ಲಂಡನ್‌(ಡಿ.09): ಕೊರೋನಾ ನಿಯಂತ್ರಣಕ್ಕೆ ಅಭಿವೃದ್ಧಿಪಡಿಸಲಾಗಿರುವ ಕೋವಿಶೀಲ್ಡ್‌ ಲಸಿಕೆಯು ಸಂಪೂರ್ಣ ಸುರಕ್ಷಿತ ಮತ್ತು ಸರಾಸರಿ ಶೇ.70.4ರಷ್ಟುಪರಿಣಾಮಕಾರಿಯಾಗಿದೆ ಎಂದು ಆಕ್ಸ್‌ಫರ್ಡ್‌ ವಿವಿ ಮತ್ತು ಅಸ್ಟ್ರಾಜೆನೆಕಾ ಸಂಸ್ಥೆಗಳು ಹೇಳಿಕೊಂಡಿವೆ.

ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನಿಕಾ ಸಂಸ್ಥೆಗಳು ಲಸಿಕೆಯ 3ನೇ ಹಂತದ ಪ್ರಯೋಗದ ಅಂಕಿ ಅಂಶಗಳನ್ನು ಬಹಿರಂಗಪಡಿಸುವ ಮೂಲಕ ಕೋವಿಶೀಲ್ಡ್‌ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿವೆ.

ಕೋವಿಶೀಲ್ಡ್‌ ಲಸಿಕೆಯ ಸುರಕ್ಷತೆ ಕುರಿತಾದ 3ನೇ ಹಂತದ ಪ್ರಯೋಗದ ಅಧ್ಯಯನ ವರದಿಯು ಲ್ಯಾನ್ಸೆಟ್‌ ವೈದ್ಯಕೀಯ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಲಸಿಕೆ ಕುರಿತಾಗಿ ಹೀಗೆ ಪ್ರಕಟವಾದ ಮೊದಲ ಅಧ್ಯಯನ ವರದಿ ಇದಾಗಿದೆ.

ಅಲ್ಲದೆ ಕೋವಿಶೀಲ್ಡ್‌ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕಲ್ಪಿಸಲು ನಿಯಂತ್ರಕರು ಇದೇ ವರದಿಯನ್ನು ಅವಲಂಬಿಸುವ ಸಾಧ್ಯತೆಯಿದೆ ಎನ್ನಲಾಗಿದೆ.