ವಂಶವಾಹಿ ತಿದ್ದುವ ತಂತ್ರಜ್ಞಾನ ಶೋಧಿಸಿದ ಇಬ್ಬರಿಗೆ ನೊಬೆಲ್‌| ಫ್ರಾನ್ಸ್‌, ಅಮೆರಿಕ ಸ್ತ್ರೀಯರಿಗೆ ರಸಾಯನಶಾಸ್ತ್ರ ಗೌರವ| ಜೆನೆಟಿಕ್‌ ಸಿಸರ್‌ ಶೋಧಿಸಿ ಜೀವ ವಿಜ್ಞಾನದಲ್ಲಿ ಕ್ರಾಂತಿ

ಸ್ಟಾಕ್‌ಹೋಮ್‌(ಅ.08: ವಂಶವಾಹಿ(ಜೀನ್‌)ಗಳನ್ನು ತಿದ್ದುವ ನವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಮೂಲಕ ಜೀವ ವಿಜ್ಞಾನದಲ್ಲಿ ಹೊಸ ಕ್ರಾಂತಿಗೆ ಕಾರಣರಾದ ಮಹಿಳಾ ವಿಜ್ಞಾನಿಗಳಾದ ಫ್ರಾನ್ಸ್‌ನ ಎಮ್ಯಾನುಯೆಲ್‌ ಶಾರ್ಪೆಂಟಿಯರ್‌ ಮತ್ತು ಅಮೆರಿಕದ ಜೆನ್ನಿಫರ್‌ ಡೌಡ್ನಾ ಅವರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಸಾಯನ ಶಾಸ್ತ್ರ ನೊಬೆಲ್‌ ಪುರಸ್ಕಾರ ಘೋಷಿಸಲಾಗಿದೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು 8.2 ಕೋಟಿ ರು. ನಗದು ಬಹುಮಾನ ಹೊಂದಿದೆ.

ಏನು ಸಂಶೋಧನೆ?: ಸಸ್ಯಗಳು, ಬ್ಯಾಕ್ಟೀರಿಯಾ ಮತ್ತು ಪ್ರಾಣಿಗಳ ವಂಶವಾಹಿಗಳನ್ನು ತಿದ್ದುವ ಮೂಲಕ ನಮಗೆ ಬೇಕಾದ ಹಾಗೆ ಮಾರ್ಪಾಡು ಮಾಡುವ ಕಲೆ ಶತಮಾನಗಳ ಹಿಂದೆಯೇ ಮಾನವನಿಗೆ ಸಿದ್ಧಿಸಿದೆ. ಹೀಗೆ ಜೀನ್‌ಗಳನ್ನು ತಿದ್ದುವ ಮೂಲಕ ಸಸ್ಯ ಅಥವಾ ಪ್ರಾಣಿಗಳಲ್ಲಿನ ದೋಷ ಸರಿಪಡಿಸುವ ಕೆಲಸವನ್ನು ಮಾಡಿಕೊಂಡು ಬರಲಾಗಿದೆ. ಇದು ಅತ್ಯಂತ ಕ್ಷಿಷ್ಟಪ್ರಕ್ರಿಯೆ. ಈ ನಡುವೆ ಎಮ್ಯಾನುಯೆಲ್ಲೆ ಶಾರ್ಪೆಂಟಿಯರ್‌ ಮತ್ತು ಜೆನ್ನಿಫರ್‌ ಡೌಡ್ನಾ ಜೋಡಿ 2012ರಲ್ಲಿ ‘ಸಿಆರ್‌ಐಎಸ್‌ಪಿಆರ್‌/ಸಿಎಎಸ್‌9 ಜೆನೆಟಿಕ್‌ ಸಿಸರ್‌’ ಎಂಬ ತಂತ್ರಜ್ಞಾನ ಸಂಶೋಧಿಸಿದೆ. ಇದು ಯಾವುದೇ ಜೀನ್‌ಗಳನ್ನು ಅತ್ಯಂತ ಕರಾರುವಾಕ್ಕಾಗಿ ತಿದ್ದುವ ಸಾಮರ್ಥ್ಯ ಹೊಂದಿದೆ. ಈ ತಂತ್ರಜ್ಞಾನ ಜೀವ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದೆ. ಕ್ಯಾನ್ಸರ್‌ ಮತ್ತು ಹಲವು ವಂಶವಾಹಿ ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸಲು ನೆರವಾಗಿದೆ ಎಂದು ನೊಬೆಲ್‌ ಮಂಡಳಿ ತಿಳಿಸಿದೆ.

ಗುರುವಾರದ ಘೋಷಣೆಯೊಂದಿಗೆ ವೈದ್ಯಕೀಯ, ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರ ನೊಬೆಲ್‌ ಪ್ರಕಟ ಆದಂತೆ ಆಗಿದೆ. ಇನ್ನು ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರಶಸ್ತಿಗಳು ಘೋಷಣೆಯಾಗಬೇಕಿವೆ.