ಫಿಲಿಪೈನ್ಸ್‌ನ ಮನಿಲಾ ಬಳಿ ಸೇನಾ ತರಬೇತಿಯಲ್ಲಿದ್ದ ಎರಡು 'ಎಸ್‌ಎಫ್-260' ವಿಮಾನಗಳು ಪರಸ್ಪರ ಡಿಕ್ಕಿಯಾಗಿ ನಾಲ್ವರು ಪೈಲಟ್‌ಗಳು ಸಜೀವ ದಹನಗೊಂಡಿದ್ದಾರೆ. ಈ ಭೀಕರ ಅಪಘಾತದ ಹಿನ್ನೆಲೆಯಲ್ಲಿ ವಾಯುಪಡೆಯು ಎಲ್ಲಾ ಎಸ್‌ಎಫ್-260 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮನಿಲಾ (ಅ.24): ಫಿಲಿಪೈನ್ಸ್‌ನಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೀಕರ ವಾಯು ದುರಂತದಲ್ಲಿ ಸೇನಾ ತರಬೇತಿಯಲ್ಲಿದ್ದ ಎರಡು ವಿಮಾನಗಳು ಗಗನದಲ್ಲೇ ಪರಸ್ಪರ ಡಿಕ್ಕಿಯಾಗಿ ಬಿದ್ದು, ನಾಲ್ವರು ಪೈಲಟ್‌ಗಳು ಸಜೀವವಾಗಿ ದಹನಗೊಂಡಿದ್ದಾರೆ ಎಂದು ಫಿಲಿಪೈನ್ಸ್ ವಾಯುಪಡೆ ಶನಿವಾರ ಅಧಿಕೃತವಾಗಿ ದೃಢಪಡಿಸಿದೆ. ಫಿಲಿಪೈನ್ಸ್ ರಾಜಧಾನಿ ಮನಿಲಾದ ದಕ್ಷಿಣ ಭಾಗದಲ್ಲಿರುವ ಪ್ರತಿಷ್ಠಿತ 'ಫರ್ನಾಂಡೋ ಏರ್ ಬೇಸ್'ನಲ್ಲಿ ಶುಕ್ರವಾರ ಮಧ್ಯಾಹ್ನ ತರಬೇತಿ ಹಾರಾಟ ನಡೆಸುತ್ತಿದ್ದ 'ಎಸ್‌ಎಫ್-260' (SF-260) ಮಾದರಿಯ ಪ್ರೊಪೆಲ್ಲರ್ ಚಾಲಿತ ಸಣ್ಣ ತರಬೇತಿ ವಿಮಾನಗಳು ಈ ಅಪಘಾತಕ್ಕೆ ಈಡಾಗಿವೆ.

ಸೇನಾ ನೆಲೆಯ ಆವರಣದಲ್ಲೇ ಬಿದ್ದ ವಿಮಾನಗಳು

ಘಟನೆಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಫಿಲಿಪೈನ್ಸ್ ವಾಯುಪಡೆಯ ವಕ್ತಾರ ಕರ್ನಲ್ ಆಲ್ವಿನ್ ಕ್ಯಾಪಿಂಗುಯಾನ್, "ಅಪಘಾತಕ್ಕೀಡಾದ ಎರಡೂ ವಿಮಾನಗಳು ವಾಯುಪಡೆಯ ನೆಲೆಯ ಆವರಣದೊಳಗೇ ಪತನಗೊಂಡಿವೆ. ವಿಮಾನದಲ್ಲಿದ್ದ ನಾಲ್ವರು ಪೈಲಟ್‌ಗಳನ್ನು ಹೊರತುಪಡಿಸಿ, ನೆಲದ ಮೇಲಿದ್ದ ಇತರ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ಈ ಭೀಕರ ಅಪಘಾತಕ್ಕೆ ನಿಖರವಾದ ತಾಂತ್ರಿಕ ಕಾರಣ ಏನು ಎಂಬುದನ್ನು ಕಂಡುಕೊಳ್ಳಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಫಿಲಿಪೈನ್ಸ್ ವಾಯುಪಡೆಯ ಬಳಿಯಿರುವ ಸಮಸ್ತ 'ಎಸ್‌ಎಫ್-260' ಮಾದರಿಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ (Grounded) ಎಂದು ಕರ್ನಲ್ ಕ್ಯಾಪಿಂಗುಯಾನ್ ತಿಳಿಸಿದ್ದಾರೆ.

ಫಿಲಿಪೈನ್ಸ್‌ನಲ್ಲಿ ಮುಂದುವರಿದ ಸೇನಾ ವಿಮಾನ ದುರಂತಗಳು

ಫಿಲಿಪೈನ್ಸ್ ಸೇನಾ ಪಡೆಗಳಿಗೆ ಸೇರಿದ ವಿಮಾನಗಳು ಕಳೆದ ಕೆಲವು ವರ್ಷಗಳಿಂದ ಸರಣಿ ಅಪಘಾತಕ್ಕೀಡಾಗುತ್ತಿರುವುದು ಭಾರಿ ಕಳವಳಕ್ಕೆ ಕಾರಣವಾಗಿದೆ. ವಿಶೇಷವೆಂದರೆ, ಕಳೆದ ಮೇ ತಿಂಗಳಿನಲ್ಲಿ ಉತ್ತರ ಫಿಲಿಪೈನ್ಸ್‌ನ ಬೆಂಗುಯೆಟ್ (Benguet) ಪ್ರಾಂತ್ಯದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ಇದೇ ಮಾದರಿಯ ಮತ್ತೊಂದು 'ಎಸ್‌ಎಫ್-260' ವಿಮಾನ ಪತನಗೊಂಡು ಇಬ್ಬರು ಸೈನಿಕ ಪೈಲಟ್‌ಗಳು ದುರ್ಮರಣಕ್ಕೀಡಾಗಿದ್ದರು. ಈ ದುರಂತದ ಬೆನ್ನಲ್ಲೇ ಮತ್ತೆ ಅದೇ ಮಾದರಿಯ ಎರಡು ವಿಮಾನಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಪೈಲಟ್‌ಗಳು ಜೀವ ಕಳೆದುಕೊಂಡಿರುವುದು ಫಿಲಿಪೈನ್ಸ್ ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ.

Scroll to load tweet…