ವಾಷಿಂಗ್ಟನ್‌(ಅ.12): ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿರುವ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ನಿರ್ಬಂಧಗಳ ‘ಬೂದು ಪಟ್ಟಿ’ಯಲ್ಲಿರುವ ಪಾಕಿಸ್ತಾನ, ಮುಂಬರುವ ಫೈನಾನ್ಷಿಯಲ್‌ ಆ್ಯಕ್ಷನ್‌ ಟಾಸ್ಕ್‌ ಫೋರ್ಸ್‌ (ಎಫ್‌ಎಟಿಎಫ್‌) ಸಭೆಯಲ್ಲಿ ಅದರಿಂದ ಹೊರಬರಲು ಹರಸಾಹಸ ಆರಂಭಿಸಿದೆ.

ಇದಕ್ಕಾಗಿ ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಮೇಲೆ ಪ್ರಭಾವ ಬೀರಲು ಪ್ರತಿಷ್ಠಿತ ಲಾಬಿ ಸಂಸ್ಥೆ ಲಿಂಡನ್‌ ಸ್ಟ್ರಾಟಜೀಸ್‌ ಕಂಪನಿಯನ್ನು ಪಾಕಿಸ್ತಾನದ ಇಮ್ರಾನ್‌ ಖಾನ್‌ ಸರ್ಕಾರ ದುಬಾರಿ ಹಣ ಕೊಟ್ಟು ನೇಮಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಅ.21ರಿಂದ 23ರವರೆಗೆ ಪ್ಯಾರಿಸ್‌ನಲ್ಲಿ ಎಫ್‌ಎಟಿಎಫ್‌ ಭಾಗಿದಾರ ದೇಶಗಳ ಸಭೆ ನಡೆಯಲಿದೆ. ಪಾಕಿಸ್ತಾನಕ್ಕೆ ಚೀನಾ, ಟರ್ಕಿ ಹಾಗೂ ಮಲೇಷ್ಯಾದ ಬೆಂಬಲವಿರುವುದರಿಂದ ಈಗಿನ ಬೂದು ಪಟ್ಟಿಯಿಂದ ಕಪ್ಪುಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಯಂತೂ ಇಲ್ಲ.

39 ಸದಸ್ಯ ರಾಷ್ಟ್ರಗಳ ಪೈಕಿ 3 ರಾಷ್ಟ್ರಗಳು ಪ್ರಸ್ತಾವವನ್ನು ವಿರೋಧಿಸಿದರೆ ಕಪ್ಪುಪಟ್ಟಿಗೆ ಸೇರಿಸಲು ಬರುವುದಿಲ್ಲ. ಆದರೆ, ಪಾಕಿಸ್ತಾನ ಈಗಾಗಲೇ ತಾನಿರುವ ಬೂದು ಪಟ್ಟಿಯಿಂದಲೂ ಹೊರಬರಲು ಯತ್ನಿಸುತ್ತಿದೆ. ಅದಕ್ಕೆ 12 ರಾಷ್ಟ್ರಗಳ ಬೆಂಬಲ ಬೇಕಿದ್ದು, ಆ ಬೆಂಬಲ ಸಿಗುವ ಯಾವುದೇ ಸ್ಯಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿವೆ.