Asianet Suvarna News Asianet Suvarna News

ಆಕ್ಸ್‌ಫರ್ಡ್‌ನ ಲಸಿಕೆ ವೃದ್ಧರಿಗೆ ರಾಮಬಾಣ!

ಆಕ್ಸ್ಫರ್ಡ್ ಈ ಲಸಿಕೆ ವೃದ್ಧರಿಗೆ ರಾಮಭಾಣವಾಗಿದೆ. ವೃದ್ಧರ ಮೇಲೆ ಅತ್ಯುತ್ತಮವಾದ ಪರಿಣಾಮವನ್ನು ಉಂಟು ಮಾಡಿದೆ. 

Oxford Corona Vaccine Best for old Age people snr
Author
Bengaluru, First Published Nov 20, 2020, 7:51 AM IST

ಲಂಡನ್‌ (ನ.20): ಕೊರೋನಾ ವೈರಸ್‌ ಬಾಧಿಸದಂತೆ ತಡೆಯುವ ಲಸಿಕೆಗಳು ಒಂದಾದ ಮೇಲೊಂದು ಯಶಸ್ವಿಯಾಗುತ್ತಿರುವುದರ ಬೆನ್ನಲ್ಲೇ ಬಹುನಿರೀಕ್ಷಿತ ಆಕ್ಸ್‌ಫರ್ಡ್‌-ಆಸ್ಟ್ರಾಜೆನೆಕಾ ಲಸಿಕೆ ವೃದ್ಧರ ಮೇಲೆ ಅತ್ಯುತ್ತಮ ರೀತಿಯ ಪರಿಣಾಮ ಉಂಟುಮಾಡುತ್ತದೆಯೆಂಬ ಸಂಗತಿ ಬೆಳಕಿಗೆ ಬಂದಿದೆ.

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ರೂಪಿಸಿರುವ, ಆಸ್ಟ್ರಾಜೆನೆಕಾ ಎಂಬ ಕಂಪನಿ ತಯಾರಿಸಿರುವ ಛಡಾಕ್ಸ್‌1ಎನ್‌ಕೋವ್‌-19 ಲಸಿಕೆ (ಕೋವಿಶೀಲ್ಡ್‌)ಯ ಎರಡನೇ ಹಂತದ ಪ್ರಯೋಗದ ಕುರಿತು ‘ಲ್ಯಾನ್ಸೆಟ್‌’ ಮೆಡಿಕಲ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ. ಅದರಲ್ಲಿ, 56-59 ವರ್ಷದ ವಯೋಮಿತಿಯವರಲ್ಲಿ ಹಾಗೂ 70 ವರ್ಷ ಮೇಲ್ಪಟ್ಟವರಲ್ಲಿ ಕೋವಿಶೀಲ್ಡ್‌ ಅತ್ಯುತ್ತಮ ರೀತಿಯಲ್ಲಿ (ಶೇ.99ರಷ್ಟು) ಕೊರೋನಾ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಹುಟ್ಟುಹಾಕಿದೆ ಎಂದು ವೈದ್ಯಕೀಯ ನಿಯತಕಾಲಿಕೆ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ತಿಳಿಸಿದೆ.

3 ಜಿಲ್ಲೆಗಳ 150 ವಿದ್ಯಾರ್ಥಿಗಳಿಗೆ ಸೋಂಕು: ಶಾಲೆ ಮುಚ್ಚಲು ಸೂಚನೆ! ...

ವಿಶೇಷವೆಂದರೆ, ಈ ಲಸಿಕೆಯಿಂದ ಯುವಕರಲ್ಲಿ ಸೃಷ್ಟಿಯಾಗಿರುವ ರೋಗನಿರೋಧಕ ಶಕ್ತಿಗಿಂತ ವೃದ್ಧರಲ್ಲಿ ಉತ್ತಮ ರೀತಿಯಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿದೆ. ಕೊರೋನಾದಿಂದ ವೃದ್ಧರಿಗೇ ಹೆಚ್ಚು ಅಪಾಯವಿರುವುದರಿಂದ ಕೋವಿಶೀಲ್ಡ್‌ ಮೂಲಕ ವೃದ್ಧರಿಗೆ ವಿಶ್ವಾಸಾರ್ಹ ಲಸಿಕೆಯೊಂದು ದೊರೆತಂತಾಗಲಿದೆ ಎಂದು ಆಕ್ಸ್‌ಫರ್ಡ್‌ ವಿವಿ ಸಂಶೋಧಕರು ಹೇಳಿಕೊಂಡಿದ್ದಾರೆ. ಸುಮಾರು 10,000 ಸ್ವಯಂಸೇವಕರ ಮೇಲೆ ಈಗಾಗಲೇ ಈ ಲಸಿಕೆಯ 3ನೇ ಹಂತದ ಪ್ರಯೋಗವೂ ನಡೆಯುತ್ತಿದೆ. ಅದರ ಫಲಿತಾಂಶ ಕೆಲ ವಾರಗಳಲ್ಲಿ ಹೊರಬರಲಿದೆ.

ಕೋವಿಶೀಲ್ಡ್‌ ಲಸಿಕೆಯನ್ನು ಪುಣೆಯಲ್ಲಿರುವ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಈಗಾಗಲೇ ಉತ್ಪಾದನೆ ಮಾಡಲಾಗುತ್ತಿದೆ. ಈ ಲಸಿಕೆ ಸಂಪೂರ್ಣ ಯಶಸ್ವಿಯಾದರೆ ಭಾರತಕ್ಕೆ ಬೇಗ ಮತ್ತು ಕಡಿಮೆ ಬೆಲೆಯಲ್ಲಿ ಸಿಗಲಿದೆ. ಕೊರೋನಾ ವಿರುದ್ಧ ಈಗಾಗಲೇ ಅಮೆರಿಕದ ಫೈಜರ್‌ ಮತ್ತು ಮಾಡೆರ್ನಾ ಹಾಗೂ ರಷ್ಯಾದ ಸ್ಪುಟ್ನಿಕ್‌ ಲಸಿಕೆಗಳು 3ನೇ ಹಂತದ ಪರೀಕ್ಷೆಯಲ್ಲಿ ಪ್ರಾಥಮಿಕ ಮಟ್ಟದಲ್ಲಿ ಉತ್ತಮ ಫಲಿತಾಂಶ ನೀಡಿವೆ. ಅವುಗಳ ಸಾಲಿಗೆ ಶೀಘ್ರದಲ್ಲೇ ಆಕ್ಸ್‌ಫರ್ಡ್‌ ಲಸಿಕೆಯೂ ಸೇರುವ ಸಾಧ್ಯತೆಯಿದೆ.

Follow Us:
Download App:
  • android
  • ios