ವಾಷಿಂಗ್ಟನ್(ಜ.16)‌: ಭೂಮಿಯಲ್ಲಷ್ಟೇ ಅಲ್ಲ, ಬಾಹ್ಯಾಕಾಶದಲ್ಲೂ ಈಗ ಪ್ಲಾಸ್ಟಿಕ್‌ ತ್ಯಾಜ್ಯಗಳು ತುಂಬಿಕೊಂಡಿವೆ. ಮಾನವರು ಹಾರಿ ಬಿಟ್ಟಬಾಹ್ಯಾಕಾಶ ಸಂಶೋಧನೆ ಸಾಧನಗಳು, ಉಪಗ್ರಹಗಳು, ನಿಷ್ಕಿ್ರಯಗೊಂಡ ಉಪಗ್ರಹ ಪಳೆಯುಳಿಕೆಗಳು ಸೇರಿದಂತೆ ಸುಮಾರು 6 ಸಾವಿರ ಟನ್‌ ತ್ಯಾಜ್ಯಗಳು ಬಾಹ್ಯಾಕಾಶದಲ್ಲಿ ಶೇಖರಣೆಗೊಂಡಿದೆ. ಒಂದು ವೇಳೆ ಅವು ಬಾಹ್ಯಾಕಾಶಲ್ಲಿಯೇ ಉಳಿದುಕೊಂಡರೆ ಭವಿಷ್ಯದ ಯೋಜನೆಗಳಿಗೆ ತೊಡಕಾಗಲಿದೆ.

ಇತ್ತೀಚಿನ ಅಧ್ಯಯನಗಳು ಹಾಗೂ ತಜ್ಞರ ಅಂದಾಜಿನ ಪ್ರಕಾರ, 12.8 ಕೋಟಿ ತುಣುಕುಗಳು ಬಾಹ್ಯಾಕಾಶದಲ್ಲಿ ಸೇರಿಕೊಂಡಿವೆ. ಇದರಲ್ಲಿ 1 ಮಿ.ಮೀಟರ್‌ನಿಂದ 10 ಸೆಂ.ಮೀ ಗಾತ್ರದ ಅವಶೇಷಗಳು ಸೇರಿವೆ. 2018ರಲ್ಲಿ ನಾಸಾ ಮಾಡಿರುವ ಅಂದಾಜಿನ ಪ್ರಕಾರ, ಬಾಹ್ಯಾಕಾಶದಲ್ಲಿ 5 ಲಕ್ಷಕ್ಕೂ ಅಧಿಕ ನಿಷ್ಕಿ್ರಯ ಉಪಗ್ರಹಗಳ ಅವಶೇಷಗಳು ಈಗಲೂ ಭೂಮಿಯನ್ನು ಸುತ್ತುತ್ತಿವೆ. ಈ ಅವಶೇಷಗಳಿಂದ ಭೂಮಿಗೆ ಇದುವರೆಗೆ ಯಾವುದೇ ಗಂಭೀರ ಹಾನಿ ಆಗಿಲ್ಲ. ಆದರೆ, 2015ರಲ್ಲಿ ರಷ್ಯಾದ ನಿಷ್ಕಿ್ರಯ ಉಪಗ್ರಹವೊಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಪ್ಪಳಿಸುವ ಅಪಾಯ ಎದುರಾಗಿತ್ತು. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉಪಗ್ರಹಗಳು ಉಡಾವಣೆ ಆಗಲಿರುವ ಕಾರಣ. ಅವು ಬಾಹ್ಯಾಕಾಶದಲ್ಲಿ ಒಂದಕ್ಕೊಂದು ಅಪ್ಪಳಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಪರಿಹಾರ ಏನು?:

ತಜ್ಞರ ಪ್ರಕಾರ, ಬಾಹ್ಯಾಕಾಶ ತ್ಯಾಜ್ಯಗಳು ಹಲವು ವರ್ಷಗಳ ಬಳಿಕ ತಾವಾಗಿಯೇ ಆಯುಷ್ಯ ಕಳೆದುಕೊಂಡು ಅವಸಾನ ಹೊಂದಲಿವೆ. ಆದರೆ, ಸದ್ಯದ ಭವಿಷ್ಯದಲ್ಲಿ ಬಾಹ್ಯಾಕಾಶ ತ್ಯಾಜ್ಯಗಳ ನಿವಾರಣೆಗೆ ವಿಶ್ವದ ನಂ.1 ಉದ್ಯಮಿ ಎಲಾನ್‌ ಮಸ್ಕ್‌ ಬಳಿ ಪರಿಹಾರವಿದೆ. ಎಲಾನ್‌ ಮಾಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಸಂಸ್ಥೆ 2018ರಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಸರಕುಗಳನ್ನು ಪೂರೈಸಲು ಕಳುಹಿಸಿದ್ದ ಪಾಲ್ಕನ್‌-9 ರಾಕೆಟ್‌ ಪ್ರಯೋಗಿಕವಾಗಿ ‘ಸ್ಪೇಸ್‌ ಸ್ವೀಪರ್‌’ (ಬಾಹ್ಯಾಕಾಶ ಕಸ ಸಂಗ್ರಹ ಸಾಧನ)ವನ್ನು ಬಳಕೆ ಮಾಡಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಸ್ಪೇಸ್‌ ಸ್ವೀಪರ್‌ಗಳನ್ನು ಬಳಸಿ ಬಾಹ್ಯಾಕಾಶ ತ್ಯಾಜ್ಯಗಳನ್ನು ಸಂಗ್ರಹಿಸಲು ಸಾಧ್ಯವಿದೆ ಎಂದು ಎಲಾನ್‌ ಮಾಸ್ಕ್‌ ಪ್ರತಿಪಾದಿಸಿದ್ದಾರೆ.

ಅಂಕಿ-ಅಂಶ

- 6 ಸಾವಿರ ಟನ್‌: ಬಾಹ್ಯಾಕಾಶದಲ್ಲಿ ಶೇಖರಣೆ ಆಗಿರುವ ತ್ಯಾಜ್ಯದ ಪ್ರಮಾಣ

- 12.8 ಕೋಟಿ ತುಣುಕು: ವ್ಯರ್ಥವಾಗಿ ಸೇರಿಕೊಂಡಿರುವ ಅವಶೇಷಗಳು

- 5 ಲಕ್ಷ: ಜೀವಿತಾವಧಿ ಮುಗಿದು ನಿಷ್ಕಿ್ರಯಗೊಂಡ ಉಪಗ್ರಹಗಳ ಸಂಖ್ಯೆ