ವಾಷಿಂಗ್ಟನ್(ನ.08): ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ ಜೋ ಬೈಡೆನ್ 'ದೇಶ ಹಾಗೂ ಸಮಾಜವನ್ನು ತಾನು ಒಡೆಯುವುದಿಲ್ಲ. ಬದಲಾಗಿ ಅದನ್ನು ಒಗ್ಗೂಡಿಸುತ್ತೇನೆ. ನೀವೆಲ್ಲರೂ ಸ್ಪಷ್ಟ ಬಹುಮತ ನೀಡಿದ್ದೀರಿ. ಇದು ಅಮೆರಿಕದ ನೈತಿಕ ಜಯ' ಎಂದಿದ್ದಾರೆ. 

ಹೌದು ಬೈಡೆನ್‌ರನ್ನು ಅಮೆರಿಕ ಅಧ್ಯಕ್ಷರನ್ನಾಗಿ ಘೋಷಿಸಿದ ಬಳಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಓಡೋಡುತ್ತಲೇ ವೇದಿಕೆ ಏರಿದ ಬೈಡೆನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇನ್ನು ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆಗ ಬೈಡೆನ್‌ಗೆ 78 ವರ್ಷ ತುಂಬಲಿದ್ದು, ಅವರು ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. 

ತಾನು ಅಧ್ಯಕ್ಷ ಹುದ್ದೆಗೇರಲು ತನ್ನ ಪತ್ನಿ ಹಾಗೂ ಕುಟುಂಬದ ಸಹಕಾರ ಬಹಳಷ್ಟಿದೆ ಎಂದ ಬೈಡೆನ್ ಇವರೆಲ್ಲರಿಗೂ ನಾನು ಅಭಾರಿ ಎಂದಿದ್ದಾರೆ. 

ಟ್ರಂಪ್ ಬೆಂಬಲಿಗರಿಗೆ ಸಂದೇಶ:

ಈ ಕಾರ್ಯಕ್ರಮದಲ್ಲಿ ಟ್ರಂಪ್ ಬೈಡೆನ್ ಹಾಗೂ ಅವರ ಬೆಂಬಲಿಗರಿಗೂ ಸಂದೇಶ ನೀಡಿದ್ದಾರೆ. ಯಾರೆಲ್ಲಾ ಟ್ರಂಪ್‌ಗೆ ಮತ ನೀಡಿದ್ದಾರೋ ಅವರೆಲ್ಲರಿಗೂ ಇಂದು ನಿರಾಸೆಯಾಗಿರಬಹುದು. ನಾನು ಕೂಡಾ ಹಲವಾರು ಬಾರಿ ಸೋಲನುಭವಿಸಿದ್ದೇನೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯವಾಗಿದ್ದು, ಇಲ್ಲಿ ಎಲ್ಲರಿಗೂ ಅವಕಾಶ ಸಿಗುತ್ತದೆ. ಬನ್ನಿ ನಾವು ದ್ವೇಷವನ್ನು ಶಮನಗೊಳಿಸೋಣ. ಪರಸ್ಪರರು ಆಡುವ ಮಾತುಗಳನ್ನು ಕೇಳಿಸಿಕೊಂಡು ಮುಂದುವರೆಯೋಣ. ವಿರೋಧಿಗಳನ್ನು ಶತ್ರುಗಳಂತೆ ಕಾಣುವುದನ್ನು ನಿಲ್ಲಿಸೋಣ. ಯಾಕೆಂದರೆ ನಾವು ಅಮೆರಿಕನ್ನರು. ಪ್ರತಿಯೊಂದಕ್ಕೂ ತನ್ನದೇ ಆದ ಸಮಯವಿದೆ ಎಂದು ಬೈಬಲ್ ಕಲಿಸುತ್ತದೆ. ಈಗ ಗಾಯ ತುಂಬುವ ಸಮಯ ಬಂದಿದೆ.