ಸಾಲದ ಸುಳಿಯಲ್ಲಿ ಸಿಲುಕಿ ಕಂಗೆಟ್ಟಿರುವ ಪಾಕಿಸ್ತಾನ| ಊರೆಲ್ಲಾ ಸಾಲ ಮಾಡಿದ ಪಾಕ್‌ನಿಂದ ಶ್ರೀಲಂಕಾಕ್ಕೆ 360 ಕೋಟಿ ಸಾಲ ಆಫರ್
ಕೊಲಂಬೋ:(ಫೆ.26) ಸಾಲದ ಸುಳಿಯಲ್ಲಿ ಸಿಲುಕಿ ಕಂಗೆಟ್ಟಿರುವ ಪಾಕಿಸ್ತಾನವು ತನ್ನ ಭದ್ರತೆ ಮತ್ತು ರಕ್ಷಣಾ ಕ್ಷೇತ್ರದ ಸಹಕಾರವನ್ನು ಹೆಚ್ಚಿಸಿಕೊಳ್ಳಲು ಶ್ರೀಲಂಕಾಕ್ಕೆ 360 ಕೋಟಿ ರು.ನಷ್ಟು ಸಾಲ ನೀಡಲು ಮುಂದಾಗಿದೆ.
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾಕ್ಕೆ ಕೈಗೊಂಡಿದ್ದ 2 ದಿನಗಳ ಪ್ರವಾಸವು ಬುಧವಾರವಷ್ಟೇ ಅಂತ್ಯಗೊಂಡಿದ್ದು, ಈ ವೇಳೆ ಭದ್ರತೆ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಸಂತೃಪ್ತಿ ವ್ಯಕ್ತಪಡಿಸಿವೆ.
ಅಲ್ಲದೆ ಈ ವೇಳೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಶ್ರೀಲಂಕಾಕ್ಕೆ 360 ಕೋಟಿ ರು.ನಷ್ಟುಭದ್ರತಾ ಸಾಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಭಾರತದ ಎದುರು ಮತ್ತಷ್ಟು ಮೆತ್ತಗಾದ ಪಾಕ್
ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ಸಮಸ್ಯೆಮಾತ್ರ ಇದೆ. ಉಭಯ ದೇಶಗಳು ಈ ಸಮಸ್ಯೆಯನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬಹುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಶ್ರೀಲಂಕಾ ಭೇಟಿ ವೇಳೆ ಇಮ್ರಾನ್ ನೀಡಿರುವ ಈ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇದುವರೆಗೂ ಭಾರತದ ವಿರುದ್ಧ ಉಗ್ರರ ಮೂಲಕ ಪರೋಕ್ಷ ದಾಳಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಪಾಕಿಸ್ತಾನ ಇದೀಗ ಮೆತ್ತಗಾದ ಸುಳಿವನ್ನು ನೀಡಿದೆ.
ಶ್ರೀಲಂಕಾದ 2 ದಿನಗಳ ಭೇಟಿ ವೇಳೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಅಧಿಕಾರಕ್ಕೆ ಬಂದ ತಕ್ಷಣದಿಂದಲೇ ನಮ್ಮ ನೆರೆಯ ರಾಷ್ಟ್ರ ಭಾರತದ ಪ್ರಧಾನಿ ಜೊತೆ ನಮ್ಮ ನಡುವಿನ ವೈಷಮ್ಯಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದೆ. ಆದರೆ ಅದು ಕೈಗೂಡಲಿಲ್ಲ. ಆದಾಗ್ಯೂ ನಾನು ನಿರಾಶವಾದಿಯಲ್ಲ. ನಮ್ಮ ನೆರೆಹೊರೆಯ ವಾಣಿಜ್ಯ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಿಕೊಂಡು ಬಡತನದ ವಿರುದ್ಧ ಜಯ ಸಾಧಿಸಬಹುದು’ ಎಂದರು.
