ಎಟಿಸಿ ಹಲವಾರು ಬಾರಿ ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಆಟೋಪೈಲಟ್ ಸಂಪರ್ಕ ಕಡಿತಗೊಂಡ ನಂತರ ಜೋರಾಗಿ ಮೊಳಗಿದ ಡಿಸ್ಕನೆಕ್ಟ್‌ ವೈಲರ್ ಶಬ್ದದಿಂದ ಪೈಲಟ್‌ಗಳು ಎಚ್ಚರಗೊಂಡಿದ್ದಾರೆ. 

ನವದೆಹಲಿ (ಆ.19): ವಿಮಾನ ಹಾರಾಟದ ವೇಳೆ ಪೈಲಟ್‌ಗಳು ಎಚ್ಚರವಿದ್ದಾಗಲೇ ಅಪಘಾತವಾಗುತ್ತವೆ. ಅಂಥದ್ದರಲ್ಲಿ, ಇಥಿಯೋಪಿಯಾದಲ್ಲಿ ವಿಮಾನ ಅಂದಾಜು 37 ಸಾವಿರ ಫೀಟ್‌ ಎತ್ತರದಲ್ಲಿ ಹಾರುವಾಗಲೇ ವಿಮಾನದ ಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿದ ಪ್ರಸಂಗ ನಡೆದಿದೆ. ಅಂದಾಜು 25 ನಿಮಿಷಗಳ ಕಾಲ ಇವರು ನಿದ್ರೆ ಮಾಡಿದ್ದು ಮಾತ್ರವಲ್ಲದೆ, ನಿಗದಿತ ಲ್ಯಾಂಡಿಂಗ್‌ ಅನ್ನು ಕೂಡ ಮಿಸ್‌ ಮಾಡಿದ್ದಾರೆ. ಆಟೋಪೈಲಟ್ ಸಂಪರ್ಕ ಕಡಿತಗೊಂಡ ನಂತರ ಜೋರಾಗಿ ಮೊಳಗಿದ ಡಿಸ್ಕನೆಕ್ಟ್‌ ವೈಲರ್ ಶಬ್ದದಿಂದ ಪೈಲಟ್‌ಗಳು ಎಚ್ಚರಗೊಂಡು ವಿಮಾನವನ್ನು ಕೆಳಗಿಳಿಸಿದ್ದಾರೆ ಎಂದು ಏವಿಯೇಷನ್‌ ಹೆರಾಲ್ಡ್‌ ವರದಿ ಮಾಡಿದೆ. ಇಥಿಯೋಪಿಯನ್‌ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೈಲಟ್‌ಗಳು ಸುಡಾನ್‌ನ ಖಾರ್ಟೂಮ್‌ನಿಂದ ಇಥಿಯೋಪಿಯಾ ರಾಜಧಾನಿ ಆಡಿಸ್‌ ಅಬಾಬಾಗೆ ವಿಮಾನ ಹಾರಾಟ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸೋಮವಾರ ಈ ಘಟನೆ ವರದಿಯಾಗಿದೆ. ಫ್ಲೈಟ್ ಮ್ಯಾನೇಜ್‌ಮೆಂಟ್ ಕಂಪ್ಯೂಟರ್ (ಎಫ್‌ಎಂಸಿ) ಸ್ಥಾಪಿಸಿದ ಮಾರ್ಗಕ್ಕೆ ಅನುಗುಣವಾಗಿ ಇಟಿ343 ವಿಮಾನವು ಆಟೋಪೈಲಟ್‌ನಲ್ಲಿದ್ದಾಗ ಪೈಲಟ್‌ಗಳು ನಿದ್ರೆ ಮಾಡಿದ್ದರು ಎಂದು ಹೇಳಲಾಗಿದೆ. ವಿಮಾನ ನಿಲ್ದಾಣವನ್ನು ಸಮೀಪಿಸಿದ ನಂತರ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆಯನ್ನು ನೀಡಿದೆ. ಇದರ ನಡುವೆ ತನಗೆ ನಿಗದಿಪಡಿಸಿದ ಸಮಯದಲ್ಲಿ ಹಾಗೂ ಅದಕ್ಕಾಗಿ ಗೊತ್ತುಪಡಿಸಿದ ರನ್‌ವೇಯಲ್ಲಿ ಇಳಿಯುವುದನ್ನೂ ಕೂಡ ತಪ್ಪಿಸಿಕೊಂಡಿದೆ.

ಎಟಿಸಿ ಪ್ರಯತ್ನ ವಿಫಲ: ಎಟಿಸಿ ಸಾಕಷ್ಟು ಬಾರಿ ವಿಮಾನದ ಪೈಲಟ್‌ಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ, ಅದರಲ್ಲಿ ಯಶ ಕಾಣಲಿಲ್ಲ. ಆಟೋಪೈಲಟ್ ಸಂಪರ್ಕ ಕಡಿತಗೊಂಡ ನಂತರ ಜೋರಾಗಿ ಮೊಳಗಿದ ಡಿಸ್ಕನೆಕ್ಟ್‌ ವೈಲರ್ ಶಬ್ದದಿಂದ ಪೈಲಟ್‌ಗಳು ಎಚ್ಚರಗೊಂಡು, ವಿಮಾನವನ್ನು ಕೆಳಗಿಳಿಸುವ ಕೆಲಸ ಮಾಡಿದ್ದಾರೆ. ರನ್‌ವೇ FL370ನಲ್ಲಿ ಇಳಿಯುವುದು ಮಿಸ್‌ ಆದ ಬಳಿಕ, ಅಂದಾಜು 25 ನಿಮಿಷಗಳ ನಂತರ, ರನ್‌ವೇ 25L ನಲ್ಲಿ ವಿಮಾನವನ್ನು ಸುರಕ್ಷಿತವಾಗಿ ಪೈಲಟ್‌ಗಳು ಲ್ಯಾಂಡ್‌ ಮಾಡಿದ್ದಾರೆ.

Scroll to load tweet…


ವರದಿಯ ಪ್ರಕಾರ, ವಿಮಾನವು ತನ್ನ ಮುಂದಿನ ಹಾರಾಟಕ್ಕೆ ಹೊರಡುವ ಮೊದಲು ಸುಮಾರು 2.5 ಗಂಟೆಗಳ ಕಾಲ ನೆಲದ ಮೇಲೆ ಇತ್ತು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವಿಮಾನಯಾನ ವಿಶ್ಲೇಷಕ ಅಲೆಕ್ಸ್ ಮಚೆರಾಸ್ ಅವರು ಸರಣಿ ಟ್ವೀಟ್‌ಗಳಲ್ಲಿ ಘಟನೆಯು ಆಳವಾದ ಕಾಳಜಿಯನ್ನು ಹೊಂದಿದೆ ಮತ್ತು ಘಟನೆಗೆ ಪೈಲಟ್ ಆಯಾಸವನ್ನು ದೂಷಿಸಿದ್ದಾರೆ.

ಶ್ರೀಲಂಕಾಗೆ ಡಾರ್ನಿಯರ್ ಯುದ್ಧ ವಿಮಾನ ಉಡುಗೊರೆ ನೀಡಿದ ಭಾರತ

"ಆಫ್ರಿಕಾದ ಅತಿದೊಡ್ಡ ವಿಮಾನಯಾನ ಸಂಸ್ಥೆಯಲ್ಲಿನ ಘಟನೆಯ ಬಗ್ಗೆ ಆಳವಾಗಿ ಯೋಚಿಸಬೇಕಾಗಿದೆ. ಇಥಿಯೋಪಿಯನ್ ಏರ್ಲೈನ್ಸ್ ಬೋಯಿಂಗ್ 737 #ET343 ತನ್ನ ಗಮ್ಯಸ್ಥಾನವಾದ ಅಡಿಸ್ ಅಬಾಬಾವನ್ನು ತಲುಪುವ ಹೊತ್ತಿಗೆ ಇನ್ನೂ 37,000 ಅಡಿ ಎತ್ತರದಲ್ಲಿತ್ತು. ಲ್ಯಾಂಡಿಂಗ್‌ಗಾಗಿ ಅದು ಏಕೆ ಇಳಿಯಲು ಪ್ರಾರಂಭಿಸಲಿಲ್ಲ? ಇಬ್ಬರೂ ಪೈಲಟ್‌ಗಳು ಈ ವೇಳೆ ನಿದ್ರಿಸುತ್ತಿದ್ದರು,” ಎಂದು ಅವರು ಟ್ವೀಟ್ ಮಾಡಿದ್ದಾರೆ. ಪೈಲಟ್ ಆಯಾಸವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಾಯು ಸುರಕ್ಷತೆಗೆ ಬೆದರಿಕೆ ಒಡ್ಡುವ ಅತ್ಯಂತ ಹಳೆಯ ಸಮಸ್ಯೆಯಾಗಿದೆ ಎಂದು ಮಾಚೆರಾಸ್ ನಂತರ ಹೇಳಿದ್ದಾರೆ. "ಪೈಲಟ್ ಆಯಾಸವು ಹೊಸದೇನಲ್ಲ, ಮತ್ತು ವಾಯು ಸುರಕ್ಷತೆಗೆ, ಅಂತರಾಷ್ಟ್ರೀಯವಾಗಿ ಅತ್ಯಂತ ಮಹತ್ವದ ಬೆದರಿಕೆಗಳಲ್ಲಿ ಒಂದಾಗಿದೆ" ಎಂದು ಅವರು ಹೇಳಿದರು.

ವಿಮಾನಯಾನ ಸೇವೆ ಆರಂಭಿಸಿದ ‘ಆಕಾಶ ಏರ್‌’: ಶೀಘ್ರದಲ್ಲೇ ಬೆಂಗಳೂರು - ಕೊಚ್ಚಿ ನಡುವೆ ಫ್ಲೈಟ್‌

ಹಿಂದೆಯೂ ಆಗಿತ್ತು ಘಟನೆ: ನ್ಯೂಯಾರ್ಕ್‌ನಿಂದ ರೋಮ್‌ಗೆ ವಿಮಾನವು 38,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರು ಪೈಲಟ್‌ಗಳು ನಿದ್ರಿಸಿದಾಗ ಇದೇ ರೀತಿಯ ಘಟನೆಯು ಮೇ ತಿಂಗಳಲ್ಲಿ ನಡೆದಿತ್ತು. ಬಳಿಕ ವಾಯುಯಾನ ನಿಯಂತ್ರಕದಿಂದ ತನಿಖೆ ನಡೆಸಲಾಗಿತ್ತು. ತನಿಖೆಯ ಪ್ರಕಾರ, ಐಟಿಎ ಏರ್‌ವೇಸ್‌ನ ಇಬ್ಬರು ಪೈಲಟ್‌ಗಳು ಏರ್‌ಬಸ್‌ 330 ವಿಮಾನ ಫ್ರಾನ್ಸ್‌ ಮೇಲೆ ಹಾರುವ ವೇಳೆ ನಿದ್ರೆಗೆ ಜಾರಿದ್ದರು ಎಂದು ಬಹಿರಂಗಪಡಿಸಿತ್ತು.