Asianet Suvarna News Asianet Suvarna News

ಇಸ್ರೇಲ್‌- ಹಮಾಸ್‌ ಸಮರಕ್ಕೆ ವರ್ಷ: ಇದುವರೆಗೆ 42,000 ಪ್ಯಾಲೇಸ್ತೀನಿಯರು ಬಲಿ

ಕಳೆದ ಒಂದು ವರ್ಷದಿಂದ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಬಲಿಯಾದ ಪ್ಯಾಲೆಸ್ತೀನಿಗಳ ಸಂಖ್ಯೆ 42 ಸಾವಿರ ದಾಟಿದೆ ಎಂದು ಗಾಜಾದ ಅಧಿಕಾರಿಗಳು ಹೇಳಿದ್ದಾರೆ.

One Year On: Israel-Hamas Conflict Intensifies
Author
First Published Oct 7, 2024, 9:32 AM IST | Last Updated Oct 7, 2024, 9:36 AM IST

ಜೆರುಸಲೇಂ/ದೇರ್‌ ಅಲ್‌ ಬಲಾಹ್‌/ಬೈರೂತ್‌: ಇರಾನ್‌ ಬೆಂಬಲಿತ ಉಗ್ರ ಸಂಘಟನೆಗಳ ಮೇಲಿನ ದಾಳಿಯನ್ನು ಮುಂದುವರೆಸಿರುವ ಇಸ್ರೇಲ್‌, ಭಾನುವಾರ ಗಾಜಾದಲ್ಲಿ ಹಮಾಸ್‌ ಉಗ್ರರ ತಾಣವಾಗಿದೆ ಎನ್ನಲಾದ ಮಸೀದಿ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರ ನೆಲೆಯಾಗಿದೆ ಎನ್ನಲಾದ ಕಟ್ಟಡಗಳ ಮೇಲೆ ದಾಳಿ ನಡೆಸಿದೆ. ಈ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ. ಗಾಜಾ ಮೇಲೆ ಇಸ್ರೇಲ್‌ ಯುದ್ಧ ಸಾರಿ ಇಂದಿಗೆ 1 ವರ್ಷ ತುಂಬಿದ್ದು, ಅದರ ನಡುವೆಯೇ ಈ ದಾಳಿ ನಡೆದಿದೆ.

ಗಾಜಾ ಮೇಲೆ ಭೀಕರ ದಾಳಿ:

ಗಾಜಾಪಟ್ಟಿ ಪ್ರದೇಶದ ದೇರ್‌ ಅಲ್‌ ಬಲಾಹ್‌ ನಗರದ ಮಸೀದಿಯೊಂದರ ಮೇಲೆ ಇಸ್ರೇಲ್‌ ಭಾನುವಾರ ವೈಮಾನಿಕ ದಾಳಿ ನಡೆಸಿದೆ. ಈ ಮಸೀದಿಯನ್ನು ಹಮಾಸ್‌ ಉಗ್ರರು ತಮ್ಮ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ ಆಗಿ ಬಳಸಿಕೊಳ್ಳುತ್ತಿದ್ದರು ಈ ಹಿನ್ನೆಲೆಯಲ್ಲಿ ಅದರ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ಅಲ್‌ ಮಕ್ಸಾ ಆಸ್ಪತ್ರೆಯ ಸಮೀಪವೇ ಇರುವ ಈ ಮಸೀದಿಯಲ್ಲಿ ಕಳೆದೊಂದು ವರ್ಷದಿಂದ ನಿರಾಶ್ರಿತರು ತಂಗಿದ್ದರು. ಅದರ ಮೇಲೆ ನಡೆದ ದಾಳಿಯಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇಸ್ರೇಲ್‌ ನಡೆಸುತ್ತಿರುವ ದಾಳಿಯಲ್ಲಿ ಬಲಿಯಾದ ಪ್ಯಾಲೆಸ್ತೀನಿಗಳ ಸಂಖ್ಯೆ 42 ಸಾವಿರ ದಾಟಿದೆ ಎಂದು ಗಾಜಾದ ಅಧಿಕಾರಿಗಳು ಹೇಳಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಸುಳಿವು: ಇಸ್ರೇಲ್ ಹೆಚ್ಚು ದಿನ ಇರಲ್ಲ, ಇರಾನ್ ಬಹಿರಂಗ ಘೋಷಣೆ

ಇದಲ್ಲದೇ ಉತ್ತರ ಗಾಜಾದ ಜಬಲಿಯಾ ನಗರದ ಮೇಲೂ ಇದೇ ಮೊದಲ ಬಾರಿಗೆ ದಾಳಿ ನಡೆಸಿದೆ. 1948ರ ಇಸ್ರೇಲ್‌ ಯುದ್ಧದ ಬಳಿಕ ಇಲ್ಲಿ ಭಾರೀ ದೊಡ್ಡ ಪ್ರಮಾಣದ ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿತ್ತು, ಆ ಪ್ರದೇಶಗಳ ಮೇಲೆ ಇದೀಗ ದಾಳಿ ನಡೆಸಲಾಗಿದೆ.

ಲೆಬನಾನ್‌ನಲ್ಲಿ ಮುಂದುವರಿದ ದಾಳಿಗೆ 23 ಬಲಿ:

ಇನ್ನೊಂದೆಡೆ ಲೆಬನಾನ್‌ನಲ್ಲಿನ ಹಿಜ್ಬುಲ್ಲಾ ಉಗ್ರರ ನೆಲೆ ಎನ್ನಲಾದ ರಾಜಧಾನಿ ಬೈರೂತ್‌ನ ಹಲವು ಪ್ರದೇಶಗಳ ಮೇಲೆ, ಸಮೀಪದ ನಬಟೈ, ಬೆಕ್ಕಾ, ಬಾಲ್ಬೇಕ್‌-ಹೆರ್ಮೆಲ್‌, ಮೌಂಟ್‌ ಲೆಬನಾನ್‌ ಪ್ರದೇಶಗಳ ಮೇಲೆ ಇಸ್ರೇಲ್‌ ಭಾನುವಾರ ವೈಮಾನಿಕ ದಾಳಿ ನಡೆಸಿದೆ ಕನಿಷ್ಠ 30 ಕ್ಷಿಪಣಿಗಳನ್ನು ಬಳಸಿ ಭಾನುವಾರ ಲೆಬನಾನ್‌ನ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಈ ದಾಳಿಯಲ್ಲಿ 23 ಜನರು ಸಾವನ್ನಪ್ಪಿ 93 ಜನರು ಗಾಯಗೊಂಡಿದ್ದಾರೆ.

ಹಿಜ್ಬುಲ್ಲಾಗಳ ಪ್ರತಿದಾಳಿ:

ಮತ್ತೊಂದೆಡೆ ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಸೇನೆಯ ಭೂದಾಳಿಯನ್ನು ಹಿಮ್ಮೆಟ್ಟಿಸುವ ಸಲುವಾಗಿ ಹಿಜ್ಬುಲ್ಲಾ ಉಗ್ರರು ಕೂಡಾ ಭಾರೀ ಪ್ರಮಾಣದ ರಾಕೆಟ್‌ ಬಳಸಿ ಪ್ರತಿದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಸ್ವಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಇಸ್ರೇಲ್‌ನ ಅಜೇಯ ಶಕ್ತಿ: ಶತ್ರುಗಳ ನಿದ್ದೆಗೆಡಿಸುವ ರಹಸ್ಯ ಅಸ್ತ್ರಗಳೇನು?

ಮತ್ತೊಂದೆಡೆ, ಇಸ್ರೇಲ್‌ನ ಬೀರ್‌ಶೇಬಾ ಎಂಬಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇದರಲ್ಲಿ ಒಬ್ಬಳು ಸಾವನ್ನಪ್ಪಿದ್ದಾಳೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ. ಆದರೆ ದಾಳಿ ನಡೆಸಿದ ಭಯೋತ್ಪಾದಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೊಂದು ಕಡೆ ಇಸ್ರೇಲ್‌ ಮೇಲೆ ಗಾಜಾದಿಂದ ಹಮಾಸ್‌ ಕ್ಷಿಪಣಿಗಳನ್ನು ಹಾರಿಸಿದೆ.  ಭಾನುವಾರ ಇಸ್ರೇಲ್‌ನ ಬೀರ್‌ಶೆಬಾದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಆಗ ಸ್ಥಳಕ್ಕೆ ಭದ್ರತಾ ಪಡೆಗಳು ಆಗಮಿಸಿ ದಾಳಿಕೋರನ ಮೇಲೇ ಪ್ರತಿದಾಳಿ ಮಾಡಿ ಆತನನ್ನು ಸಾಯಿಸಿವೆ. ಗುಂಡಿನ ದಾಳಿಯು 1 ವಾರದಲ್ಲಿ ಇಸ್ರೇಲ್‌ನಲ್ಲಿ ನಡೆದ 2ನೇ ಭಯೋತ್ಪಾದಕ ದಾಳಿ ಆಗಿದೆ. ಕಳೆದ ಮಂಗಳವಾರ ಮೊದಲ ದಾಳಿ ನಡೆದಿತ್ತು.

ಗಾಜಾದಿಂದ ಕ್ಷಿಪಣಿ ಮಳೆ:
ಇನ್ನೊಂದು ಕಡೆ ಇಸ್ರೇಲ್‌ ಮೇಲೆ ಗಾಜಾದಿಂದ ಹಮಾಸ್‌ ಉಗ್ರರು ಕ್ಷಿಪಣಿಗಳನ್ನು ಹಾರಿಸಿದ್ದಾರೆ. 1 ಕ್ಷಿಪಣಿಯನ್ನು ಪ್ರತಿರೋಧಕ ಬಳಸಿ ಹೊಡೆದುರುಳಿಸಲಾಗಿದೆ. ಇನ್ನು ಉಳಿದ ಕ್ಷಿಪಣಿಗಳು ಬಯಲು ಪ್ರದೇಶದಲ್ಲಿ ಬಿದ್ದಿವೆ. ಯಾರಿಗೂ ಅಪಾಯ ಆಗಿಲ್ಲ ಎಂದು ಇಸ್ರೇಲಿ ಸೇನೆ ಹೇಳಿದೆ.

Latest Videos
Follow Us:
Download App:
  • android
  • ios