ಸಾಲದ ಸುಳಿಯಲ್ಲಿ ಸಿಲುಕಿರುವ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ಸರ್ಕಾರ ಇದೀಗ ಜನಸಾಮಾನ್ಯರ ಬಳಿ ಇರುವ ಚಿನ್ನದ ಮೇಲೂ ಕಣ್ಣು ಹಾಕಿದೆ. ಸರ್ಕಾರ ಕಳೆದ ಮೂರು ತಿಂಗಳಲ್ಲಿ ವಿದೇಶಗಳಿಂದ ದುಬಾರಿ ಬಡ್ಡಿಗೆ ಭಾರೀ ಸಾಲ ಪಡೆದಿದೆ.

ಇಸ್ಲಾಮಾಬಾದ್‌ (ಫೆ.21): ಸಾಲದ ಸುಳಿಯಲ್ಲಿ ಸಿಲುಕಿರುವ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ನೇತೃತ್ವದ ಪಾಕಿಸ್ತಾನ ಸರ್ಕಾರ (Pakistan Government) ಇದೀಗ ಜನಸಾಮಾನ್ಯರ ಬಳಿ ಇರುವ ಚಿನ್ನದ (Gold) ಮೇಲೂ ಕಣ್ಣು ಹಾಕಿದೆ. ಸರ್ಕಾರ ಕಳೆದ ಮೂರು ತಿಂಗಳಲ್ಲಿ ವಿದೇಶಗಳಿಂದ ದುಬಾರಿ ಬಡ್ಡಿಗೆ ಭಾರೀ ಸಾಲ ಪಡೆದಿದೆ. ಇದರ ಹೊರತಾಗಿಯೂ ವಿದೇಶಿ ವಿನಿಮಯ (Foreign Exchange) ಸಂಗ್ರಹ ದಿನೇ ದಿನೇ ಕುಸಿಯುತ್ತಿದೆ. 

ಈ ಕುಸಿತ ತಡೆಯಲು ಇದೀಗ ಜನ ಸಾಮಾನ್ಯರ ಬಳಿ ಇರುವ ಅಂದಾಜು 5000 ಟನ್‌ಗಳಷ್ಟು ಚಿನ್ನದ ಬಿಸ್ಕೆಟ್‌ ಮತ್ತು ಬಾರ್‌ಗಳನ್ನು ಸಾಲವಾಗಿ ಪಡೆದುಕೊಳ್ಳುವ ಯೋಚನೆ ಮಾಡುತ್ತಿದೆ. ವಿತ್ತ ಸಚಿವರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ (ಎಸ್‌ಬಿಪಿ) ಗವರ್ನರ್‌ರನ್ನು ಒಳಗೊಂಡಿರುವ ಆರ್ಥಿಕ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ಪ್ರಸ್ತಾಪ ಇಟ್ಟು ಚರ್ಚೆ ನಡೆಸಲಾಗಿದೆ ಮಾಧ್ಯಮವೊಂದು ವರದಿ ಮಾಡಿದೆ. 

ಈ ಪ್ರಸ್ತಾವನೆಯ ಪ್ರಕಾರ, ವಾಣಿಜ್ಯ ಬ್ಯಾಂಕುಗಳು ಚಿನ್ನದ ಮಾಲೀಕರಿಗೆ ವಿನಿಮಯ ಸಾಧ್ಯವಾದ (ನೆಗೋಶಬಲ್) ಲಿಖಿತ ಪತ್ರವನ್ನು ನೀಡುತ್ತವೆ ಮತ್ತು ಚಿನ್ನದ ಮೇಲೆ ಬಡ್ಡಿದರ ಪಾವತಿಸುತ್ತವೆ. ವಾಣಿಜ್ಯ ಬ್ಯಾಂಕ್‌ ಆ ಚಿನ್ನವನ್ನು ಎಸ್‌ಬಿಪಿಯೊಂದಿಗೆ ಠೇವಣಿ ಮಾಡುತ್ತದೆ. ಡಿಸೆಂಬರ್‌ 31, 2021ರ ಎಸ್‌ಬಿಪಿ ಹೇಳಿಕೆಯ ಪ್ರಕಾರ, ಕೇಂದ್ರೀಯ ಬ್ಯಾಂಕ್‌ ಈಗಾಗಲೇ 3.8 ಶತಕೋಟಿ ಡಾಲರ್‌ ಮೌಲ್ಯದ 20.1 ಲಕ್ಷ ಟ್ರಾಯ್ ಔನ್ಸ್‌ ಚಿನ್ನವನ್ನು ಠೇವಣಿ ಹೊಂದಿದೆ.

Hilal-e-Pakistan: ಪೋಲಿಯೊ ನಿರ್ಮೂಲನೆಗೆ ಶ್ರಮಿಸಿದ ಬಿಲ್ ಗೇಟ್ಸ್‌ಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ!

ಒಂದೇ ದಿನದಲ್ಲಿ 12.03 ರೂ ಏರಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಸಲ್ಲದ ವಿಚಾರಗಳಿಗೆ ಮೂಗುತೂರಿಸುವ ಕೆಲಸ ಮಾಡುವ ಪಾಕಿಸ್ತಾನ (Pakistan), ತನ್ನದೇ ದೇಶದಲ್ಲಿ ಜನರ ಜೀವನವನ್ನು ಇನ್ನಷ್ಟು ದಯನೀಯಗೊಳಿಸುವ ಕಾರ್ಯಕ್ಕೆ ಇಳಿದಿದೆ. ಸರ್ಕಾರದ ಬೊಕ್ಕಸವನ್ನು ತುಂಬಿಸುವ ಪ್ರಯತ್ನದಲ್ಲಿ ಮಂಗಳವಾರ ಮಧ್ಯರಾತ್ರಿಯಿಂದಲೇ ದೇಶದ ಜನರ ಮೇಲೆ "ಪೆಟ್ರೋಲ್ ಬಾಂಬ್" ಹೇರಿದೆ. ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ (Petroleum Products) ಮೇಲೆ ದಾಖಲೆಯ 12.03 ರೂಪಾಯಿ ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲಿಯೇ ಪಾಕಿಸ್ತಾನದಲ್ಲಿ ಜನಾಕ್ರೋಶ ಇನ್ನಷ್ಟು ಹೆಚ್ಚಳವಾಗಿದೆ.

ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಬೆಲೆ ಲೀಟರ್‌ಗೆ 12.03 ರೂಪಾಯಿ ಮತ್ತು ಹೈಸ್ಪೀಡ್ ಡೀಸೆಲ್ ಬೆಲೆ ಲೀಟರ್‌ಗೆ 9.53 ರೂಪಾಯಿ ದಾಖಲೆ ಮಟ್ಟದ ಏರಿಕೆ ಮಾಡಲಾಗಿದ್ದರೆ, ಲೈಟ್ ಹೈಸ್ಪೀಡ್ ಡೀಸೆಲ್ ಬೆಲೆ 9.43 ರೂಪಾಯಿ ಏರಿಕೆ ಕಂಡಿದೆ. ಇನ್ನು ಜನಬಳಕೆಯ ಸೀಮೆಎಣ್ಣೆ ಮೇಲೆ 10,08 ರೂಪಾಯಿ ಏರಿಕೆ ಮಾಡಿದೆ ಎಂದು ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ.

ಹೊಸ ಏರಿಕೆಯೊಂದಿಗೆ, ಪೆಟ್ರೋಲ್ ಬೆಲೆ ಲೀಟರ್‌ಗೆ 147.82 ರೂಪಾಯಿಯಿಂದ 159.86 ರೂಪಾಯಿ ಆಗಿದ್ದರೆ, ಹೈಸ್ಪೀಡ್ ಡೀಸೆಲ್ ಲೀಟರ್‌ಗೆ 144.62 ರೂಪಾಯಿಯಿಂದ 154.15 ರೂಪಾಯಿಗೆ ಏರಿಕೆಯಾಗಿದೆ, ಲಘು ಡೀಸೆಲ್ ತೈಲವು ಲೀಟರ್‌ಗೆ 114.54 ರೂಪಾಯಿಯಿಂದ 123.97 ರೂಪಾಯಿಗೆ ಏರಿಕೆಯಾಗಿದೆ. ಸೀಮೆ ಎಣ್ಣೆ ಲೀಟರ್‌ಗೆ 116.48 ರೂಪಾಯಿಂದ 126.56 ರೂಪಾಯಿಗೆ ಹೆಚ್ಚಿಸಲಾಗಿದೆ.

Hijab Row ಹಿಜಾಬ್ ಇಲ್ಲ, ಸಾಂಪ್ರದಾಯಿಕ ಡ್ರೆಸ್, ಪಾಕ್ ಸಂಸ್ಥಾಪಕ ಜಿನ್ನಾಜೊತೆ ಭಾರತ AIMSF ಚಿತ್ರ ಬಿಚ್ಚಿಟ್ಟ ರಹಸ್ಯ!

ಇತ್ತೀಚಿನ ಏರಿಕೆಯೊಂದಿಗೆ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಮಂಗಳವಾರ ಮಧ್ಯರಾತ್ರಿಯಿಂದ ಹೊಸ ಬೆಲೆಗಳು ಅನ್ವಯವಾಗಿದೆ. ಹೊಸ ಇಂಧನ ಬೆಲೆಗಳು ಫೆಬ್ರವರಿ 28 ರವರೆಗೆ ಅನ್ವಯವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದಾಖಲೆಯ ಏರಿಕೆಯಲ್ಲಿದೆ. ಪ್ರಸ್ತುತ 2014ರ ನಂತರದ ಗರಿಷ್ಠ ಮಟ್ಟದಲ್ಲಿದೆ ಎಂದು ಪಾಕಿಸ್ತಾನ ಸರ್ಕಾರದ ಹಣಕಾಸು ವಿಭಾಗ ಹೇಳಿದೆ.