* ಪ್ಯಾಂಗಾಂಗ್‌ ಸರೋವರಕ್ಕೆ ಬ್ರಿಜ್‌ ನಿರ್ಮಿಸುತ್ತಿರುವ ಡ್ರ್ಯಾಗನ್‌ ರಾಷ್ಟ್ರ, ಉಪಗ್ರಹ ಚಿತ್ರದಿಂದ ಪತ್ತೆ* ಲಡಾಖ್‌ ಗಡಿಯಲ್ಲಿ ಸೇತುವೆ: ಚೀನಾ ಮತ್ತೆ ಕಿರಿಕ್‌ ಹೊಸ ವರ್ಷದ ಕ್ಯಾತೆ* ಗಲ್ವಾನ್‌ನಲ್ಲಿ ಚೀನಿ ಯೋಧರಿಂದ ಧ್ವಜಾರೋಹಣ* ಒಂದಿಂಚೂ ಭೂಮಿ ನೀಡಲ್ಲ ಎಂದು ಬರೆದು ಸವಾಲು

ನವದೆಹಲಿ(ಜ.04):ಭಾರತ ಹಾಗೂ ಚೀನಾ ನಡುವೆ ಘನಘೋರ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತೆ ಎರಡು ಹೊಸ ತಗಾದೆ ತೆಗೆದಿದೆ. ಒಂದೆಡೆ ಪ್ಯಾಂಗ್ಯಾಂಗ್‌ ಸರೋವರದಲ್ಲಿ ಸದ್ದಿಲ್ಲದೆ ಸೇತುವೆಯೊಂದನ್ನು ನಿರ್ಮಾಣ ಮಾಡಲು ಆರಂಭಿಸಿದೆ. ಈ ಸಂಗತಿ ಗುಪ್ತಚರ ತಜ್ಞ ಡೇಮಿಯನ್‌ ಸೈಮನ್‌ ಅವರು ಪಡೆದಿರುವ ಉಪಗ್ರಹ ಚಿತ್ರಗಳಿಂದ ಪತ್ತೆಯಾಗಿದೆ. ಇನ್ನೊಂದೆಡೆ ಹೊಸ ವರ್ಷದ ದಿನದಂದೇ ಗಲ್ವಾನ್‌ ಕಣಿವೆಯಲ್ಲಿ ತನ್ನ ಧ್ವಜ ಪ್ರದರ್ಶಿಸುವ ಮೂಲಕ ಭಾರತಕ್ಕೆ ಸವಾಲು ಎಸೆದಿದೆ.

ಗಡಿಯಲ್ಲಿ ಸೇತುವೆ ಕಿರಿಕ್‌:

ಚೀನಾ ಲಡಾಖ್‌ ಗಡಿಗೆ ಹೊಂದಿಕೊಂಡ ಭಾಗದ ಪ್ಯಾಂಗ್ಯಾಂಗ್‌ ಸರೋವರದ ಮೇಲೆ ಸೇತುವೆ ನಿರ್ಮಾಣ ಆರಂಭಿಸಿದೆ. ತನ್ನ ಭಾಗದ ಸರೋವರದಲ್ಲಿ ಈ ಸೇತುವೆ ನಿರ್ಮಾಣ ಮಾಡುತ್ತಿದೆಯಾದರೂ, ಅದರ ಉದ್ದೇಶ ಆತಂಕಕಾರಿಯಾಗಿದೆ.

ಈ ಸ್ಥಳ ಪ್ಯಾಂಗಾಂಗ್‌ ಸರೋವರದ ಎರಡೂ ದಂಡೆಗಳನ್ನು ಸಂಪರ್ಕಿಸುವ ಕಾರಣ, ಭಾರತದ ಜತೆಗೆ ಸಂಘರ್ಷ ಆರಂಭವಾದಾಗ ಅತ್ಯಂತ ತ್ವರಿತಗತಿಯಲ್ಲಿ ಯೋಧರು ಹಾಗೂ ಸೇನಾ ಸಾಧನಗಳನ್ನು ರವಾನಿಸುವ ಅವಕಾಶ ಚೀನಾಕ್ಕೆ ದಕ್ಕಲಿದೆ. ಸರೋವರದ ಕಿರಿದಾದ ಪ್ರದೇಶದಲ್ಲಿ ಈ ಸೇತುವೆ ನಿರ್ಮಾಣ ನಡೆಯುತ್ತಿದ್ದು, ಬಹುತೇಕ ಮುಗಿಯುವ ಹಂತದಲ್ಲಿದೆ ಎಂದು ಚಿತ್ರಗಳನ್ನು ಸಂಗ್ರಹಿಸಿರುವ ಸೈಮನ್‌ ಹೇಳಿದ್ದಾರೆ.

ಕಳೆದ ವರ್ಷ ಚೀನಾ ಜತೆಗೆ ಸಂಘರ್ಷ ಆರಂಭವಾದಾಗ ಅತ್ಯಂತ ಶೀಘ್ರವಾಗಿ ಭಾರತೀಯ ಯೋಧರು ಪ್ಯಾಂಗಾಂಗ್‌ ಸರೋವರದ ಬೆಟ್ಟದ ತುದಿಗಳನ್ನು ಏರಿ ಕುಳಿತಿದ್ದರು. ಇದರಿಂದಾಗಿ ಚೀನಾ ಎದುರು ಭಾರತದ ಕೈ ಮೇಲಾಗಿತ್ತು. ಆದರೆ ಈ ಸೇತುವೆ ನಿರ್ಮಾಣಗೊಂಡರೆ, ಹೆಚ್ಚುವರಿ ಯೋಧರನ್ನು ರವಾನಿಸಲು ಚೀನಾಕ್ಕೆ ಅಧಿಕ ಮಾರ್ಗಗಳು ಲಭಿಸಿದಂತಾಗಲಿದೆ. ಇದು ಭಾರತದ ಕಳವಳಕ್ಕೆ ಕಾರಣ.

ಧ್ವಜ ಹಾರಿಸಿ ಕಿರಿಕ್‌:

ಇನ್ನೊಂದಡೆ, 2022ರ ಜ.1ರಂದು ಚೀನಾದ ಯೋಧರ ತಂಡವೊಂದು ಲಡಾಖ್‌ನ ಗಲ್ವಾನ್‌ ಕಣಿವೆ ಪ್ರದೇಶದಲ್ಲಿ ಚೀನಾದ ರಾಷ್ಟ್ರ ಧ್ವಜವನ್ನು ಪ್ರದರ್ಶಿಸಿದೆ. ಮೂಲಕ ಈ ಜಾಗ ತಮ್ಮದೆಂದು ಹಕ್ಕು ಸ್ಥಾಪಿಸುವ ಯತ್ನ ಮಾಡಿದೆ. ಅಲ್ಲದೆ ಯೋಧರ ಹಿಂಭಾಗದಲ್ಲಿ ಕಾಣುವ ಬಂಡೆಯ ಮೇಲೆ ‘ಎಂದಿಗೂ ಒಂದಿಂಚೂ ಭೂಮಿ ಬಿಡುವುದಿಲ್ಲ’ ಎಂದು ಬರೆಯುವ ಮೂಲಕ ಭಾರತಕ್ಕೆ ಸವಾಲು ಎಸೆದಿದ್ದಾರೆ. ಈ ಕುರಿತ ಫೋಟೋ, ವಿಡಿಯೋವನ್ನು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆಗಳು ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಈ ಅತಿಕ್ರಮಣದ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಗಲ್ವಾನ್‌ನಲ್ಲಿ ನಮ್ಮ ತ್ರಿವರ್ಣ ಧ್ವಜ ಸುಂದರವಾಗಿ ಕಾಣುತ್ತದೆ. ಚೀನಾಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಬೇಕು. ಮೋದೀಜಿ, ನಿಮ್ಮ ಮೌನ ಮುರಿಯಿರಿ’ ಎಂದು ಸವಾಲು ಹಾಕಿದ್ದಾರೆ.

ಇದು ನಮ್ಮ ಜಾಗವಲ್ಲ- ಭಾರತದ ಸ್ಪಷ್ಟನೆ:

ಈ ನಡುವೆ ಚೀನಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿರುವ ಪ್ರದೇಶ ನಮ್ಮ ವಶದಲ್ಲಿರುವ ಜಾಗವಲ್ಲ. ಅದು ಚೀನಾ ವಶದಲ್ಲಿರುವ ವಿವಾದಿತವಲ್ಲದ ಪ್ರದೇಶ ಎಂದು ಸೇನೆ ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

2020ರಿಂದ ಪೂರ್ವ ಲಡಾಖ್‌ನ ಡೆಪ್ಸಾಂಗ್‌ನಿಂದ ಡೆಮ್ಚೊಕ್‌ವರೆಗೆ ಭಾರತ ಹಾಗೂ ಚೀನಾ 50 ಸಾವಿರಕ್ಕೂ ಅಧಿಕ ಯೋಧರನ್ನು ನಿಯೋಜನೆ ಮಾಡಿವೆ.

ಭಾರತಕ್ಕೆ ತಲೆನೋವು

- ಲಡಾಖ್‌ನಲ್ಲಿ ಪ್ಯಾಂಗಾಂಗ್‌ ಸರೋವರದ ಸುತ್ತ ಒಂದು ವರ್ಷದಿಂದ ಭಾರತ-ಚೀನಾ ಮಧ್ಯೆ ಸಂಘರ್ಷ

- ಕಳೆದ ವರ್ಷ ಸಂಘರ್ಷ ನಡೆದಾಗ ಭಾರತದ ಯೋಧರು ಮೊದಲೇ ಬೆಟ್ಟಏರಿ ಕುಳಿತು ಮೇಲುಗೈ ಸಾಧಿಸಿದ್ದರು

- ಚೀನಾ ಈಗ ನಿರ್ಮಿಸುತ್ತಿರುವ ಸೇತುವೆಯಿಂದ ಯುದ್ಧ ಸಾಮಗ್ರಿ, ಯೋಧರ ರವಾನೆಗೆ ಚೀನಾಕ್ಕೆ ಅನುಕೂಲ

- ಪ್ಯಾಂಗಾಂಗ್‌ ಸುತ್ತಲಿನ ಎತ್ತರದ ಪ್ರದೇಶಗಳ ಮೇಲೆ ಹತೋಟಿ ಸಿಗದಿದ್ದರೆ ಶತ್ರುಗಳನ್ನು ಎದುರಿಸುವುದು ಕಷ್ಟ

- ಸೇತುವೆ ನಿರ್ಮಾಣದ ನಂತರ ಸಂಘರ್ಷದ ವೇಳೆ ಚೀನಾ ಬಲುಬೇಗ ಸನ್ನದ್ಧವಾಗಿ ನಿಂತರೆ ಭಾರತಕ್ಕೆ ತಲೆನೋವು