ಕರಾಚಿ(ಮೇ.22):  ಮೇ 22, 2010ರಂದು ಮಂಗಳೂರು ವಿಮಾನ ದುರಂತ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ಈ ದುರಂತ ನಡೆದು ಇಂದಿಗೆ 10 ವರ್ಷಗಳಾಗಿವೆ. ಇದೀಗ ಇದೇ ದಿನ ಪಾಕಿಸ್ತಾನದ ಕರಾಚಿಯಲ್ಲಿ ಇದೇ ರೀತಿ ವಿಮಾನ ದುರಂತ ನಡೆದಿದೆ.  98 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳನ್ನು ಹೊತ್ತ ವಿಮಾನ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗೋ ಕೆಲ ನಿಮಿಷಗಳ ಮುನ್ನ ಅಪಘಾತಕ್ಕೀಡಾಗಿದೆ.

"

ಲಾಹೋರ್‌ನಿಂದ 99 ಪ್ರಯಾಣಿಕರನ್ನು ಹೊತ್ತ ಕರಾಚಿಗೆ ಆಗಮಿಸುತ್ತಿದ್ದ ವಿಮಾನ 8303, ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲೇ ದುರಂತ ಸಂಭವಿಸಿದೆ. ಜಿನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲ್ಯಾಡಿಂಗ್ ಸನಿಹ ರೆಸಿಡೆನ್ಶಿಯಲ್ ವಲಯವಿದೆ. ಇಲ್ಲಿ ಹಲವು ಮನೆಗಳು ಹಾಗೂ ನಿವಾಸಿಗಳಿದ್ದಾರೆ. ವಿಮಾನ ಪತನದಿಂದ ಇದೀಗ ಇಲ್ಲಿನ ಕೆಲ ಮನೆಗಳು ಹೊತ್ತಿ ಉರಿದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ. 

 

ಪಾಕಿಸ್ತಾನ ವಿಮಾನ ದುರಂತವನ್ನು ಪಿಐಎ ವಕ್ತಾರ ಅಬ್ದುಲ್ ಸತ್ತರ್ ಖಚಿತಪಡಿಸಿದ್ದಾರೆ. ವರದಿಗಳ ಪ್ರಕಾರ 98 ಪ್ರಯಾಣಿಕರು ಸೇರಿದಂತೆ 107 ಮಂದಿಯನ್ನು ಹೊತ್ತ ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ವಿಮಾನ ದುರಂತಕ್ಕೀಡಾಗಿದೆ. ವಿಮಾನ  ದುರಂತದಿಂದ ಹತ್ತಿರದ ಮನೆಗಳು ಸುಟ್ಟು ಭಸ್ಮವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಲ್ಯಾಂಡಿಂಗ್ ಸನಿಹದಲ್ಲಿ ಹಲವು ಮನೆಗಳಿದೆ ಎಂದು ಅಬ್ದುಲ್ ಸತ್ತರ್ ಹೇಳಿದ್ದಾರೆ.

ಮಂಗಳೂರು ವಿಮಾನ ದುರಂತದ ರೀತಿಯಲ್ಲೇ ಇದೀಗ ಕರಾಚಿಯಲ್ಲಿ ವಿಮಾನ ದುರಂತ ಸಂಭವಿಸಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುಬೈನಿಂದ ಮೇ. 22, 2020ರಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿತ್ತು. ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ  ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೂ ಮುನ್ನ ವಿಮಾನ ಪತನಗೊಂಡಿತ್ತು. ಇದರಲ್ಲಿದ್ದ 158 ಪ್ರಯಾಣಿಕರು ಸಾವನ್ನಪ್ಪಿದ್ದರೆ, 8 ಮಂದಿ ಬದುಕುಳಿದಿದ್ದರು.

ಈ ದುರಂತ ನಡೆದು ಇಂದಿಗೆ 10 ವರ್ಷಗಳು ಸಂದಿದೆ. ಇದೇ ದಿನ, ಇದೀ ರೀತಿ ಪಾಕಿಸ್ತಾನದ ಕರಾಚಿಯಲ್ಲಿ ವಿಮಾನ ಪತನಗೊಂಡಿರುವುದು ದುರಂತ.