ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಚೀನಾದ ಗೂಢಚಾರಿಕೆ ಕಾರ್ಯಾಚರಣೆಯ ಗುರಿಯಾಗಿದ್ದಾರೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ನಿಕಟ ಸಂಬಂಧದ ಮೂಲಕ ಜಾಗತಿಕ ಎಐ ಉದ್ಯಮದ ಮೇಲೆ ಪ್ರಭಾವ ಬೀರಲು ಚೀನಾ ಯತ್ನಿಸುತ್ತಿದೆ ಎಂದು ಅಮೆರಿಕ ಶಂಕಿಸಿದೆ.

ವಾಷಿಂಗ್ಟನ್ / ಬೀಜಿಂಗ್: ಜಾಗತಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ರಾಂತಿಯ ಹರಿಕಾರ, ಎನ್‌ವಿಡಿಯಾ (Nvidia) ಸಂಸ್ಥೆಯ ಸಿಇಒ 63 ವರ್ಷದ ಜೆನ್ಸನ್ ಹುವಾಂಗ್ ಚೀನಾದ ಗೂಢಚಾರಿಕೆ ಕಾರ್ಯಾಚರಣೆಯ ಗುರಿಯಾಗಿದ್ದಾರೆ ಎಂಬ ಆಘಾತಕಾರಿ ವರದಿ ಹೊರಬಿದ್ದಿದೆ. ಬೀಜಿಂಗ್‌ನ ಗುಪ್ತಚರ ಸಂಸ್ಥೆಗಳ ಪರ ಕೆಲಸ ಮಾಡುತ್ತಿದ್ದಾರೆಂದು ಶಂಕಿಸಲಾದ ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗೆ ಜೆನ್ಸನ್ ಹುವಾಂಗ್ ನಿಕಟ ಪ್ರೇಮ- ಪ್ರಣಯ ಸಂಬಂಧ ಹೊಂದಿದ್ದು, ಈ ಮೂಲಕ ಜಾಗತಿಕ AI ಉದ್ಯಮದ ಮೇಲೆ ಪ್ರಭಾವ ಬೀರಲು ಚೀನಾ ಯತ್ನಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿವೆ.

ಅಮೆರಿಕದ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ದಿಗ್ಗಜನ ಸುತ್ತ ಹೆಣೆದುಕೊಂಡಿರುವ ಈ ಗೂಢಚಾರಿಕಾ ಜಾಲವು ತಂತ್ರಜ್ಞಾನ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಅಮೆರಿಕನ್ ಪತ್ರಿಕೆಯಿಂದ ಗೌಪ್ಯ ಮೌಲ್ಯಮಾಪನ ವರದಿ

ಅಮೆರಿಕ ಪ್ರಕಟಿಸಿರುವ ತನಿಖಾ ವರದಿಗಳ ಪ್ರಕಾರ, ಅಮೆರಿಕದ ಗುಪ್ತಚರ ಸಂಸ್ಥೆಗಳು ಜೆನ್ಸನ್ ಹುವಾಂಗ್ ಹಾಗೂ ಆಲಿಸ್ ಹುವಾಂಗ್ ನಡುವಿನ ನಿಕಟ ಸಂಬಂಧವನ್ನು ವಿವರಿಸುವ ವರ್ಗೀಕೃತ ಜ್ಞಾಪಕ ಪತ್ರವನ್ನು ಸಿದ್ಧಪಡಿಸಿವೆ. ಈ ರಹಸ್ಯ ವರದಿಯನ್ನು ಯುಎಸ್ ಸರ್ಕಾರದ ಉನ್ನತ ಮಟ್ಟದ ಅತ್ಯಂತ ಸಣ್ಣ ಅಧಿಕಾರಿಗಳ ಬಳಗಕ್ಕೆ ಪ್ರಸಾರ ಮಾಡಲಾಗಿದೆ.

ಜೂನ್ 2024 (ತೈಪೆ): ತೈವಾನ್‌ನ ತೈಪೆಯಲ್ಲಿ ನಡೆದ ಬಿಸಿನೆಸ್ ಟ್ರೇಡ್ ಶೋ ಒಂದರ ನಂತರ ಬಾರ್‌ನಲ್ಲಿ ಇಬ್ಬರೂ ಒಟ್ಟಿಗೆ ವಿಸ್ಕಿ ಕುಡಿಯುತ್ತಿರುವ ಛಾಯಾಚಿತ್ರಗಳು 'ನೆಟ್‌ಥಂಡರ್' ಸಂಸ್ಥೆಯ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಕಂಡುಬಂದಿದ್ದವು.

ಮೇ 2025 (ಕಂಪ್ಯೂಟೆಕ್ಸ್): ತೈಪೆಯ ಪ್ರಸಿದ್ಧ 'ಕಂಪ್ಯೂಟೆಕ್ಸ್' ತಂತ್ರಜ್ಞಾನ ಮೇಳದ ವೇಳೆ ಜೆನ್ಸನ್ ಹುವಾಂಗ್ ಆಯೋಜಿಸಿದ್ದ ಭೋಜನಕೂಟದಲ್ಲಿ ಆಲಿಸ್ ಹುವಾಂಗ್ ಸಿಇಒ ಪಕ್ಕದಲ್ಲೇ ಕುಳಿತು, ಅತ್ಯಂತ ನಿಕಟವಾಗಿ ಬೆರೆತಿರುವುದು ಹಾಗೂ ಕಾರ್ಯಕ್ರಮದ ನಂತರ ಇಬ್ಬರೂ ಒಂದೇ ಕಾರಿನಲ್ಲಿ ತೆರಳಿರುವುದು ವಿಡಿಯೋ ಮತ್ತು ಫೋಟೋ ಸಾಕ್ಷ್ಯಗಳಿಂದ ತಿಳಿದುಬಂದಿದೆ.

ಯಾರು ಈ ಆಲಿಸ್ ಹುವಾಂಗ್? ಮೆಗಾಸ್ಪೀಡ್ ಸಂಸ್ಥೆಯ ಚೀನಾ ಲಿಂಕ್!

ಆಲಿಸ್ ಹುವಾಂಗ್ (ಹುವಾಂಗ್ ಲೆ) ಆರಂಭದಲ್ಲಿ ಚೀನಾದ ಸರ್ಕಾರಿ ಸುದ್ದಿ ವಾಹಿನಿಗಳಾದ CCTV, ಹುನಾನ್ ಟಿವಿ ಹಾಗೂ HSBC ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ನಂತರ ಅವರು ಸಿಂಗಾಪುರ ಮೂಲದ 'ಮೆಗಾಸ್ಪೀಡ್ ಇಂಟರ್ನ್ಯಾಷನಲ್' ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾದರು.

ಮೆಗಾಸ್ಪೀಡ್ ಸಂಸ್ಥೆಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಎನ್‌ವಿಡಿಯಾದ ಪ್ರಮುಖ ಕ್ಲೌಡ್ ಕಂಪ್ಯೂಟಿಂಗ್ ಪಾಲುದಾರ ಸಂಸ್ಥೆಯಾಗಿದೆ. ಈ ಕಂಪನಿಯು ಕೇವಲ ಎರಡೇ ವರ್ಷಗಳಲ್ಲಿ ಅಂದಾಜು ₹40,000 ಕೋಟಿಗೂ ಹೆಚ್ಚು ಮೌಲ್ಯದ ಎನ್‌ವಿಡಿಯಾ AI ಚಿಪ್‌ಗಳನ್ನು ಖರೀದಿಸಿದೆ.

ಯುಎಸ್ ನಿರ್ಬಂಧ ಮತ್ತು ಅಕ್ರಮ ಚಿಪ್ ಸರಬರಾಜು ಆರೋಪ

ಚೀನಾದ ಮಿಲಿಟರಿ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ತಡೆಯುವ ಉದ್ದೇಶದಿಂದ ವಾಷಿಂಗ್ಟನ್ ಆಡಳಿತವು ತನ್ನ ಅತ್ಯಾಧುನಿಕ AI ಪ್ರೊಸೆಸರ್ ಹಾಗೂ ಚಿಪ್‌ಗಳ ರಫ್ತಿನ ಮೇಲೆ ತೀವ್ರ ನಿರ್ಬಂಧ ಹೇರಿದೆ. ಆದರೆ, ಮೆಗಾಸ್ಪೀಡ್ ಸಂಸ್ಥೆಯು ಈ ನಿಯಮಗಳನ್ನು ಉಲ್ಲಂಘಿಸಿ ಎನ್‌ವಿಡಿಯಾ ಪ್ರೊಸೆಸರ್‌ಗಳನ್ನು ಕದ್ದುಮುಚ್ಚಿ ಚೀನಾಕ್ಕೆ ಸರಬರಾಜು ಮಾಡುತ್ತಿದೆ ಎಂಬ ಗಂಭೀರ ಅನುಮಾನ 2024ರಿಂದಲೇ ಅಮೆರಿಕನ್ ಏಜೆನ್ಸಿಗಳಿಗಿತ್ತು.

ಈ ತನಿಖೆಯ ಭಾಗವಾಗಿ 2025ರಲ್ಲಿ ಸಿಂಗಾಪುರ ತನಿಖಾಧಿಕಾರಿಗಳು ಆಲಿಸ್ ಹುವಾಂಗ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಸದ್ಯ ಮೆಗಾಸ್ಪೀಡ್ ಹಾಗೂ ಎನ್‌ವಿಡಿಯಾ ಕಂಪನಿಗಳು ಈ ಎಲ್ಲಾ ಅಕ್ರಮ ನಿಯಮ ಉಲ್ಲಂಘನೆಯ ಆರೋಪಗಳನ್ನು ತಳ್ಳಿಹಾಕಿವೆಯಾದರೂ, ಯುಎಸ್ ಗುಪ್ತಚರ ಸಂಸ್ಥೆಗಳು ಈ ಚೀನೀ ಗೂಢಚಾರಿಕೆಯ ಜಾಲವನ್ನು ಅತ್ಯಂತ ಗಂಭೀರವಾಗಿ ಪರಿಶೀಲಿಸುತ್ತಿವೆ.