ವಿಶ್ವಸಂಸ್ಥೆಯಲ್ಲಿ ನಿತ್ಯಾನಂದ ಸಂಚಲನ, UN ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿ ಭಾಗಿ, ಭಾರತದ ವಿರುದ್ಧ ದೂರು!
ಭಾರತದಿಂದ ಪಾರಾರಿಯಾಗಿರುವ ಸ್ವಾಮಿ ನಿತ್ಯಾನಂದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಅನ್ನೋ ಹೊಸ ದೇಶ ನಿರ್ಮಿಸಿರುವುದು ಹಳೇ ವಿಚಾರ. ಇದೀಗ ನಿನ್ನೆ ಮೊನ್ನೆ ಸೃಷ್ಟಿಯಾದ ರಾಷ್ಟ್ರ ಪ್ರತಿಷ್ಠಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ವಿರುದ್ಧವೇ ದೂರು ನೀಡಿದೆ. ಕೈಲಾಸದಲ್ಲಿ ಕುಳಿತ ನಿತ್ಯಾನಂದ ಇದೀಗ ವಿಶ್ವಸಂಸ್ಥಯಲ್ಲೂ ಮೋಡಿ ಮಾಡಿದ್ದಾರೆ.
ಜಿನೆವಾ(ಫೆ.28): ವಿವಾದಿತ ಸ್ವಯಂ ಘೋಷಿತ ದೇವಮಾನ ಬಿಡದಿ ನಿತ್ಯಾನಂದ ಇದೀಗ ಮತ್ತೆ ಬಾರಿ ಸಂಚಲನ ಸೃಷ್ಟಿಸಿದ್ದಾರೆ. ಹಲವು ಆರೋಪಗಳನ್ನು ಹೊತ್ತು ಭಾರತದಿಂದ ಪರಾರಿಯಾಗಿ ದ್ವೀಪ ರಾಷ್ಟ್ರ ಖರೀದಿಸಿ ಕೈಲಾಸ ಎಂದು ಹೆಸರಿಟ್ಟು ಆಡಳಿತ ನಡೆಸುತ್ತಿರುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಸೃಷ್ಟಿಯಾದ ಕೈಲಾಸ ದೇಶ ಇದೀಗ ವಿಶ್ವಸಂಸ್ಥೆಯ ಮಹತ್ವದ ಸಮ್ಮೇಳನದಲ್ಲಿ ಭಾಗಿಯಾಗಿದೆ. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ. ಇಷ್ಟೇ ಅಲ್ಲ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ನಿಂತಿರುವ ನಿತ್ಯಾನಂದನಿಗೆ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದೆ. ಹೀಗಾಗಿ ಹಿಂದೂ ಧರ್ಮದ ಸರ್ವೋಚ್ಚ ಧರ್ಮಗುರುವಿಗೆ ರಕ್ಷಣೆ ನೀಡಬೇಕು ಎಂದು ವಿಶ್ವಸಂಸ್ಥೆಯಲ್ಲಿ ಮನವಿ ಮಾಡಲಾಗಿದೆ.
ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆಯ 19ನೇ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿ ಹಕ್ಕು ಸಮಿತಿ(CESR) ಸಭೆಯಲ್ಲಿ ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ಮಾ ವಿಜಯಪ್ರಿಯ ಪಾಲ್ಗೊಂಡು ಮಾತನಾಡಿದ್ದಾರೆ. ಇದೇ ವೇಳೆ ನಿತ್ಯಾನಂದ ಗುರವಿನ ಮೇಲೆ ಭಾರತ ನಡೆಸುತ್ತಿರುವ ಕಿರುಕುಳವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯನ್ನು ಕೋರಲಾಗಿದೆ.
ಇನ್ನು ಮುಂದೆ ಕೈಲಾಸಕ್ಕೆ ಹೋದ್ರೂ ಕೆಲಸ ಗ್ಯಾರಂಟಿ!
ವಿಶ್ವಸಂಸ್ಥೆಯಲ್ಲಿ ಕೈಲಾಸದೇಶದ ಖಾಯಂ ರಾಯಭಾರಿಯಾಗಿ ಮಾ ವಿಜಯಪ್ರಿಯ ನೇಮಕ ಮಾಡಲಾಗಿದೆ. ಈ ಮೂಲಕ ನಿತ್ಯಾನಂದನ ಕೈಲಾಸ ದೇಶ ಇದೀಗ ವಿಶ್ವಸಂಸ್ಥೆಯಲ್ಲೂ ಮೋಡಿ ಮಾಡಲು ಆರಂಭಿಸಿದೆ. ಭಾರತದಿಂದ ಪರಾರಿಯಾಗಿ ಕೈಲಾಸ ದೇಶ ಸೃಷ್ಟಿಸಿ ಇದೀಗ ಒಂದು ಜಾಗತಿಕವಾಗಿ ಮಾನ್ಯತೆ ಪಡೆಯಲು ಬೇಕಾದ ಎಲ್ಲಾ ಕೆಲಸಗಳನ್ನು ನಿತ್ಯಾನಂದ ಯಶಸ್ವಿಯಾಗಿ ಮಾಡಿದ್ದಾರೆ. ಮಹಾಸಮ್ಮೇಳನದ ಅಧಿಕೃತ ವಿಡಿಯೋವನ್ನು ವಿಶ್ವಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಈ ವಿಡಿಯೋದಲ್ಲಿ ಕೈಲಾಸ ದೇಶದ ಪ್ರತಿನಿಧಿ ಪಾಲ್ಗೊಂಡು ಮಾತನಾಡುತ್ತಿರುವ ವಿಡಿಯೋ ಇದೀಗ ಭಾರಿ ಸಂಚಲನ ಸಷ್ಟಿಸಿದೆ.
ಕೈಲಾಸ ದೇಶವನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದೆಯಾ ಅನ್ನೋ ಕುರಿತು ಯಾವುದೇ ಸ್ಪಷ್ಟ ದಾಖಲೆಗಳು ಲಭ್ಯವಾಗಿಲ್ಲ. ಆದರೆ ಕೈಲಾಸ ದೇಶದ ಪ್ರಯತ್ನವಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಜಾಗತಿಕ ವೇದಿಕೆಗಳಲ್ಲಿ ಇದೀಗ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. 2019ರಲ್ಲಿ ಕೈಲಾಸ ದೇಶ ಸೃಷ್ಟಿಸಿ, ವಿಶ್ವಸಂಸ್ಥೆಗೆ ಮಾನ್ಯತೆ ನೀಡುವಂತೆ ಮನವಿ ಮಾಡಲಾಗಿತ್ತು.
ವೆಸ್ಟ್‌ಇಂಡೀಸ್‌ನ ಟ್ರಿನಿಡಾಡ್ ಹಾಗೂ ಟೊಬ್ಯಾಗೋ ಸಮೀಪ ಇರುವ ‘ಕೈಲಾಸ’ವು ಹಿಂದೂ ಸಾರ್ವಭೌಮ ದೇಶ ಎಂದು ನಿತ್ಯಾನಂದ ಘೋಷಿಸಿಕೊಂಡಿದ್ದಾನೆ. ‘ನಮ್ಮ ದೇಶಕ್ಕೆ ದೇಣಿಗೆ ಕೊಡಿ. ಇದರ ಮೂಲಕ ನಮ್ಮ ದೇಶದ ಪೌರತ್ವವನ್ನೂ ಪಡೆಯಿರಿ’ ಎಂಬ ಆಫರ್ ನೀಡಲಾಗಿತ್ತು. ಇತ್ತೀಚೆಗೆ ನಿತ್ಯಾನಂದ ಕೈಲಾಸದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ ನೀಡುವುದಾಗಿ ಘೋಷಿಸಿದ್ದರು. ಅಂತಾರಾಷ್ಟ್ರೀಯ ವಲಸೆ ದಿನಾಚರಣೆ ಹಿನ್ನೆಲೆಯಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿತ್ಯಾನಂದ ‘ಕೈಲಾಸ ದೇಶಕ್ಕೆ ಮುಂದಿನ ದಿನಗಳಲ್ಲಿ ಕನಿಷ್ಠ 1 ಲಕ್ಷ ಜನರನ್ನಾದರೂ ಆಕರ್ಷಿಸಲು ಯೋಜಿಸುತ್ತಿದ್ದೇನೆ’ ಎಂದು ಹೇಳಿದ್ದರು.
ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
2 ಥರದ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಇದರ ಮೇಲೆ ‘ಕೈಲಾಸ’ ಎಂದು ಬರೆಯಲಾಗಿದೆ. ಒಂದು ಪಾಸ್‌ಪೋರ್ಟ್ ಬಂಗಾರದ ಬಣ್ಣದ್ದಾಗಿದ್ದರೆ, ಇನ್ನೊಂದು ಕೆಂಪು ಬಣ್ಣದ್ದು. ಇದರ ಮೇಲೆ ನಿತ್ಯಾನಂದ ಧ್ಯಾನಾಸಕ್ತನಾದ ಚಿತ್ರವಿದೆ. ಇನ್ನು ಧ್ವಜವು ಕೆಂಪು ಬಣ್ಣದ್ದಾಗಿದೆ. ಇದರ ಮೇಲೆ ನಿತ್ಯಾನಂದನು ಸಿಂಹಾಸನದ ಮೇಲೆ ನಗುತ್ತಾ ಕುಳಿತಿರುವ ಹಾಗೂ ಆತನ ಮುಂದೆ ನಂದಿ ಕುಳಿತಿರುವ ಚಿತ್ರವಿದೆ. ಗಡಿಯಿಲ್ಲದ ಈ ದೇಶದಲ್ಲಿ, ಯಾವುದೇ ದೇಶದಿಂದ ಹೊರಹಾಕಲ್ಪಟ್ಟಿರುವ ಹಿಂದೂಗಳು ಬಂದು ನೆಲೆಸಬಹುದು ಎಂದು ಆಹ್ವಾನ ನೀಡಲಾಗಿತ್ತು.