ಹಲವು ದಿನಗಳ ನಿರೀಕ್ಷೆ, ಕಾಯುವಿಕೆಗೆ ತೆರೆ ಬಿದ್ದಿದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದೆ.

ಹಲವು ದಿನಗಳ ನಿರೀಕ್ಷೆ, ಕಾಯುವಿಕೆಗೆ ತೆರೆ ಬಿದ್ದಿದೆ. ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರವೇಶಿಸಿದೆ. ಬೆಂಗಳೂರಿನ ಐಐಎಸ್ಸಿಯಲ್ಲಿ ವ್ಯಾಸಂಗ ಮಾಡಿರುವ ಶುಭಾಂಶು ಶುಕ್ಲಾ ಅಮೆರಿಕದ ಆ್ಯಕ್ಸಿಯೋಂ ನೌಕೆ ಮೂಲಕ ಗುರುವಾರ ಸಂಜೆ ಅಂತರಿಕ್ಷ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿದ್ದಾರೆ.

ತನ್ಮೂಲಕ ಈ ಸಾಧನೆ ಮಾಡಿದ ಮೊದಲ ಹಾಗೂ ಬಾಹ್ಯಾಕಾಶ ಯಾತ್ರೆ ಕೈಗೊಂಡ ಎರಡನೇ ಭಾರತೀಯ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. 14 ದಿನಗಳ ಕಾಲ ಅಲ್ಲಿ ಸಂಶೋಧನೆ ಮುಗಿಸಿ ಶುಭಾಂಶು ಭೂಮಿಗೆ ಮರಳಲಿದ್ದಾರೆ. ಅವರ ಈ ಯಾತ್ರೆಯಿಂದ ಭಾರತದ ಮಾನವಸಹಿತ ಗಗನಯಾನ ಹಾಗೂ ದೇಶಿ ಅಂತರಿಕ್ಷ ನಿಲ್ದಾಣ ಕನಸಿಗೆ ಭಾರಿ ಬಲ ಸಿಗಲಿದೆ.

ಐಎಸ್‌ಎಸ್‌ ಜತೆ ಆಕ್ಸಿಯೋಂ ಡಾಕಿಂಗ್‌ ನಡೆದಿದ್ದು ಹೀಗೆ

ಬುಧವಾರ ಮಧ್ಯಾಹ್ನ 12 ಗಂಟೆಗೆ ಭೂಮಿಯಿಂದ ಉಡ್ಡಯನಗೊಂಡಿದ್ದ ಆ್ಯಕ್ಸಿಯೋಂ ನೌಕೆ 28 ಗಂಟೆ ಪ್ರಯಾಣದ ಬಳಿಕ ಭೂಮಿಯಿಂದ 400 ಕಿ.ಮೀ ಎತ್ತರದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಜೊತೆ ಜೋಡಣೆಗೊಂಡಿದೆ. ವಿಶೇಷವೆಂದರೆ ಇಡೀ ಪ್ರಕ್ರಿಯೆ ಸ್ವಯಂಚಾಲಿತವಾಗಿತ್ತು. ಅಂದರೆ ಮಾನವ ಹಸ್ತಕ್ಷೇಪ ಇಲ್ಲದೆಯೇ ಪೂರ್ವ ನಿರ್ಧರಿತ ಸೂಚನೆಗಳ ಅನ್ವಯವೇ ನಡೆದಿತ್ತು.

ಆ ಪ್ರಕ್ರಿಯೆ ಹೀಗಿತ್ತು

ಮೊದಲ ಹಂತ

ಪ್ರತ್ಯೇಕ ಕಕ್ಷೆಯಲ್ಲಿ ಗಂಟೆಗೆ 28000 ಕಿ.ಮೀ ವೇಗದಲ್ಲಿ ಸಾಗುತ್ತಿದ್ದ ನೌಕೆ, ಸಂಜೆ 4 ಗಂಟೆ ವೇಳೆಗೆ ಐಎಸ್‌ಎಸ್‌ ಸಮಾನಾಂತರವಾಗಿ ಆಗಮಿಸಿತು. ಈ ಕ್ಲಿಷ್ಟ ಪ್ರಕ್ರಿಯೆಗೆ ನೌಕೆಯಲ್ಲಿನ ಬೂಸ್ಟರ್‌ ಮತ್ತು ಥ್ರಸ್ಟರ್‌ ಬಳಸಿಕೊಳ್ಳಲಾಯಿತು. ಎರಡೂ ನೌಕೆಗಳು ಅತ್ಯಂತ ಸಮೀಪಕ್ಕೆ ಬಂದ ಬಳಿಕ ಕಂಪ್ಯೂಟರ್‌ ಸ್ವಯಂ ಚಾಲಿತವಾಗಿ ಕೆಲವೊಂದು ಹೊಂದಾಣಿಕೆ ಮಾಡಿ ನೌಕೆಯನ್ನು, ಐಎಸ್‌ಎಸ್‌ಗೆ ಇನ್ನಷ್ಟು ನಿಖರವಾಗಿ ಹೊಂದಾಣಿಕೆ ಮಾಡಿತು.

ರಡನೇ ಹಂತ

ಐಎಸ್‌ಎಸ್‌ನಿಂದ ನೌಕೆ 20 ಮೀ. ದೂರದಲ್ಲಿದ್ದಾಗ, ಲೇಸರ್ ಆಧರಿತ ಸೆನ್ಸಾರ್‌ ಮತ್ತು ಕ್ಯಾಮೆರಾಗಳನ್ನು ಬಳಸಿಕೊಂಡು ಸಂಜೆ 4.01ಕ್ಕೆ ಸಾಫ್ಟ್‌ ಡಾಕಿಂಗ್‌ ಮಾಡಲಾಯಿತು. ಇದು ನಡೆದಿದ್ದು ಸಂಜೆ 4.01ಕ್ಕೆ. ಈ ವೇಳೆ ನೌಕೆಯು ಅಟ್ಲಾಂಟಿಕ್‌ ಸಾಗರದ ಮೇಲೆ ಸಾಗುತ್ತಿತ್ತು.

ಮೂರನೇ ಹಂತ

ಸಾಫ್ಟ್‌ ಡಾಕಿಂಗ್ ನಡೆದ 45 ನಿಮಿಷಗಳ ಬಳಿಕ ಹಾರ್ಡ್‌ ಲ್ಯಾಂಡಿಂಗ್ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ ನೌಕೆಯಲ್ಲಿನ 12 ಹುಕ್‌ಗಳು ಐಎಸ್‌ಎಸ್‌ನಲ್ಲಿನ ಹುಕ್‌ಗಳ ಜೊತೆ ಜೋಡಣೆಯಾಗಿ ಪರಸ್ಪರ ಬಿಗಿಯಾಗಿ ಹಿಡಿದುಕೊಂಡವು.

ನಾಲ್ಕನೇ ಹಂತ

ಹಾರ್ಡ್‌ ಲ್ಯಾಡಿಂಗ್‌ ಬಳಿಕ ಎರಡೂ ನೌಕೆಗಳ ನಡುವೆ ಸಂವಹನ, ವಿದ್ಯುತ್ ಸಂಪರ್ಕ ಮತ್ತು ಒತ್ತಡ ಸ್ಥಿರಗೊಳಿಸುವಿಕೆಗೆ 2 ಗಂಟೆ ಬೇಕಾಯಿತು. ಹೀಗೆ 6 ಗಂಟೆ ವೇಳೆಗೆ ಐಎಸ್‌ಎಸ್‌ನ ಬಾಗಿಲು ತೆರೆದು ಅದರೊಳಗೆ ಶುಕ್ಲಾ ಸೇರಿ ನಾಲ್ವರು ಪ್ರವೇಶ ಮಾಡಿದರು.

ಭಾರತದ 7 ಪ್ರಯೋಗ

ಬೆಂಗಳೂರು ಐಐಎಸ್ಸಿಯ 2, ಧಾರವಾಡ ಕೃಷಿ ವಿವಿಗೆ ಸಂಬಂಧಿಸಿದ ಮೊಳಕೆ ಬೀಜಗಳ ಅಧ್ಯಯನ, ಬೆಂಗಳೂರಿನ ಬ್ರಿಕ್‌ ಇನ್‌ಸ್ಟೆಮ್‌ ಸಂಸ್ಥೆಯದ್ದು ಸೇರಿ ದೇಶದಿಂದ ರವಾನೆಯಾಗಿರುವ 7 ಪ್ರಯೋಗಗಳನ್ನು ಅಂತರಿಕ್ಷದಲ್ಲಿ ಶುಭಾಂಶು ನಡೆಸಲಿದ್ದಾರೆ.

400 ಕಿ.ಮೀ.: ಭೂಮಿಯಿಂದ ಅಂತರಿಕ್ಷ ನಿಲ್ದಾಣಕ್ಕೆ ಇರುವ ಅಂತರ

28 ತಾಸು: ಅಲ್ಲಿಗೆ ಹೋಗಲು ಆ್ಯಕ್ಸಿಯೋಂ ನೌಕೆ ತೆಗೆದುಕೊಂಡ ಟೈಂ

14 ದಿನ: ಅಂತರಿಕ್ಷ ನಿಲ್ದಾಣದಲ್ಲಿ 2 ವಾರ ಇರಲಿರುವ ಶುಭಾಂಶು

14 ದಿನಗಳು ರೋಮಾಂಚಕ

ನಾನು ಗಗನಯಾತ್ರಿ 634. ನಾನೀಗ ಹಗುರವಾಗಿದ್ದೇನೆ. ಅಂತರಿಕ್ಷ ನಿಲ್ದಾಣಕ್ಕೆ ಬಂದಿರುವುದು ಒಂದು ಸೌಭಾಗ್ಯ. ಇದು ಈ ಪ್ರಯಾಣದ ಮೊದಲ ಹೆಜ್ಜೆ. ನಾನು ತಿರಂಗಾವನ್ನು ಮತ್ತು ನಿಮ್ಮೆಲ್ಲರನ್ನೂ ನನ್ನೊಂದಿಗೆ ಹೊತ್ತು ತಂದಿದ್ದೇನೆ. ಮುಂದಿನ 14 ದಿನಗಳು ರೋಮಾಂಚಕ ಮತ್ತು ಅದ್ಭುತವಾಗಿರುತ್ತವೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಪ್ರಗತಿ ಸಾಧಿಸುತ್ತವೆ ಮತ್ತು ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ ವಿಶ್ವಾಸ ನನಗಿದೆ.

- ಶುಭಾಂಶು ಶುಕ್ಲಾ