ಕರಾಚಿ(ಮೇ 23): ಕರಾಚಿಯಲ್ಲಿ ನಡೆದ ವಿಮಾನ ದುರಂತ ನೋಡಿ ನಕ್ಕ ಕೆಲವು ಭಾರತೀಯರನ್ನು ಪಾಕಿಸ್ತಾನಿಗರು ಸ್ಯಾಡಿಸ್ಟ್ ಎಂದು ಕರೆದಿದ್ದಾರೆ. ಶುಕ್ರವಾರ ಲಾಹೋರ್‌ನಿಂದ 8 ಜನ ಸಿಬ್ಬಂದಿ ಸೇರಿ 99 ಜನರನ್ನು ಹೊತ್ತು ಬಂದಿದ್ದ ಪಾಕಿಸ್ತಾನ ಅಂತಾರಾಷ್ಟ್ರೀಯ ಏರ್‌ಲೈನ್ಸ್ (PIA) ವಿಮಾನ ಕರಾಚಿಯಲ್ಲಿ ಪತನಗೊಂಡಿತ್ತು. ಘಟನೆಯಲ್ಲಿ ಯಾರೂ ಬದುಕುಳಿದಿರುವ ಬಗ್ಗೆ ವರದಿಯಾಗಿಲ್ಲ.

ಈ ಘಟನೆ ನಡೆದ ಕೆಲವೇ ಹೊತ್ತಲ್ಲಿ ನೆಟ್ಟಿಗರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಮೂರು ಬಾರಿ ಲ್ಯಾಂಡ್‌ ಆಗುವುದಕ್ಕೆ ಈ ವಿಮಾನ ವಿಫಲ ಪ್ರಯತ್ನ ನಡೆಸಿತ್ತು. ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವ ಮುನ್ನ ಮೂರು ಬಾರಿ ವಿಮಾನ ಲ್ಯಾಂಡ್‌ ಆಗಲು ಪ್ರಯತ್ನಿಸಿತ್ತು ಎಂದು ಆ ಪ್ರದೇಶದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂಗಳೂರು ದುರಂತ ರೀತಿಯಲ್ಲಿ ಪಾಕಿಸ್ತಾನದಲ್ಲಿ ವಿಮಾನ ಪತನ; 107 ಮಂದಿ ಸಜೀವ ದಹನ?

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಟ್ವಿಟರ್, ಫೇಸ್‌ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಬಗ್ಗೆ ಜನ ವಿಷಾದ ವ್ಯಕ್ತಪಡಿಸಿದ್ದರು. ದುರಂತವನ್ನು ನೋಡಿ ನೆಟ್ಟಿಗರು ಮರುಗಿದ್ದರು. ಕ್ಷಣ ಮಾತ್ರದಲ್ಲಿ ಘಟನೆಯ ಚಿತ್ರಗಳೂ, ವಿಡಿಯೋಗಳೂ ವೈರಲ್ ಆಗಿದ್ದವು.

ಪಾಕಿಸ್ತಾನದ ದುರಂತ ನೋಡಿ ಖುಷಿ ವ್ಯಕ್ತಪಡಿಸಿದ ಕೆಲವು ಭಾರತೀಯರ ಪ್ರತಿಕ್ರಿಯೆಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ. ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ ಸಂದೇಶಗಳ ನಡುವೆಯೇ ಕೆಲವರು ತಮಾಷೆಯಾಗಿ, ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದರು. ಕೆಲವರಂತೂ ಬಹಿರಂಗವಾಗಿ ತಮಗೆ ಘಟನೆಯಿಂದ ಖುಷಿಯಾಗಿದೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ನೆಟ್ಟಿಗರು ಕಮೆಂಟ್ ಮಾಡಿದ ಭಾರತೀಯರನ್ನು ಸ್ಯಾಡಿಸ್ಟ್‌, ಎಂದು ಕರೆದಿದ್ದಾರೆ.