ಇಸ್ಲಾಮಾಬಾದ್‌/ನವದೆಹಲಿ (ನ.06): ಪಾಕಿಸ್ತಾನದ ಮೇಲೆ ಮುಸ್ಲಿಮೇತರರ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂಬ ಆರೋಪಗಳ ನಡುವೆಯೇ ಅಂಥದ್ದೇ ಒಂದು ಕ್ರಮವನ್ನು ಇಮ್ರಾನ್‌ ಖಾನ್‌ ಆಡಳಿತ ತೆಗೆದುಕೊಂಡಿದೆ. ಸಿಖ್ಖರ ಪರಮೋಚ್ಚ ಗುರುದ್ವಾರಗಳಲ್ಲಿ ಒಂದಾದ ಕರ್ತಾರ್‌ಪುರ ದರ್ಬಾರ್‌ ಸಾಹಿಬ್‌ ಗುರುದ್ವಾರವನ್ನು ಅಲ್ಲಿನ ಸಿಖ್‌ ಗುರುದ್ವಾರ ಪ್ರಬಂಧಕ ಸಮಿತಿಯ ಆಡಳಿತದಿಂದ ಕಿತ್ತುಕೊಂಡಿರುವ ಸರ್ಕಾರ, ಇದರ ಆಡಳಿತ ನಿರ್ವಹಣೆಯನ್ನು ಮುಸ್ಲಿಂ ಟ್ರಸ್ಟ್‌ ಒಂದಕ್ಕೆ ನೀಡಿದೆ. 

ನವೆಂಬರ್‌ 3ರಂದು ಪಾಕ್‌ ಸರ್ಕಾರವು, ಮುಸ್ಲಿಂ ಸಂಸ್ಥೆಯಾದ ಇವ್ಯಾಕ್ಯುಯೀ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ಗೆ (ಇಟಿಪಿಬಿ) ಗುರುದ್ವಾರದ ಅಧಿಕಾರ ಹಸ್ತಾಂತರಿಸಿದೆ. ಪಾಕಿಸ್ತಾನದ ಇತರ ಹಿಂದೂ ದೇವಾಲಯಗಳು ಹಾಗೂ ಗುರುದ್ವಾರಗಳ ನಿರ್ವಹಣೆಯನ್ನು ಇಟಿಬಿಪಿ ನಡೆಸುತ್ತದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ..! ...

ಇಮ್ರಾನ್‌ ಕ್ರಮಕ್ಕೆ ಭಾರತ ಸರ್ಕಾರ ಆಕ್ರೋಶ ವ್ಯಕ್ತಪಡಿಸಿದ್ದು, ‘ಇದೊಂದು ಅತ್ಯಂತ ಖಂಡನೀಯ ಕ್ರಮ. ಸಿಖ್ಖೇತರ ಟ್ರಸ್ಟ್‌ಗೆ ಗುರುದ್ವಾರದ ನಿರ್ವಹಣೆಯನ್ನು ವಹಿಸುವ ಮೂಲಕ ಸಿಖ್ಖರ ಭಾವನೆಗೆ ಈ ಮೂಲಕ ಧಕ್ಕೆ ತರಲಾಗಿದೆ. ಈ ಬಗ್ಗೆ ಸಿಖ್‌ ಸಮುದಾಯದಿಂದ ತಮಗೆ ದೂರು ಬಂದಿದೆ. ಸಿಖ್ಖರ ಹಕ್ಕುಗಳ ಕಿತ್ತುಕೊಳ್ಳುವಿಕೆ ನಡೆದಿದೆ’ ಎಂದು ಕಿಡಿಕಾರಿದೆ.

ಕರ್ತಾರ್‌ಪುರ ಕಾರಿಡಾರ್‌ ಭಾರತದ ಗಡಿಗೆ ಕೂಗಳತೆ ದೂರದಲ್ಲಿ ಇರುವ ನರೋವಾಲ್‌ ಜಿಲ್ಲೆಯಲ್ಲಿದೆ. ಇದು ಸಿಖ್ಖರ ಪರಮೋಚ್ಚ ಧರ್ಮಗುರು ಗುರುನಾನಕ್‌ ಅವರ ಸಮಾಧಿ ಸ್ಥಳ. 2019ರ ನ.9ರಂದು ಭಾರತದ ಗಡಿ ತೆರೆದು ಕರ್ತಾರ್‌ಪುರಕ್ಕೆ ಭಾರತದ ಸಿಖ್ಖರು ಆಗಮಿಸಲು ಅವಕಾಶ ನೀಡಲಾಗಿತ್ತು.