ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!
ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!| 2012ರಿಂದ 2018ರ ನಡುವೆ ಭಾರತದ ಉಪಗ್ರಹಗಳ ಮೇಲೆ ಹಲವು ಬಾರಿ ಸೈಬರ್ ದಾಳಿ| ನಮಗೆ ಏನೂ ಹಾನಿಯಾಗಿಲ್ಲ, ಚೀನಾ ದಾಳಿ ನಡೆಸಿದ್ದರೆ ಅವೆಲ್ಲ ವಿಫಲವಾಗಿವೆ: ಇಸ್ರೋ
ನವದೆಹಲಿ(ಸೆ.24): ಗಡಿಯಲ್ಲಿ ನಿರಂತರವಾಗಿ ಭಾರತದ ಭೂಭಾಗಗಳನ್ನು ಕಬಳಿಸಲು ಹಾಗೂ ಭಾರತೀಯ ಯೋಧರ ಮೇಲೆ ಆಗಾಗ ದಾಳಿ ನಡೆಸಲು ಯತ್ನಿಸುತ್ತಿರುವ ಚೀನಾ ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿ ನಡೆಸಲು ಹಲವು ಬಾರಿ ಯತ್ನಿಸಿ ವಿಫಲವಾಗಿದೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
2012 ಹಾಗೂ 2018ರ ನಡುವೆ ಭಾರತದ ಸಂಪರ್ಕ ಉಪಗ್ರಹಗಳ ಮೇಲೆ ಹಲವು ಬಾರಿ ಚೀನಾ ಸೈಬರ್ ದಾಳಿ ನಡೆಸಿ ಈ ಉಪಗ್ರಹಗಳನ್ನು ನಿಷ್ಕಿ್ರಯಗೊಳಿಸಲು ಯತ್ನಿಸಿದೆ. ಆದರೆ, ಅವೆಲ್ಲವೂ ವಿಫಲವಾಗಿವೆ. ಏಕೆಂದರೆ ಚೀನಾದ ದಾಳಿಯಿಂದ ಭಾರತದ ಉಪಗ್ರಹಗಳ ಕಾರ್ಯನಿರ್ವಹಣೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗಿಲ್ಲ. ಅಂತಹ ದಾಳಿಗಳಿಂದ ಏನೂ ಸಮಸ್ಯೆಯಾಗದ ರೀತಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಉಪಗ್ರಹಗಳನ್ನು ಸಿದ್ಧಪಡಿಸಿದೆ.
ಭಾರತದ ಉಪಗ್ರಹಗಳ ಮೇಲೆ ಚೀನಾದ ಸಂಪರ್ಕ ಜಾಲದ ಕಂಪ್ಯೂಟರ್‌ನಿಂದ ದಾಳಿಗೆ ವಿಫಲ ಯತ್ನಗಳು ನಡೆದಿರುವ ಬಗ್ಗೆ ಅಮೆರಿಕದ ಚೀನಾ ಏರೋಸ್ಪೇಸ್ ಸ್ಟಡೀಸ್ ಇನ್‌ಸ್ಟಿಟ್ಯೂಟ್ (ಸಿಎಎಸ್‌ಐ) ಎಂಬ ಸಂಸ್ಥೆ 142 ಪುಟಗಳ ವರದಿ ಸಿದ್ಧಪಡಿಸಿದೆ. ಈ ಸಂಸ್ಥೆ ಅಮೆರಿಕದ ವಾಯುಪಡೆ ಹಾಗೂ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಿಗೆ ರಹಸ್ಯ ವರದಿಗಳನ್ನು ನೀಡುತ್ತಿರುತ್ತದೆ. ಅದರಲ್ಲಿ ಭಾರತಕ್ಕೆ ಸಂಬಂಧಪಟ್ಟವರದಿ ಭಾರತದ ಕೆಲ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಕುರಿತು ಮಾಧ್ಯಮಗಳು ಇಸ್ರೋದ ವಿಜ್ಞಾನಿಗಳನ್ನು ಸಂಪರ್ಕಿಸಿದಾಗ ‘ನಮ್ಮ ಉಪಗ್ರಹಗಳ ಮೇಲೆ ಸೈಬರ್ ದಾಳಿಗೆ ಯತ್ನಗಳು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಆ ದಾಳಿಗಳು ಎಲ್ಲಿಂದ ನಡೆದಿವೆ ಎಂಬುದು ನಮಗೆ ತಿಳಿದಿಲ್ಲ. ಒಂದು ವೇಳೆ ಚೀನಾ ದಾಳಿ ನಡೆಸಿದ್ದರೂ ಅದರಿಂದ ನಮ್ಮ ಉಪಗ್ರಹಗಳಿಗೆ ಏನೂ ಆಗಿಲ್ಲ. ಹೀಗಾಗಿ ಅವರ ದಾಳಿ ವಿಫಲವಾಗಿದೆ’ ಎಂದು ಹೇಳಿದ್ದಾರೆ.