ಕೊರೋನಾ ವೈರಸ್‌ ಹುಟ್ಟಿನ ಮರುತನಿಖೆಗೆ ಚೀನಾ ನಕಾರ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮ ರಾಜಕೀಯ ಪ್ರೇರಿತ ಎಂದ ಚೀನಾ

ಬೀಜಿಂಗ್‌(ಆ.14): ವಿಶ್ವದೆಲ್ಲೆಡೆ 40 ಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಕೊರೋನಾ ವೈರಸ್‌ನ ಮೂಲ ಪತ್ತೆಗೆ ಹೊಸದಾಗಿ ತನಿಖೆ ನಡೆಸುವ ವಿಶ್ವ ಆರೋಗ್ಯ ಸಂಘಟನೆಯ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ. ವೈರಸ್‌ ಹುಟ್ಟಿನ ಬಗ್ಗೆ ವೈಜ್ಞಾನಿಕ ತನಿಖಾ ಸಂಗತಿಯನ್ನು ಚೀನಾ ಬೆಂಬಲಿಸುತ್ತದೆ. ಆದರೆ, ರಾಜಕೀಯ ಪ್ರೇರಿತ ತನಿಖೆಯನ್ನು ಖಂಡಿತವಾಗಿಯೂ ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ವೈರಸ್‌ನ ಉಗಮವನ್ನು ಪತ್ತೆ ಹಚ್ಚುವ ನಿಟ್ಟಿನಿಂದ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ 2021 ಜನವರಿಯಲ್ಲಿ ವುಹಾನ್‌ಗೆ ಭೇಟಿ ನೀಡಿ ಮೊದಲ ಹಂತದ ವರದಿಯನ್ನು ಸಲ್ಲಿಸಿತ್ತು. ಆದರೆ, ಕೊರೋನಾ ವೈರಸ್‌ ಉಗಮದ ಬಗ್ಗೆ ಒಂದು ಸ್ಪಷ್ಟವಾದ ನಿಲುವಿಗೆ ಬರಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮರು ತನಿಖೆಗೆ ಪೂರಕವಾಗಿ ಆರಂಭಿಕ ಕೊರೋನಾ ಪ್ರಕರಣಕ್ಕೆ ಸಂಬಂಧಿಸಿದ ಕಚ್ಚಾ ದತ್ತಾಂಶಗಳನ್ನು ಹಂಚಿಕೊಳ್ಳುವಂತೆ ಚೀನಾವನ್ನು ಕೇಳಿದೆ.

2 ಲಸಿಕೆ ಪಡೆದರೆ ಸೋಂಕು ತಗಲುವ ಸಾಧ್ಯತೆ ಅರ್ಧಕ್ಕರ್ಧ ಇಳಿಕೆ

ಆದರೆ, ಇದಕ್ಕೆ ನಿರಾಕರಿಸಿರುವ ಚೀನಾ, ಈಗಾಗಲೇ ನಡೆಸಿರುವ ತನಿಖೆಯೇ ಸಾಕು. ಮತ್ತೊಮ್ಮೆ ತನಿಖೆ ನಡೆಸಬೇಕಾದ ಅಗತ್ಯವಿಲ್ಲ. ಹೆಚ್ಚುವರಿ ದತ್ತಾಂಶಗಳನ್ನು ಸಂಗ್ರಹಿಸುತ್ತಿರುವುದರ ಹಿಂದಿನ ಉದ್ದೇಶ ವೈಜ್ಞಾನಿಕ ತನಿಖೆಗಿಂತಲೂ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿದೆ. ರಾಜಕೀಯ ನಡೆಯನ್ನು ನಾವು ವಿರೋಧಿಸುತ್ತೇವೆ ಎಂದು ತಿಳಿಸಿದೆ.

ಚೀನಾದ ವುಹಾನ್‌ ಲ್ಯಾಬ್‌ನಿಂದಲೇ ಕೊರೋನಾ ವೈರಸ್‌ ಹರಡಿದೆ ಎಂಬುದನ್ನು ಅಮೆರಿಕ ವಾದಿಸುತ್ತಿದೆ. ಆದರೆ, ಈ ವಾದವನ್ನು ಚೀನಾ ನಿರಾಕರಿಸುತ್ತಲೇ ಬಂದಿದೆ.