ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದಾಗಿರುವ ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿದೆ. 2023ರ ಕೊನೆಯ ಎರಡು ತ್ರೈಮಾಸಿಕದಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಕುಸಿದಿದ್ದು, ಹಣದುಬ್ಬರ ಹಾಗೂ ಜೀವನ ನಿರ್ವಹಣೆ ವೆಚ್ಚದ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ.

ಲಂಡನ್‌: ಜಗತ್ತಿನ ಬಲಾಢ್ಯ ಆರ್ಥಿಕತೆಗಳಲ್ಲಿ ಒಂದಾಗಿರುವ ಬ್ರಿಟನ್‌ನಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿದೆ. 2023ರ ಕೊನೆಯ ಎರಡು ತ್ರೈಮಾಸಿಕದಲ್ಲಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಕುಸಿದಿದ್ದು, ಹಣದುಬ್ಬರ ಹಾಗೂ ಜೀವನ ನಿರ್ವಹಣೆ ವೆಚ್ಚದ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ.

ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವ ಭರವಸೆಯೊಂದಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಭಾರತೀಯ ಮೂಲದ ರಿಷಿ ಸುನಕ್‌ಗೆ ಇದು ಆಘಾತ ತಂದಿದೆ. ಅಲ್ಲದೆ, ಬ್ರಿಟನ್‌ನಲ್ಲಿ ಈ ವರ್ಷ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಆರ್ಥಿಕ ಹಿಂಜರಿಕೆಯಿಂದ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷಕ್ಕೆ ಹಿನ್ನಡೆಯಾಗುವ ಆತಂಕ ಉಂಟಾಗಿದೆ. 2023ರ ಕೊನೆಯ ಎರಡು ತ್ರೈಮಾಸಿಕಗಳಲ್ಲಿ ಬ್ರಿಟನ್‌ನ ಜಿಡಿಪಿ ಕ್ರಮವಾಗಿ ಶೇ.0.1 ಹಾಗೂ ಶೇ.0.3ರಷ್ಟು ಕುಸಿದಿದೆ. ಸತತ ಎರಡು ಅವಧಿಗೆ ಜಿಡಿಪಿ ಕುಸಿದರೆ ಅದನ್ನು ಆರ್ಥಿಕ ಹಿಂಜರಿಕೆ ಎಂದು ಹೇಳಲಾಗುತ್ತದೆ. ದೇಶದಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿರುವುದನ್ನು ಸರ್ಕಾರದ ಅಂಕಿಅಂಶ ಇಲಾಖೆಯೇ ಪ್ರಕಟಿಸಿದೆ.

‘2023ರ ಕೊನೆಯ ಎರಡು ತ್ರೈಮಾಸಿಕದಲ್ಲಿ ಉತ್ಪಾದನೆ, ನಿರ್ಮಾಣ, ಸಗಟು ವ್ಯಾಪಾರ ಸೇರಿದಂತೆ ಆರ್ಥಿಕತೆಯ ಎಲ್ಲಾ ಪ್ರಮುಖ ವಿಭಾಗಗಳೂ ಕುಸಿದಿವೆ’ ಎಂದು ಅಂಕಿಅಂಶ ಇಲಾಖೆ ತಿಳಿಸಿದೆ. ಕೊರೋನಾ ಬಳಿಕ ಬ್ರಿಟನ್‌ನಲ್ಲಿ ಉಂಟಾದ ಮೊದಲ ಆರ್ಥಿಕ ಹಿಂಜರಿಕೆ ಇದಾಗಿದೆ. ಇದು ಲೇಬರ್‌ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷವನ್ನು ಎದುರಿಸಲು ದೊಡ್ಡ ರಾಜಕೀಯ ಅಸ್ತ್ರ ನೀಡಿದೆ ಎಂದು ವಿಶ್ಲೇಷಿಸಲಾಗಿದೆ.