ಲಾಡೆನ್ ರೀತಿ ಹತ್ಯೆ ತಪ್ಪಿಸಲು ಉಗ್ರ ಅಜರ್‌ಗೆ ಪಾಕ್ ರಕ್ಷಣೆ!
* ಲಾಡೆನ್ ರೀತಿ ಹತ್ಯೆ ತಪ್ಪಿಸಲು ಉಗ್ರ ಅಜರ್‌ಗೆ ಪಾಕ್ ರಕ್ಷಣೆ
* ಜನದಟ್ಟಣೆ ಇರುವ ಬಹಾವಲ್ಪುರದಲ್ಲಿ ಜೈಷ್ ಮುಖ್ಯಸ್ಥ
ನವದೆಹಲಿ(ಆ.02): 2001ರಲ್ಲಿ ನಡೆದ ಸಂಸತ್ ದಾಳಿ ಸೇರಿದಂತೆ ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸಂಭವನೀಯ ದಾಳಿಯಿಂದ ಪಾರಾಗಲು ಜನದಟ್ಟಣೆ ಇರುವ ಪ್ರದೇಶದ ಮಧ್ಯೆಯೇ ವಾಸಿಸುತ್ತಿದ್ದಾನೆ. ಈ ಹಿಂದೆ ಅಲ್‌ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದ ರೀತಿಯಲ್ಲಿಯೇ ತನ್ನ ಮೇಲೆ ದಾಳಿ ನಡೆಸುವುದು ಅಸಾಧ್ಯ ಎಂಬ ಕಾರಣಕ್ಕೆ ಆತ ಬಹಾವಲ್ಪುರ ಪ್ರದೇಶದ ಜನದಟ್ಟಣೆಯ ಪ್ರದೇಶವನ್ನು ವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದಾನೆ. ಇದಕ್ಕೆ ಪಾಕ್ ಸರ್ಕಾರದ ಬೆಂಬಲವೂ ಇದೆ ಎಂದು ವರದಿಯೊಂದು ತಿಳಿಸಿದೆ.
ಟೈಮ್ಸ್ ನೌ ನವಭಾರತ್ ವಾಹಿನಿಗೆ ಲಭ್ಯವಾಗಿರುವ ವಿಡಿಯೋ ತುಣುಕೊಂದರಲ್ಲಿ ಜೈಷ್ ಎ ಮೊಹಮ್ಮದ್ ಮುಖ್ಯಸ್ಥನಾಗಿರುವ ಮಸೂದ್ ಅಜರ್ ಪಾಕಿಸ್ತಾನದಲ್ಲೇ ವಾಸಿಸುತ್ತಿರುವ ಬಗ್ಗೆ ಖಚಿತ ಸುಳಿವು ಲಭ್ಯವಾಗಿದೆ. ಮಸೂದ್ ಅಜರ್ ಬಹಾವಲ್ಪುರದಲ್ಲಿ ಎರಡು ಮನೆಗಳನ್ನು ಹೊಂದಿದ್ದಾನೆ. ಒಸ್ಮಾನ್- ಒ- ಅಲಿ ಮಸೀದಿ ಹಾಗೂ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿಯೇ ಆತನ ಒಂದು ಮನೆ ಇದೆ. ಮಸೀದಿ ಮತ್ತು ಆಸ್ಪತ್ರೆಯ ಪಕ್ಕದಲ್ಲೇ ಮನೆಯನ್ನು ಹೊಂದಿರುವುದರಿಂದ ಒಸಾಮಾ ಲಾಡೆನ್ ಹತ್ಯೆಗೆ ದಾಳಿ ನಡೆಸಿದ ರೀತಿ ದಾಳಿ ನಡೆಸುವುದು ಅಸಾಧ್ಯ. ಒಂದು ವೇಳೆ ದಾಳಿ ನಡೆದರೂ ಸುಲಭವಾಗಿ ದಾಳಿಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಅಜರ್ ಮಸೂದ್ ಮತ್ತು ಪಾಕ್‌ನ ಪ್ಲಾನ್ ಆಗಿದೆ.
ಮಸೂದ್‌ನ ಇನ್ನೊಂದು ಮನೆ ಮೊದಲ ಮನೆಗಿಂತಲೂ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಅದು ಕೂಡ ಜಾಮಿಯಾ ಮಸೀದಿ ಹಾಗೂ ಲಾಹೋರ್ ಹೈಕೋರ್ಟ್‌ನ ಬಹಾವಲ್ಪುರ ಪೀಠದ ಪಕ್ಕದಲ್ಲಿಯೇ ಇದೆ. ಜಿಲ್ಲಾಧಿಕಾರಿ ಕಚೇರಿ ಕೂಡ ಮನೆಯ ಸಮೀಪವೇ ಇದೆ. ಆತನ ಮನೆಗೆ ಪಾಕಿಸ್ತಾನ ಸೇನೆಯನ್ನು ಕಾವಲಿಗೆ ನಿಯೋಜನೆ ಮಾಡಲಾಗಿದೆ. ಜಾಗತಿಕ ಉಗ್ರನಾಗಿರುವ ಮಸೂದ್‌ಗೆ ಪಾಕ್ ಸರ್ಕಾರ ರಾಜಾತಿತ್ಯ ನೀಡುತ್ತಿದೆ ಎಂದು ವರದಿ ತಿಳಿಸಿದೆ.