1 ಕೊರೋನಾ ಕೇಸ್ ಪತ್ತೆ: ಇಡೀ ನ್ಯೂಜಿಲೆಂಡ್ ಲಾಕ್ಡೌನ್!
* ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನಾ ಸೋಂಕು ಪತ್ತೆ
* ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್
* ನಾವು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದರಿಲ್ಲ
ವೆಲ್ಲಿಂಗ್ಟನ್(ಆ.18): ವ್ಯಕ್ತಿಯೊಬ್ಬರಲ್ಲಿ ಸ್ಥಳೀಯವಾಗಿ ಹಬ್ಬಿದ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ, ನ್ಯೂಜಿಲೆಂಡ್‌ನಲ್ಲಿ ದೇಶಾದ್ಯಂತ ಮೂರು ದಿನ ಲಾಕ್ಡೌನ್ ಘೋಷಿಸಲಾಗಿದೆ. ವಿದೇಶಗಳಲ್ಲಿ ಸೋಂಕಿನಿಂದ ಏನಾಗಿದೆ ಎಂಬ ವಿಷಯ ನಮ್ಮ ಕಣ್ಣ ಮುಂದಿದೆ. ಹೀಗಾಗಿ ನಾವು ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಸೋಂಕಿತ ವ್ಯಕ್ತಿಯಾದ ಪತ್ತೆ ಆಕ್ಲೆಂಡ್ ಮತ್ತು ಆತ ಭೇಟಿ ನೀಡಿದ್ದ ಕೊರೋಮಂಡೆಲ್‌ನಲ್ಲಿ 7 ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡಲಾಗುವುದು. ಉಳಿದ ಪ್ರದೇಶಗಳಲ್ಲಿ ಮೂರು ದಿನ ಲಾಕ್ಡೌನ್ ಜಾರಿಯಲ್ಲಿರಲಿದೆ ಎಂದು ಪ್ರಧಾನಿ ಜೆಸಿಂಡಾ ಆ್ಯರ್ಡೆನ್ ಪ್ರಕಟಿಸಿದ್ದಾರೆ.
ಈ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಜನ ಮಾಲ್, ಸೂಪರ್ ಮಾರ್ಕೆಟ್‌ಗಳ ಮುಂದೆ ಸರದಿ ನಿಂತು ಅಗತ್ಯ ವಸ್ತು ಖರೀದಿಗೆ ಮುಂದಾಗಿದ್ದಾರೆ. ದೇಶದಲ್ಲಿ 6 ತಿಂಗಳ ಬಳಿಕ ಮೊದಲ ಕೇಸು ಪತ್ತೆಯಾಗಿದೆ.
50 ಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲೆಂಡ್‌ನಲ್ಲಿ ಇದುವರೆಗೆ 2926 ಜನರಿಗೆ ಸೋಂಕು ತಗುಲಿದ್ದು, 26 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಮತ್ತೊಂದೆಡೆ ಮುಂದುವರೆದ ದೇಶಗಳಿಗೆ ಹೋಲಿಸಿದರೆ ನ್ಯೂಜಿಲೆಂಡ್‌ನಲ್ಲಿ ಲಸಿಕೆ ವಿತರಣೆ ಪ್ರಮಾಣವೂ ಬಹಳ ಕಡಿಮೆ ಇದೆ. ಶೇ.32ರಷ್ಟುಜನರು ಸಿಂಗಲ್ ಡೋಸ್ ಮತ್ತು ಶೇ.18ರಷ್ಟುಜನರು ಮಾತ್ರವೇ ಎರಡೂ ಡೋಸ್ ಪಡೆದುಕೊಂಡಿದ್ದಾರೆ.