸೂಕ್ತವಾಗಿದೆ. ಈ ಎಲ್ಲ ಸಾಧ್ಯತೆಗಳ ಕಾರಣದಿಂದಲೇ ಮಿಗ್-21 ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಉನ್ನತ ಸ್ಥಾನ ಸಂಪಾದಿಸಿತು.
ಭಾರತೀಯ ವಾಯುಪಡೆಯ ಸವಾಲುಗಳು ಮತ್ತು ವೈವಿಧ್ಯತೆಗಳು: ಸಾಂಪ್ರದಾಯಿಕತೆ ಮತ್ತು ಆಧುನೀಕತೆಯ ನಡುವಿನ ಸಮತೋಲನ: ಇಂದು ಮಿಗ್-21 ಯುದ್ಧ ವಿಮಾನ ಅತ್ಯಂತ ಹಳೆಯ ಮಿಲಿಟರಿ ಉಪಕರಣ ಎಂದು ಪರಿಗಣಿಸಲ್ಪಟ್ಟಿದ್ದು, ಜಾಗತಿಕವಾಗಿ ಬಹಳಷ್ಟು ವಾಯು ಸೇನೆಗಳು ಇದರ ಬಳಕೆ ನಿಲ್ಲಿಸಿವೆ. ಅಂದಿನ ಸೋವಿಯತ್ ವಾಯುಪಡೆ ಮಿಗ್-21ನ್ನು ನಿವೃತ್ತಿಗೊಳಿಸಿದ್ದು, ಈ ವಿಮಾನಗಳು ರಷ್ಯನ್ ವಾಯುಪಡೆಗೆ ಪ್ರವೇಶ ಪಡೆಯಲಿಲ್ಲ. ಭಾರತೀಯ ವಾಯುಸೇನೆಯ ಮಿಗ್-21 ವಿಮಾನಗಳನ್ನು ಬದಲಾಯಿಸಲು ವ್ಯವಸ್ಥಿತವಲ್ಲದ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಇಂದಿಗೂ ವಾಯುಪಡೆ ಸಣ್ಣ ಸಂಖ್ಯೆಯಲ್ಲಿ ಮಿಗ್-21 ಯುದ್ಧ ವಿಮಾನಗಳನ್ನು ಬಳಸುತ್ತಿದೆ.
ಗಮನಾರ್ಹ ವಿಚಾರವೆಂದರೆ, ಭಾರತೀಯ ವಾಯುಪಡೆಯ ಬಳಿ ಅದರ ಉದ್ದೇಶಿತ ಸಂಖ್ಯೆಗಿಂತ ಕಡಿಮೆ ಯುದ್ಧ ವಿಮಾನಗಳಿವೆ. 42 ಸ್ಕ್ವಾಡ್ರನ್‌ಗಳನ್ನು ಹೊಂದಬೇಕೆಂಬ ಅಧಿಕೃತ ಗುರಿ ಇದ್ದರೂ, ಭಾರತೀಯ ವಾಯುಪಡೆಯ ಬಳಿ ಈಗ ಬಹುತೇಕ 31 ಸ್ಕ್ವಾಡ್ರನ್‌ಗಳು ಮಾತ್ರವೇ ಇವೆ. ಆದರೆ, ಈ 31 ಸ್ಕ್ವಾಡ್ರನ್‌ಗಳ ಸಂಯೋಜನೆಯಂತೂ ಜಗತ್ತಿನಲ್ಲೇ ಅತ್ಯಂತ ಆಕರ್ಷಕವಾಗಿದೆ. ಈ ಸ್ಕ್ವಾಡ್ರನ್‌ಗಳು ವಿಶಾಲ ಶ್ರೇಣಿಯ ಯುದ್ಧ ವಿಮಾನಗಳನ್ನು ಹೊಂದಿದ್ದು, ಅವುಗಳಲ್ಲಿ ಸಮಕಾಲೀನ ರಷ್ಯನ್ ಯುದ್ಧ ವಿಮಾನಗಳಾದ ಸು-30ಎಂಕೆಐ ಮತ್ತು ಫ್ರೆಂಚ್ ಡಸಾಲ್ಟ್ ರಫೇಲ್ ಬಹುಪಾತ್ರಗಳ ಯುದ್ಧ ವಿಮಾನಗಳು, ಬಿಎಇ ಹಾಕ್ ಮತ್ತು ಹಳೆಯದಾದ ಮಿಗ್-21 ಯುದ್ಧ ವಿಮಾನಗಳು ಸೇರಿವೆ. ಅತ್ಯಂತ ಹಳೆಯ ತಲೆಮಾರಿನ ಯುದ್ಧ ವಿಮಾನಗಳಿಂದ ಹೊಸ ತಲೆಮಾರಿನ ವಿಮಾನಗಳ ತನಕ ಇರುವ ತಾಂತ್ರಿಕ ವೈವಿಧ್ಯತೆಗಳು ವಿಶಿಷ್ಟವಾಗಿವೆ.
ಭಾರತದ ಮುಂದೆ ಈಗ ತನ್ನ ಹಳೆಯದಾಗಿರುವ ಮಿಗ್-21 ರೀತಿಯ ಯುದ್ಧ ವಿಮಾನಗಳ ಆಧುನೀಕರಿಸುವ ಅಥವಾ ಬದಲಾಯಿಸುವ ಗುರುತರ ಜವಾಬ್ದಾರಿ ಹೊಂದಿದ್ದು, ಅದರೊಡನೆ ತನ್ನ ಯುದ್ಧ ವಿಮಾನಗಳ ಸ್ಕ್ವಾಡ್ರನ್‌ಗಳನ್ನು 42ಕ್ಕೆ ಏರಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಭಾರತ ಅತ್ಯಂತ ವಿಶಾಲ ದೇಶವಾಗಿದ್ದು, ತನ್ನ ವಾಯು ಪ್ರದೇಶವನ್ನು ಸಮರ್ಥವಾಗಿ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಯುದ್ಧ ವಿಮಾನಗಳ ಅವಶ್ಯಕತೆಯಿದೆ. ಪ್ರಸ್ತುತ ಭಾರತದ ಬಳಿ ಅಂದಾಜು 40 ಮಿಗ್-21 ಯುದ್ಧ ವಿಮಾನಗಳಿದ್ದು, ಇವುಗಳನ್ನು ಹಲವು ದಶಕಗಳಿಂದ ಬಳಸಲಾಗಿದೆ. ಈ ವಿಮಾನಗಳನ್ನು ಮೂರನೇ ತಲೆಮಾರಿನ ಯುದ್ಧ ವಿಮಾನಗಳ ಸಾಮರ್ಥ್ಯಕ್ಕೆ ಸರಿಹೊಂದುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಯುದ್ಧ ವಿಮಾನಗಳ ವಿಕಾಸ ಮೊದಲನೇ ತಲೆಮಾರು: (1940 - 1950): ಇವು ಜಗತ್ತಿನ ಮೊದಲ ಯುದ್ಧ ವಿಮಾನಗಳು. ಇವುಗಳು ನೇರವಾದ ರೆಕ್ಕೆಗಳು, ಅತ್ಯಂತ ಮೂಲಭೂತ ರೀತಿಯ ಇಂಜಿನ್‌ಗಳನ್ನು ಹೊಂದಿದ್ದು, ಗನ್‌ಗಳನ್ನು ತಮ್ಮ ಮುಖ್ಯ ಆಯುಧವಾಗಿಸಿದ್ದವು. ಇವುಗಳು ವಿಮಾನಗಳಲ್ಲಿ ಜೆಟ್ ಇಂಜಿನ್ ಇರಿಸಿ ನಡೆಸಿದ ಪ್ರಯೋಗದ ರೀತಿಯಲ್ಲಿದ್ದವು. (ಉದಾಹರಣೆ: ಎಫ್-86 ಸೇಬರ್, ಮಿಗ್-15)
ಎರಡನೇ ತಲೆಮಾರು: (1950 - 1960): ಹೆಚ್ಚು ವೇಗವಾದ, ಹೆಚ್ಚು ಉತ್ತಮವಾದ ವಿಮಾನಗಳು! ಎರಡನೇ ತಲೆಮಾರಿನ ಯುದ್ಧ ವಿಮಾನಗಳು ಹೆಚ್ಚಿನ ವೇಗದಲ್ಲಿ ಚಲಿಸುವ ಸಲುವಾಗಿ ಸ್ವೆಪ್ಟ್ ಬ್ಯಾಕ್ ವಿನ್ಯಾಸ ಹೊಂದಿದ್ದವು. ಅದರೊಡನೆ ಗುರಿಗಳನ್ನು ಗುರುತಿಸಲು ರೇಡಾರ್‌ಗಳನ್ನು ಅಳವಡಿಸಲಾಗಿತ್ತು. ಈ ವಿಮಾನಗಳು ಕೇವಲ ಗನ್‌ಗಳ ಬದಲಿಗೆ ಕ್ಷಿಪಣಿಗಳನ್ನು ಬಳಸಲಾರಂಭಿಸಿದ್ದವು. (ಉದಾಹರಣೆ: ಎಫ್-104 ಸ್ಟ್ರೈಟ್ ಫೈಟರ್, ಮಿಗ್-21)
ಮೂರನೇ ತಲೆಮಾರು: (1960 - 1970): ಇನ್ನೂ ಹೆಚ್ಚು ಆಧುನಿಕ ವಿಮಾನಗಳು! ಈ ವಿಮಾನಗಳು ಹಾರಾಡುವ ಸಂದರ್ಭದಲ್ಲೇ ತಮ್ಮ ರೆಕ್ಕೆಗಳ ಆಕಾರಗಳನ್ನು ಬದಲಾಯಿಸಬಲ್ಲವಾಗಿದ್ದವು. ಅದರೊಡನೆ, ಅತ್ಯಂತ ಉತ್ತಮವಾದ ರೇಡಾರ್‌ಗಳು ಮತ್ತು ಸಾಕಷ್ಟು ದೂರದಿಂದಲೇ ದಾಳಿ ನಡೆಸಬಲ್ಲ ಕ್ಷಿಪಣಿಗಳನ್ನು ಹೊಂದಿದ್ದವು. (ಉದಾಹರಣೆ: ಎಫ್-4 ಫ್ಯಾಂಟಮ್, ಮಿಗ್-23)
ಮಿಗ್-21: ಹಾರುವ ಶವ ಪೆಟ್ಟಿಗೆ ಎಂಬ ಹೆಸರು!: ಮಿಗ್-21 ಯುದ್ಧ ವಿಮಾನಗಳು ಕೇವಲ ಹಳೆಯದಾದ, ಪುರಾತನವಾದ, ಆದರೆ ಇಂದಿಗೂ ಚಾಲ್ತಿಯಲ್ಲಿರುವ ವಿಮಾನಗಳು ಮಾತ್ರವಲ್ಲ. ಈ ಯುದ್ಧ ವಿಮಾನಗಳು ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಮತ್ತು ಅತ್ಯಧಿಕ ಪತನದ ದರವನ್ನು ಹೊಂದಿವೆ. ಈ ಕಾರಣದಿಂದಲೇ ಮಿಗ್-21 ಯುದ್ಧ ವಿಮಾನಗಳಿಗೆ 'ಹಾರಾಡುವ ಶವ ಪೆಟ್ಟಿಗೆ' ಎಂಬ ಅಡ್ಡ ಹೆಸರೂ ಲಭಿಸಿದೆ. ಭಾರತದಲ್ಲಿನ ಸೇವಾವಧಿಯಲ್ಲಿ ಮಿಗ್-21 ವಿಮಾನಕ್ಕೆ ಇನ್ನೊಂದು ಕೆಟ್ಟ ಹೆಸರೂ ಲಭಿಸಿದ್ದು, ಅದನ್ನು 'ವಿಡೋ ಮೇಕರ್' (ವಿಧವೆಯರ ಸೃಷ್ಟಿಕರ್ತ) ಎಂದೂ ಕರೆಯಲಾಗಿದೆ.
ಭಾರತದಲ್ಲಿ 1966 ಮತ್ತು 1984ರ ನಡುವೆ ನಿರ್ಮಿಸಲಾದ 840 ಮಿಗ್-21 ಯುದ್ಧ ವಿಮಾನಗಳ ಪೈಕಿ, ಬಹುತೇಕ ಅರ್ಧದಷ್ಟು, ಅಂದರೆ ಅಂದಾಜು 400 ಮಿಗ್-21 ವಿಮಾನಗಳು ಪತನಗೊಂಡಿವೆ. ಈ ಅವಘಡಗಳಿಗೆ ಅಂದಾಜು 200 ಪೈಲಟ್‌ಗಳು ಮತ್ತು ಬಹುತೇಕ 60 ನಾಗರಿಕರು ಸಾವಿಗೀಡಾಗಿದ್ದಾರೆ. ಅತ್ಯಂತ ಇತ್ತೀಚಿನ ಅಪಘಾತ 2023ರ ಮೇ 8ರಂದು ಸಂಭವಿಸಿತ್ತು. ಅದರಲ್ಲೂ, ಮಿಗ್-21 ಯುದ್ಧ ವಿಮಾನಗಳನ್ನು ಚಲಾಯಿಸುವ ಪೈಲಟ್‌ಗಳು ಅನನುಭವಿಗಳಲ್ಲ. ಅವರ ಪೈಕಿ ಹೆಚ್ಚಿನ ಪೈಲಟ್‌ಗಳು ಅತ್ಯುತ್ತಮ ತರಬೇತಿ ಹೊಂದಿರುವ, ಅನುಭವಿ ಪೈಲಟ್‌ಗಳು. ಅದರೊಡನೆ, ಭಾರತದಲ್ಲಿರುವ ಬಹುಪಾಲು ಮಿಗ್-21 ಯುದ್ಧ ವಿಮಾನಗಳನ್ನು ಪರವಾನಗಿಯಡಿ ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿದೆ.
ಇತ್ತೀಚಿನ ದಿನಗಳಲ್ಲೂ ಭಾರತೀಯ ವಾಯುಪಡೆ ಅಪಘಾತಗಳನ್ನು ಎದುರಿಸುವುದು ಮುಂದುವರಿದಿದೆ. ರಾಜಸ್ಥಾನದಲ್ಲಿ ಜುಲೈ 28, 2022ರಂದು ನಡೆದ ಅವಘಡದಲ್ಲಿ ಇಬ್ಬರು ಪೈಲಟ್‌ಗಳು ಪ್ರಾಣ ಕಳೆದುಕೊಂಡಿದ್ದರು. ಮೇ 8, 2023ರಂದು ಸಂಭವಿಸಿದ ಘಟನೆಯಲ್ಲಿ ಪೈಲಟ್ ವಿಮಾನದಿಂದ ಜಿಗಿದು ಜೀವ ಉಳಿಸಿಕೊಳ್ಳಬೇಕಾಗಿ ಬಂತು. ಆದರೆ ದುರದೃಷ್ಟವಶಾತ್ ವಿಮಾನ ಭೂಮಿಗೆ ಬಿದ್ದಾಗ ಇಬ್ಬರು ನಾಗರಿಕರು ಸಾವಿಗೀಡಾದರು. 2010ರ ಬಳಿಕ, 20ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಪತನಗೊಂಡಿವೆ.
2025ರಲ್ಲಿ ನಿರ್ಧರಿತವಾದ ನಿವೃತ್ತಿ: ಪ್ರತಿಯೊಂದು ಮಿಗ್-21 ಸ್ಕ್ವಾಡ್ರನ್ ಸಹ 20 ವಿಮಾನಗಳನ್ನು ಹೊಂದಿರುತ್ತದೆ. ಇತ್ತೀಚಿನ ವರದಿಗಳ ಪ್ರಕಾರ, ಕೊನೆಯದಾಗಿ ಉಳಿದಿದ್ದ ಮೂರು ಮಿಗ್-21 ಸ್ಕ್ವಾಡ್ರನ್‌ಗಳ ಪೈಕಿ ಒಂದನ್ನು ನಿವೃತ್ತಿಗೊಳಿಸಲಾಗಿದೆ. ಅಂದರೆ, ಈಗ ಭಾರತದ ಬಳಿ ಕೇವಲ ಎರಡು ಕಾರ್ಯಾಚರಿಸುವ ಮಿಗ್-21 ಸ್ಕ್ವಾಡ್ರನ್‌ಗಳು ಉಳಿದಿವೆ. ಅಂತಿಮವಾದ ಎರಡು ಸ್ಕ್ವಾಡ್ರನ್‌ಗಳು 2025ರಲ್ಲಿ ನಿವೃತ್ತಿ ಹೊಂದಲಿವೆಯೆಂದು ನಿಗದಿಪಡಿಸಲಾಗಿದ್ದು, ಅಲ್ಲಿಗೆ ಭಾರತೀಯ ವಾಯುಪಡೆಯಲ್ಲಿ ಮಿಗ್-21ರ ಸುದೀರ್ಘವಾದ, ಮತ್ತು ಗೊಂದಲಮಯವಾದ ಅವಧಿ ಮುಕ್ತಾಯ ಕಾಣಲಿದೆ. 1985ರಲ್ಲಿ ಸೋವಿಯತ್ ಒಕ್ಕೂಟ ಮಿಗ್-21 ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸಿದ ನಾಲ್ಕು ದಶಕಗಳ ಬಳಿಕ ಭಾರತ ತನ್ನ ವಿಮಾನಗಳನ್ನು ನಿವೃತ್ತಿಗೊಳಿಸುತ್ತಿದೆ.
ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ: ಲೇಖಕ ಗಿರೀಶ್ ಲಿಂಗಣ್ಣ ಬರಹ
ಪ್ರಸ್ತುತ ಈ ವಿಮಾನಗಳನ್ನು ಪ್ರತಿಬಂಧಕ (ಇಂಟರ್‌ಸೆಪ್ಟರ್) ವಿಮಾನಗಳಾಗಿ ಬಳಸುತ್ತಿದ್ದು, ಅವುಗಳು ಸೀಮಿತ ಚಟುವಟಿಕೆಗಳನ್ನು ಹೊಂದಿವೆ. ಯುದ್ಧ ವಿಮಾನಗಳ ರೂಪದಲ್ಲಿ ಅವುಗಳನ್ನು ಕೇವಲ ತರಬೇತಿಗೆ ಮಾತ್ರವೇ ಬಳಸಲಾಗುತ್ತಿದೆ. ಭಾರತ ಬಹಳಷ್ಟು ವರ್ಷಗಳಿಂದ ಸ್ವದೇಶೀ ಯುದ್ಧ ವಿಮಾನ ನಿರ್ಮಾಣ ಸಾಮರ್ಥ್ಯವನ್ನು ಸಾಧಿಸಲು ಪ್ರಯತ್ನ ನಡೆಸುತ್ತಾ ಬಂದಿದೆ. ಆದರೂ, ಭಾರತದ ಸ್ವದೇಶೀ ಪ್ರಯತ್ನವಾದ ತೇಜಸ್ ಯೋಜನೆ ಸಾಕಷ್ಟು ಹಿಂದೇಟುಗಳು ಮತ್ತು ವಿವಾದಾತ್ಮಕ ಇತಿಹಾಸವನ್ನು ಹೊಂದಿದೆ. ಇದರ ಪರಿಣಾಮವಾಗಿ, ಭಾರತ ತಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಕಾಲ ಹಳೆಯದಾದ ಯುದ್ಧ ವಿಮಾನಗಳನ್ನು ಅವಲಂಬಿಸುವಂತಾಗಿದೆ. ಭಾರತ ತನ್ನ ವಾಯು ಸೇನೆಯಲ್ಲಿರುವ ಮಿಗ್-21 ಯುದ್ಧ ವಿಮಾನಗಳನ್ನು ನಿವೃತ್ತಿಗೊಳಿಸಿದರೂ, ಈ ವಿಮಾನಗಳು ಇತರ ದೇಶಗಳ ವಾಯು ಸೇನೆಗಳಲ್ಲಿನ ಕಾರ್ಯಾಚರಣೆ ಮುಂದುವರಿಸಲಿವೆ.