ವಿಶ್ವಸಂಸ್ಥೆ(ಜು.11): ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಸಾಕಷ್ಟುಸಾಕ್ಷ್ಯಗಳನ್ನು ನೀಡಿದ್ದೇವೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಕ್ರಮವನ್ನೂ ಕೈಗೊಳ್ಳದೆ ಭಯೋತ್ಪಾದಕರಿಗೆ ‘ರಾಜಾತಿಥ್ಯ’ ನೀಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಗಂಭೀರ ಆರೋಪ ಮಾಡಿದೆ. ತನ್ಮೂಲಕ ಅಂತಾರಾಷ್ಟ್ರೀಯ ಸಮುದಾಯದ ಎದುರು ಮತ್ತೊಮ್ಮೆ ಪಾಕಿಸ್ತಾನದ ಮಾನವನ್ನು ಹರಾಜು ಹಾಕಿದೆ.

ಗಲ್ಲು ಶಿಕ್ಷೆ, ಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿದ ಕುಲಭೂಷಣ್ ಜಾಧವ್: ಪಾಕಿಸ್ತಾನ

‘ಭಯೋತ್ಪಾದನೆ ನಿಗ್ರಹ ಸಪ್ತಾಹ’ದ ಅಂಗವಾಗಿ ನಡೆದ ವೆಬ್‌ ಸಂವಾದದಲ್ಲಿ ಭಾರತ ನಿಯೋಗದ ಮುಖ್ಯಸ್ಥ ಮಹಾವೀರ್‌ ಸಿಂಘ್ವಿ ಗುರುವಾರ ಮಾತನಾಡಿ, 1993ರ ಮುಂಬೈ ಸರಣಿ ಸ್ಫೋಟ ಹಾಗೂ 2008ರಲ್ಲಿ ನಡೆದ 26/11 ಮುಂಬೈ ಉಗ್ರ ದಾಳಿಯ ರೂವಾರಿಗಳು ಪಾಕಿಸ್ತಾನದವರು ಎಂದು ಭಾರತ ಸಾಕ್ಷ್ಯ ಹಸ್ತಾಂತರಿಸಿದೆ. ಯಾವುದೇ ಕ್ರಮವನ್ನೂ ಆ ದೇಶ ಕೈಗೊಂಡಿಲ್ಲ. ವಿಶ್ವಸಂಸ್ಥೆಯ ಸಮಿತಿಯೇ ಆ ದಾಳಿಗಳಲ್ಲಿ ಪಾಕಿಸ್ತಾನದ ಕೈವಾಡವನ್ನು ಉಲ್ಲೇಖಿಸಿದೆ. ಆದರೆ ಈ ಕೃತ್ಯಗಳ ರೂವಾರಿ ಉಗ್ರರಿಗೆ ಪಾಕಿಸ್ತಾನ ಸರ್ಕಾರಿ ರಕ್ಷಣೆ ನೀಡಿದೆ ಎಂದು ಅವರು ಆರೋಪಿಸಿದರು.

ಇದು ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ಎಲ್ಲರೂ ಒಗ್ಗೂಡಬೇಕಾದ ಸಂದರ್ಭ. ಆದರೆ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಅದು ಭಯೋತ್ಪಾದನೆಯ ತೊಟ್ಟಿಲಾಗಿದೆ. ಭಾರತದ ವಿರುದ್ಧವೇ ಕಿಡಿಗೇಡಿತನದ ಆರೋಪಗಳನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸಜ್ಜಿತ 4 ಡ್ರೋನ್ ನೀಡಲಿದೆ ಚೀನಾ; ಅಲರ್ಟ್ ಆದ ಭಾರತ!

ಭಾರತ ಸೇರಿದಂತೆ ಇಡೀ ವಿಶ್ವ ಇಂದು ಮಾನವ ಹಕ್ಕು ರಕ್ಷಣೆ ಪರ ಹಾಗೂ ಉಗ್ರವಾದದ ವಿರುದ್ಧ ಕ್ರಮ ತೆಗೆದುಕೊಂಡಿವೆ. ಆದರೆ ಪಾಕಿಸ್ತಾನ ಮಾತ್ರ ಭಯೋತ್ಪಾದನೆಯನ್ನೇ ರಾಜತಾಂತ್ರಿಕತೆ ಎಂದುಕೊಂಡಿದೆ ಎಂದು ಟೀಕಿಸಿದರು.

ಇದೇ ವೇಳೆ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಧಾರ್ಮಿಕ ಕಿರುಕುಳ ನಡೆಯುತ್ತಿದೆ. ಜಮ್ಮು-ಕಾಶ್ಮೀರ ಸೇರಿದಂತೆ ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಿಂಘ್ವಿ ದೂರಿದರು. ಆದರೆ ಭಾರತದಲ್ಲಿ ‘ವಸುಧೈವ ಕುಟುಂಬಕಂ’ ರೀತಿ ಎಲ್ಲ ಧರ್ಮೀಯರಿಗೆ ಸಮಾನತೆ ಇದೆ ಎಂದು ಹೇಳಿದರು.