ನಟಿ ಆಯೇಷಾ ಖಾನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರ ಸಾವು ಮನರಂಜನಾ ಉದ್ಯಮದಲ್ಲಿ ದುಃಖವನ್ನುಂಟುಮಾಡಿದೆ.

ನವದೆಹಲಿ (ಜೂ.20): ಕ್ಲಾಸಿಕ್ ಟಿವಿ ಡ್ರಾಮಾಗಳಲ್ಲಿ ತಮ್ಮ ಐಕಾನಿಕ್‌ ಪಾತ್ರಗಳಿಂದ ಹೆಸರುವಾಸಿಯಾಗಿದ್ದ ಖ್ಯಾತ ಪಾಕಿಸ್ತಾನಿ ನಟಿ ಆಯೇಷಾ ಖಾನ್ ಬುಧವಾರ ಕರಾಚಿಯ ಗುಲ್ಶನ್-ಎ-ಇಕ್ಬಾಲ್ ಬ್ಲಾಕ್ 7 ರಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಖಾನ್ ನಿಧನರಾದ ಸುಮಾರು ಒಂದು ವಾರದ ನಂತರ ಅವರ ಮೃತದೇಹ ಪತ್ತೆಯಾಗಿದೆ. ನಟಿಯ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಪೊಲೀಸ್ ಅಧಿಕಾರಿಗಳು ಮೃತದೇಹ ಕೊಳೆತ ಸ್ಥಿತಿಯಲ್ಲಿದೆ ಎಂದು ದೃಢಪಡಿಸಿದರು, ಇದು ಅವರು ಹಲವು ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ಎಂದು ಸೂಚಿಸಿದೆ.

ಹಲವಾರು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ಖಾನ್, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸಾರ್ವಜನಿಕವಾಗಿ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಸಾವಿನ ಕಾರಣ ಮತ್ತು ನಿಖರವಾದ ಸಮಯವನ್ನು ನಿರ್ಧರಿಸಲು ಅವರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ವೈದ್ಯಕೀಯ-ಕಾನೂನು ವಿಧಿವಿಧಾನಗಳ ನಂತರ, ಅವರ ದೇಹವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಎಧಿ ಫೌಂಡೇಶನ್ ಶವಾಗಾರಕ್ಕೆ ವರ್ಗಾಯಿಸಲಾಯಿತು.

ಆಕೆಯ ಸಾವಿನ ಸಂದರ್ಭಗಳ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಪೊಲೀಸರು ನೆರೆಹೊರೆಯವರನ್ನು ಪ್ರಶ್ನಿಸುತ್ತಿದ್ದಾರೆ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಭಾವ್ಯ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ. ಈವರೆಗೆ, ಯಾವುದೇ ರೀತಿಯ ಕೊಲೆಯ ಲಕ್ಷಣಗಳು ವರದಿಯಾಗಿಲ್ಲ.

1948ರ ನವೆಂಬರ್ 22ರಂದು ಜನಿಸಿದ ಆಯೇಶಾ ಖಾನ್ ಪಾಕಿಸ್ತಾನಿ ಟಿವಿ ನಟಿಯಾಗಿದ್ದು, ಅಖ್ರಿ ಚಟ್ಟನ್, ಟಿಪ್ಪು ಸುಲ್ತಾನ್: ದಿ ಟೈಗರ್ ಲಾರ್ಡ್, ಡೆಹ್ಲೀಜ್, ದರಾರೇನ್, ಬೋಲ್ ಮೇರಿ ಮಚ್ಲಿ ಮತ್ತು ಏಕ್ ಔರ್ ಆಸ್ಮಾನ್‌ನಂತಹ ಕಾರ್ಯಕ್ರಮಗಳಲ್ಲಿ ತಮ್ಮ ಅಭಿನಯದಿಂದ ಮೆಚ್ಚುಗೆ ಪಡೆದಿದ್ದರು. ಅವರು ಮುಸ್ಕಾನ್, ಫಾತಿಮಾ ಮತ್ತು ಭಾರತೀಯ ಚಲನಚಿತ್ರ ರಾಜು ಬನ್ ಗಯಾ ಜೆಂಟಲ್‌ಮ್ಯಾನ್ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಆಯೇಷಾ ಪಾಕಿಸ್ತಾನಿ ಟಿವಿಯ ಪ್ರಮುಖ ನಟಿ ದಿವಂಗತ ನಟಿ ಖಾಲಿದಾ ರಿಯಾಸತ್ ಅವರ ಅಕ್ಕ. ಇಬ್ಬರೂ ಸಹೋದರಿಯರು ಪಿಟಿವಿ ನಾಟಕಗಳ ಸುವರ್ಣ ಯುಗಕ್ಕೆ ಗಣನೀಯ ಕೊಡುಗೆ ನೀಡಿದರೆ, ಆಯೇಷಾ ತನ್ನ ನಂತರದ ವರ್ಷಗಳಲ್ಲಿ ಕ್ರಮೇಣ ಜನಮನದಿಂದ ದೂರ ಸರಿದರು.

ಅವರ ನಿಧನದಿಂದ ಮನರಂಜನಾ ವಲಯದಲ್ಲಿ ದುಃಖದ ಸುರಿಮಳೆಯೇ ಹರಿದು ಬಂದಿದೆ. ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸೋಶಿಯಲ್‌ ಮೀಡಿಯಾ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಲ್ಲದ, ಅವರು ನಿಧನವಾದ ರೀತಿಗೂ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಹಿರಿಯ ಕಲಾವಿದರ, ವಿಶೇಷವಾಗಿ ಒಂಟಿಯಾಗಿ ವಾಸಿಸುವ ಮತ್ತು ಒಂದು ಕಾಲದಲ್ಲಿ ತಮ್ಮ ನಟನೆಯಿಂದ ಉದ್ಯಮವನ್ನು ಶ್ರೀಮಂತಗೊಳಿಸಿದ ನಟ-ನಟಿಯರ ಯೋಗಕ್ಷೇಮದ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ.