ಭಾರತಕ್ಕೆ ಸೆಡ್ಡು ಹೊಡೆಯಲು ಬಾಂಗ್ಲಾದೇಶದೊಂದಿಗೆ ಸೇರಿಕೊಂಡು ಪಾಕಿಸ್ತಾನ ಮತ್ತು ಚೀನಾ ಮತ್ತೊಂದು ಷಡ್ಯಂತ್ರಕ್ಕೆ ಕೈಹಾಕಿವೆ. ಸಾರ್ಕ್‌ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ)ಗೆ ಪರ್ಯಾಯವಾಗಿ ಪ್ರತ್ಯೇಕ ಪ್ರಾದೇಶಿಕ ಸಂಘಟನೆಯೊಂದನ್ನು ಆರಂಭಿಸಲು ಭಾರತದ ವೈರಿರಾಷ್ಟ್ರಗಳು ಮುಂದಾಗಿವೆ.

ಇಸ್ಲಾಮಾಬಾದ್‌: ಭಾರತಕ್ಕೆ ಸೆಡ್ಡು ಹೊಡೆಯಲು ಬಾಂಗ್ಲಾದೇಶದೊಂದಿಗೆ ಸೇರಿಕೊಂಡು ಪಾಕಿಸ್ತಾನ ಮತ್ತು ಚೀನಾ ಮತ್ತೊಂದು ಷಡ್ಯಂತ್ರಕ್ಕೆ ಕೈಹಾಕಿವೆ. ಸಾರ್ಕ್‌ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ)ಗೆ ಪರ್ಯಾಯವಾಗಿ ಪ್ರತ್ಯೇಕ ಪ್ರಾದೇಶಿಕ ಸಂಘಟನೆಯೊಂದನ್ನು ಆರಂಭಿಸಲು ಭಾರತದ ವೈರಿರಾಷ್ಟ್ರಗಳು ಮುಂದಾಗಿವೆ.

ಈ ಕುರಿತು ಪಾಕಿಸ್ತಾನ ಮತ್ತು ಚೀನಾದ ನಡುವಿನ ಮಾತುಕತೆ ಮಹತ್ವದ ಘಟ್ಟ ಬಂದು ತಲುಪಿದ್ದು, ಎರಡೂ ದೇಶಗಳು ಪ್ರಾದೇಶಿಕ ಒಗ್ಗಟ್ಟು ಮತ್ತು ಸಂಪರ್ಕಕ್ಕಾಗಿ ಪ್ರತ್ಯೇಕ ಸಂಘಟನೆಯೊಂದರ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಬಂದಿವೆ ಎಂದು ಹೇಳಲಾಗಿದೆ.

ಭಾರತ, ಆಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಭೂತಾನ್‌, ಮಾಲ್ಡೀವ್ಸ್‌, ನೇಪಾಳ ಮತ್ತು ಶ್ರೀಲಂಕಾವನ್ನು ಪ್ರಸ್ತುತ ಸಾರ್ಕ್‌ ಸಂಘಟನೆ ಹೊಂದಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಹೊಸ ಸಂಘಟನೆ ಬೆಳೆಸುವ ಉದ್ದೇಶ ಹೊಂದಲಾಗಿದೆ. ಚೀನಾದ ಕುನ್‌ಮಿಂಗ್‌ನಲ್ಲಿ ಇತ್ತೀಚೆಗೆ ನಡೆದ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ದೇಶಗಳ ನಡುವಿನ ತ್ರಿಪಕ್ಷೀಯ ಮಾತುಕತೆಯಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಸಾರ್ಕ್‌ನ ಭಾಗವಾಗಿರುವ ಇತರೆ ದಕ್ಷಿಣ ಏಷ್ಯಾದ ರಾಷ್ಟ್ರಗಳನ್ನೂ ಈ ಸಂಘಟನೆಗೆ ಆಹ್ವಾನಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೆ, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಮಾತ್ರ ಬೀಜಿಂಗ್‌, ಇಸ್ಲಮಾಬಾಬಾದ್‌ ಮತ್ತು ಢಾಕಾ ನಡುವಿನ ಹೊಸ ಮೈತ್ರಿಕೂಟವನ್ನು ತಳ್ಳಿಹಾಕಿದ್ದು, ಕುನ್‌ಮಿಂಗ್‌ನಲ್ಲಿ ನಡೆದ ಸಭೆ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದೆ. ನಾವು ಯಾವುದೇ ಹೊಸ ಮೈತ್ರಿಕೂಟವನ್ನು ರಚಿಸುತ್ತಿಲ್ಲ ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್‌ ಹುಸೈನ್‌ ತಿಳಿಸಿದ್ದಾರೆ.

ಈಗಿರುವ ಮಾಹಿತಿ ಪ್ರಕಾರ, ಈ ಹೊಸ ಸಂಘಟನೆಗೆ ಭಾರತಕ್ಕೂ ಆಹ್ವಾನ ನೀಡಲಾಗುತ್ತದೆ. ಈ ಸಂಘಟನೆಯ ಮೂಲ ಉದ್ದೇಶ ವ್ಯಾಪಾರ ಮತ್ತು ಸಂಪರ್ಕದ ಮೂಲಕದ ಪರಸ್ಪರ ಸಂಬಂಧವೃದ್ಧಿ ಆಗಿದೆ. ಒಂದು ವೇಳೆ ಈ ಹೊಸ ಸಂಘಟನೆಯ ಪ್ರಸ್ತಾಪ ಕಾರ್ಯರೂಪಕ್ಕಿಳಿದರೆ ಸಾರ್ಕ್‌ ಮೂಲೆಗುಂಪಾಗುವುದು ಸ್ಪಷ್ಟ. ಸಾರ್ಕ್‌ ಸಂಘಟನೆಯಲ್ಲಿ ಭಾರತವೇ ಕೇಂದ್ರಬಿಂದುವಾಗಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಸಾರ್ಕ್‌ನ ಕಾರ್ಯಚಟುವಟಿಕೆ ಹಲವು ಸಮಯದಿಂದ ಸ್ಥಗಿತಗೊಂಡಿದೆ. ಕೊನೆಯ ಸಾರ್ಕ್ ಸಮ್ಮೇಳನ 2014ರಲ್ಲಿ ನಡೆದಿತ್ತು. ಆ ಬಳಿಕ 2016ರಲ್ಲಿ ಇಸ್ಲಾಮಾಬಾದ್‌ನಲ್ಲಿ ಸಮ್ಮೇಳನ ನಡೆಯಬೇಕಿತ್ತಾದರೂ ಉರಿ ಮೇಲೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಅದನ್ನು ರದ್ದು ಮಾಡಲಾಗಿದೆ.