ಹಿಂದೂಗಳ ಮೇಲಿನ ದಾಳಿ ವಿರುದ್ಧ ಪ್ರತಿಭಟಿಸಿದ ಆರೋಪ, ಬಾಂಗ್ಲಾ ಇಸ್ಕಾನ್ ಸ್ವಾಮೀಜಿ ಅರೆಸ್ಟ್!
ಬಾಂಗ್ಲಾದೇಶ ಹಿಂದೂಗಳ ಮೇಲಿನ ದಾಳಿ ವಿರೋಧಿಸಿ ಪ್ರತಿಭಟಿಸಿದ ಇಸ್ಕಾನ್ ಗುರು, ಹಿಂದೂ ನಾಯಕ ಕೃಷ್ಣ ದಾಸ್ ಬ್ರಹ್ಮಾಚಾರಿಯನ್ನು ಬಾಂಗ್ಲಾದ ಯೂನಸ್ ಸರ್ಕಾರ ಬಂಧಿಸಿದೆ.
ಡಾಕಾ(ನ.25) ಬಾಂಗ್ಲಾದೇಶದ ಯೂನಸ್ ಸರ್ಕಾರ ಬಂದ ಬಳಿಕ ಹಿಂದೂಗಳ ಮೇಲೆ ನಡೆದ ಸತತ ದಾಳಿ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿತ್ತು. ಹಿಂದೂಗಳ ಸಂಘಟಿಸಿ ಪ್ರತಿಭಟಿಸಿದ ಆರೋಪದಡಿ ಬಾಂಗ್ಲಾದೇಶದ ಇಸ್ಕಾನ್ ಸ್ವಾಮಿಜಿ ಕೃಷ್ಣ ದಾಸ್ ಬ್ರಹ್ಮಚಾರಿ ಅರೆಸ್ಟ್ ಆಗಿದ್ದಾರೆ. ದೇಶದ್ರೋಹಿ ಆರೋಪ ಹೊರಿಸಿರುವ ಬಾಂಗ್ಲಾದೇಶದ ಮೊಹಮ್ಮದ್ ಯೂನಸ್ ಸರ್ಕಾರ, ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕೃಷ್ಣ ದಾಸ್ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಅನ್ನೋ ಮಾಹಿತಿಗಳು ಲಭ್ಯವಾಗಿದೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಭಾರತದ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.
ಶೇಕ್ ಹಸೀನಾ ಸರ್ಕಾರ ವಿರುದ್ಧ ಆರಂಭಗೊಂಡ ಪ್ರತಿಭಟನೆ ಅಷ್ಟೇ ವೇಗದಲ್ಲೂ ಹಿಂದೂಗಳ ಮೇಲೂ ನಡೆದಿತ್ತು. ಬಳಿಕ ಹಸಿನಾ ಸರ್ಕಾರ ಪತನಗೊಂಡು ಮೊಹಮ್ಮದ್ ಯೂನಸ್ ಸರ್ಕಾರ ರಚನಗೊಂಡಿತು. ಆದರೆ ಹಿಂದೂಗಳ ಮೇಲಿನ ದಾಳಿ ಕೊನಗೊಂಡಿರಲಿಲ್ಲ. ಬಾಂಗ್ಲಾದೇಶ ಹಿಂದೂಗಳ ಮನೆ ಮನೆ ನುಗ್ಗಿ ದಾಳಿ ನಡೆದಿತ್ತು. ಈ ಭೀಕರ ದಾಳಿಯಲ್ಲಿ ಸಾವಿರಾರು ಹಿಂದೂಗಳು ಹತ್ಯೆಯಾಗಿದ್ದರು. ಇನ್ನು ಸರ್ಕಾರಿ ಹುದ್ದೆ, ಶಾಲಾ ಶಿಕ್ಷಕ-ಶಿಕ್ಷಕಿ, ಪ್ರಾಂಶುಪಾಲರು ಸೇರಿದಂತೆ ಹಲವು ಹುದ್ದೆಗಳಲ್ಲಿದ್ದ ಹಿಂದೂಗಳನ್ನು ಬಲವಂತವಾಗಿ ಕಿತ್ತೆಸಯಲಾಗಿತ್ತು. ಸತತ ದಾಳಿಗಳು ನಡೆಯುತ್ತಿದ್ದಂತೆ ಹಿಂದೂಗಳನ್ನು ಒಗ್ಗೂಟಿಸಿದ ಇಸ್ಕಾನ್ ಸ್ವಾಮೀಜಿ ಕೃಷ್ಣ ದಾಸ್ ಪ್ರತಿಭಟನೆ ನಡೆಸಿದ್ದರು.
ಬಾಂಗ್ಲಾದ ಉಚ್ಚಾಟಿತ ನಾಯಕಿ ಭಾರತಕ್ಕೆ ಬಂದು 100 ದಿನ: ಶೇಕ್ ಹಸೀನಾ ವಾಸ ಎಲ್ಲಿ
ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ಪ್ಲಾಟ್‌ಫಾರ್ಮ್ ಮೂಲಕ ಹಿಂದೂಗಳ ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಿದ್ದರು. ಕಳೆದ ತಿಂಗಳ ರ್ಯಾಲಿಯಲ್ಲಿ ಕೃಷ್ಣ ದಾಸ್ ಆಡಿದ ಮಾತುಗಳು ಬಾಂಗ್ಲಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ಮೇಲೆ ಸತತ ದಾಳಿಗಳು ನಡೆಯುತ್ತಿದೆ. ಈ ರೀತಿ ದಾಳಿ ನಡೆಸಿ ಬಾಂಗ್ಲಾದೇಶದಲ್ಲಿರುವ ಹಿಂದೂಗಳನ್ನು ಓಡಿಸುವ ಪ್ರಯತ್ನ ಮಾಡಿದರೆ ಬಾಂಗ್ಲಾದೇಶ ಆಫ್ಘಾನಿಸ್ತಾನ ಅಥವಾ ಸಿರಿಯಾ ಆಗಲಿದೆ. ಇಲ್ಲಿ ಪ್ರಜಾಪ್ರಭುತ್ವವೇ ಇರುವುದಿಲ್ಲ ಎಂದಿದ್ದರು.
ಕೃಷ್ಣ ದಾಸ್ ವಿರುದ್ಧ ಯೂನಸ್ ಸರ್ಕಾರದ ಸೇನೆ ಹದ್ದಿನ ಕಣ್ಣಿಟ್ಟಿತ್ತು. ಬಂಧನಕ್ಕಾಗಿ ಹೊಂಚು ಹಾಕಿತ್ತು. ಇದೇ ವೇಳೆ ಕೃಷ್ಣ ದಾಸ್ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಕೃಷ್ಣ ದಾಸ್ ಪತ್ತೆಗೆ ಬಾಂಗ್ಲಾದೇಶ ಸೇನೆ ಹಾಗೂ ಪೊಲೀಸ್ ಹುಡುಕಾಟ ಆರಂಭಿಸಿತ್ತು . ಇಷ್ಟೇ ಅಲ್ಲ ದೇಶ ದ್ರೋಹದ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಕೃಷ್ಣ ದಾಸ್ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿತ್ತು.
ಈ ಬೆಳವಣಿಗೆ ಬಳಿಕ ಇದೀಗ ಢಾಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೆನ್ನಲ್ಲೇ ಯೂನಸ್ ಸರ್ಕಾರದ ಡಿಟೆಕ್ಟೀವ್ ಬ್ರಾಂಚ್ ಬಂಧಿಸಿದೆ. ಬಳಿಕ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್‌ಫಾರ್ಮೇಶನ್ ಬ್ರಾಡ್‌ಕಾಸ್ಟಿಂಗ್ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಯೂನಸ್ ಸರ್ಕಾರದ ಪೊಲೀಸ್ ಹಿಂದೂ ನಾಯಕ, ಇಸ್ಕಾನ್ ಗುರು ಕೃಷ್ಣ ದಾಸ್ ಬ್ರಹ್ಮಚಾರಿಯನ್ನು ಬಂಧಿಸಿರುವುದಾಗಿ ಮಾಹಿತಿ ತಿಳಿದುಬಂದಿದೆ. ಹಿಂದೂಗಳ ಮೇಲಿನ ದಾಳಿ ವಿರುದ್ದ ಪ್ರತಿಭಟನೆ ನಡೆಸಿದ ಕೃಷ್ಣ ದಾಸ್ ವಿರುದ್ಧ ದೇಶ ದ್ರೋಹ ಆರೋಪ ಹೊರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.