Whatsapp ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ!
* ಪಾಕಿಸ್ತಾನದಲ್ಲಿ ಮಹಿಳೆಯಿಂದ ಧರ್ಮನಿಂದನೆ
* 2020ರಲ್ಲಿ ಧರ್ಮನಿಂದನೆ ಪ್ರಕರಣ ದಾಖಲು
* ಮೆಸೇಜ್‌ನಲ್ಲಿ ಇಸ್ಲಾಂಗೆ ಅವಮಾನ, ಮಹಿಳೆಗೆ ಸಾವಿನ ಶಿಕ್ಷೆ
ಇಸ್ಲಮಾಬಾದ್(ಜ.20): ಪಾಕಿಸ್ತಾನದಲ್ಲಿ ಧರ್ಮನಿಂದನೆ ಅಂದರೆ ಇಸ್ಲಾಂ ಧರ್ಮವನ್ನು ಅವಮಾನಿಸಿದ ಮಹಿಳೆಗೆ ಮರಣದಂಡನೆ ವಿಧಿಸಲಾಗಿದೆ. ಆರೋಪಿ ಮಹಿಳೆಯ ಹೆಸರು ಅನಿಕಾ ಅತೀಕ್. ಅವರ ವಿರುದ್ಧ 2020ರಲ್ಲಿ ಧರ್ಮನಿಂದನೆ ಪ್ರಕರಣ ದಾಖಲಾಗಿತ್ತು.
ದೂರುದಾರ ಫಾರೂಕ್ ಹಸ್ನಾತ್ ಅವರ ದೂರಿನ ಮೇರೆಗೆ ಪಾಕಿಸ್ತಾನದ ರಾವಲ್ಪಿಂಡಿ ನ್ಯಾಯಾಲಯ ಬುಧವಾರ ಈ ತೀರ್ಪು ನೀಡಿದೆ. ಅನಿಕಾ ಅತೀಕ್ ವಿರುದ್ಧದ ಮೂರು ಆರೋಪಗಳು ನಿಜವೆಂದು ಸಾಬೀತಾಗಿದೆ. ಮೊದಲನೆಯದು - ಮೊಹಮ್ಮದ್‌ನ ಅವಹೇಳನ, ಎರಡನೆಯದು - ಇಸ್ಲಾಂಗೆ ಅವಮಾನ ಮತ್ತು ಮೂರನೆಯದು - ಸೈಬರ್ ಕಾನೂನುಗಳ ಉಲ್ಲಂಘನೆ. 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪ್ರಕಾರ, ಅನಿಕಾ ಮತ್ತು ಫಾರೂಕ್ ಮೊದಲು ಸ್ನೇಹಿತರಾಗಿದ್ದರು. ಆದರೆ ಅವರು ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ನಂತರ ಕೋಪಗೊಂಡ ಅನಿಕಾ, ಮೊಹಮ್ಮದ್ ಸಾಹೇಬ್ ಮತ್ತು ಇಸ್ಲಾಂ ಧರ್ಮವನ್ನು ಅವಹೇಳನ ಮಾಡುವಂತೆ ವಾಟ್ಸಾಪ್ (Whatsapp) ನಲ್ಲಿ ಫಾರೂಕ್‌ಗೆ ಸಂದೇಶಗಳನ್ನು ಕಳುಹಿಸಿದ್ದಾಳೆ.
ಸುದ್ದಿಯ ಪ್ರಕಾರ, ಫಾರೂಕ್ ಈ ಹಿಂದೆ ಅನಿಕಾಳನ್ನು ತನ್ನ ತಪ್ಪಿಗೆ ಕ್ಷಮೆಯಾಚಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ, ಎಲ್ಲಾ WhatsApp ಸಂದೇಶಗಳನ್ನು ಅಳಿಸಲು ಕೇಳಿದ್ದ. ಆದರೆ ಆಕೆ ಒಪ್ಪದಿದ್ದಾಗ ಫಾರೂಕ್ ದೂರು ದಾಖಲಿಸಿದ್ದರು. ಅದರ ತನಿಖೆಯಲ್ಲಿ ಅನಿಕಾ ವಿರುದ್ಧದ ದೂರು ನಿಜವೆಂದು ತಿಳಿದುಬಂದಿದೆ. ಹೀಗಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.
ಪಾಕಿಸ್ತಾನದಲ್ಲಿ ಧರ್ಮನಿಂದೆಯ ಕಾನೂನು ತುಂಬಾ ಕಠಿಣವಾಗಿದೆ ಎಂಬುವುದು ಗಮನಿಸಬೇಕಾದ ಸಂಗತಿ. ಮಿಲಿಟರಿ ಸರ್ವಾಧಿಕಾರಿ ಜನರಲ್ ಜಿಯಾ-ಉಲ್-ಹಕ್ ಅವರು 1980 ರ ದಶಕದಲ್ಲಿ ಈ ಕಾನೂನನ್ನು ದೇಶದಲ್ಲಿ ಜಾರಿಗೆ ತಂದರು. ಪಾಕಿಸ್ತಾನದಲ್ಲಿ ಧರ್ಮನಿಂದೆಯ ಆರೋಪದ ಮೇಲೆ ಜನರನ್ನು ಕೊಂದ ಘಟನೆಗಳೂ ಮುನ್ನೆಲೆಗೆ ಬರುತ್ತಲೇ ಇವೆ. ಕಳೆದ ವರ್ಷ, ಇದೇ ರೀತಿಯ ಆರೋಪದ ಮೇಲೆ ಶ್ರೀಲಂಕಾದ ಪ್ರಜೆಯನ್ನು ಜನಸಮೂಹವೊಂದು ಹತ್ಯೆ ಮಾಡಿತ್ತು. ಕೊಲ್ಲಲ್ಪಟ್ಟ ಶ್ರೀಲಂಕಾದ ನಾಗರಿಕರು ಸಿಯಾಲ್ಕೋಟ್ನಲ್ಲಿ ಕೆಲಸ ಮಾಡುತ್ತಿದ್ದರು.
ಡಿಸೆಂಬರ್‌ನಲ್ಲಿಯೇ ಪಾಕಿಸ್ತಾನದ ಚಾರ್ಸದ್ದಾ ಜಿಲ್ಲೆಯ ನಿವಾಸಿ ಬಶೀರ್ ಮಸ್ತಾನ್ ಎಂಬ ವ್ಯಕ್ತಿಯನ್ನು ಧರ್ಮನಿಂದೆಯ ಅಪರಾಧಿ ಎಂದು ಘೋಷಿಸಲಾಯಿತು. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿದೆ, ಇಂಟರ್ನೆಟ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡುವ ಮೂಲಕ ಧರ್ಮನಿಂದೆಯ ಆರೋಪ ಹೊರಿಸಿದೆ. ಅಲ್ಲದೆ, ವ್ಯಕ್ತಿಗೆ 100,000 ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ.