* ಲಂಕಾ ಆಯ್ತು, ಈಗ ನೆರೆಯ ನೇಪಾಳದಲ್ಲಿ ಆರ್ಥಿಕ ಬಿಕ್ಕಟ್ಟು* ತೈಲ ಬಳಕೆ ತಗ್ಗಿಸಲು ವಾರಕ್ಕೆ 2 ದಿನ ರಜೆಗೆ ಚಿಂತನೆ* ಕಾರು, ಚಿನ್ನದಂಥ ವಸ್ತು ಆಮದಿಗೆ ನಿರ್ಬಂಧ ಹೇರಿಕೆ
ಕಠ್ಮಂಡು(ಏ.19): ಶ್ರೀಲಂಕಾ ಆಯ್ತು. ಈಗ ಭಾರತದ ಇನ್ನೊಂದು ನೆರೆಯ ದೇಶ ನೇಪಾಳವು ಹಣಕಾಸು ಬಿಕ್ಕಟ್ಟಿಗೆ ಸಾಗುವ ಸರದಿ ಬಂದಿದೆ. ಅತ್ತ ಶ್ರೀಲಂಕಾ ಆರ್ಥಿಕ ಅಧಃಪತನದಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ನಡುವೆಯೇ ನೇಪಾಳದಲ್ಲೂ ಅಂಥದ್ದೇ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ವಿದೇಶಿ ವಿನಿಮಯ ಕೊರತೆ ಕಾರಣದಿಂದ ನೇಪಾಳದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಸೃಷ್ಟಿಯಾಗಿದ್ದು, ಬೆಲೆಯೂ ಗಗನಕ್ಕೇರಿದೆ. ತೈಲ ಬಳಕೆ ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಸಾರ್ವಜನಿಕ ವಲಯದ ನೌಕರರಿಗೆ 2 ದಿನ ರಜೆ ನೀಡಲು ನೇಪಾಳ ಸರ್ಕಾರ ಚಿಂತನೆ ನಡೆಸಿದೆ.
ಇನ್ನೊಂದೆಡೆ ಸರ್ಕಾರದ ವಿವಿಧ ಇಲಾಖೆಗಳು, ಸಚಿವಾಲಯಗಳು ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡುತ್ತಿದ್ದ ಶೇ.20ರಷ್ಟುತೈಲ ಭತ್ಯೆಯನ್ನು ನಿಲ್ಲಿಸಲೂ ನೇಪಾಳ ಸರ್ಕಾರ ನಿರ್ಧರಿಸಿದೆ. ಈ ಮೂಲಕ ದೇಶದ ತೈಲ ನಿಗಮಕ್ಕೆ ಆಗುವ ನಷ್ಟತಗ್ಗಿಸಲು ಮುಂದಾಗಿದೆ.
ವಾರಕ್ಕೆ 2 ದಿನ ರಜೆ?:
ನೇಪಾಳ ಕೇಂದ್ರೀಯ ಬ್ಯಾಂಕ್ ಮತ್ತು ನೇಪಾಳ ತೈಲ ಕಾರ್ಪೋರೇಷನ್‌ಗಳು ಸರ್ಕಾರಿ ನೌಕರರಿಗೆ ವಾರಕ್ಕೆ 2 ದಿನ ರಜೆ ನೀಡುವ ಪ್ರಸ್ತಾಪ ಮುಂದಿರಿಸಿವೆ. ಇದನ್ನು ಸರ್ಕಾರ ಪರಿಶೀಲಿಸುತ್ತಿದೆ.
‘ಈ ನಿಯಮ ಅನುಷ್ಠಾನದಿಂದ ಈಗಾಗಲೇ ಸಬ್ಸಿಡಿ ದರದಲ್ಲಿ ತೈಲ ವಿತರಿಸಿ ಭಾರೀ ನಷ್ಟದಲ್ಲಿರುವ ದೇಶದ ತೈಲ ಕಾರ್ಪೋರೇಶನ್‌ಗೆ ಒತ್ತಡ ಕಡಿಮೆಯಾಗಲಿದೆ. ಆದರೆ ಸರ್ಕಾರ ಈವರೆಗೆ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇದು ಪರಿಶೀಲನಾ ಹಂತದಲ್ಲಿದೆ’ ಎಂದು ಸರ್ಕಾರದ ವಕ್ತಾರ ಜ್ಞಾನೇಂದ್ರ ಬಹದೂರ್ ಕಾರ್ಕಿ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟಿಗೆ ಕಾರಣ ಏನು?:
ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಸೇವೆ ನಿಲ್ಲಿಸಲಾಗಿತ್ತು. ಹೀಗಾಗಿ ಪ್ರವಾಸೋದ್ಯಮ ಸ್ಥಗಿತಗೊಂಡಿತ್ತು. ಶ್ರೀಲಂಕಾ ರೀತಿ ಪ್ರವಾಸೋದ್ಯಮದ ಮೇಲೇ ಹೆಚ್ಚು ಅವಲಂಬಿತವಾಗಿದ್ದ ನೇಪಾಳ ಇದರಿಂದ ಸಾಕಷ್ಟುನಷ್ಟಅನುಭವಿಸಿದೆ. ಇದರ ಜೊತೆಗೆ ಉಕ್ರೇನ್-ರಷ್ಯಾಯುದ್ಧದ ಕಾರಣದಿಂದ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿವೆ. ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಹೀಗಾಗಿ ದೇಶದಲ್ಲಿ ವಿದೇಶಿ ವಿನಿಮಯ ಕೊರತೆ ಉಂಟಾಗಿದೆ. ಈ ಬೆನ್ನಲ್ಲೇ ಬಿಕ್ಕಟ್ಟು ಪರಿಹಾರಕ್ಕಾಗಿ ವಿದೇಶಗಳಲ್ಲಿ ವಾಸಿಸುವ ನೇಪಾಳಿಗರು ದೇಶದಲ್ಲಿ ಡಾಲರ್ ಖಾತೆ ತೆರೆದು ಹೂಡಿಕೆ ಮಾಡುವಂತೆ ನೇಪಾಳ ಸರ್ಕಾರ ಮನವಿ ಮಾಡಿದೆ. ಜೊತೆಗೆ ಈಗಾಗಲೇ ದುಬಾರಿ ಕಾರು, ಚಿನ್ನ ಮತ್ತಿತರ ಐಷಾರಾಮಿ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳದಂತೆ ನೇಪಾಳ ನಿರ್ಬಂಧ ವಿಧಿಸಿದೆ.
ಏಕೆ ಈ ದುಸ್ಥಿತಿ?
- ಶ್ರೀಲಂಕಾದಂತೆ ನೇಪಾಳವೂ ಪ್ರವಾಸೋದ್ಯಮದ ಮೇಲೆ ಅವಲಂಬಿತ
- ಕೋವಿಡ್‌ನಿಂದಾಗಿ ಎರಡು ವರ್ಷ ಪ್ರವಾಸೋದ್ಯಮ ಸ್ಥಗಿತ: ಭಾರಿ ನಷ್ಟ
- ರಷ್ಯಾ- ಉಕ್ರೇನ್ ಯುದ್ಧದಿಂದ ಜಾಗತಿಕ ಕಚ್ಚಾ ತೈಲ ಬೆಲೆ ಭಾರಿ ಏರಿಕೆ
- ನೇಪಾಳಕ್ಕೆ ವಿದೇಶಿ ವಿನಿಮಯ ಕೊರತೆ. ಇದರಿಂದ ಪಾರಾಗಲು ಹರಸಾಹಸ
- ದೇಶದಲ್ಲಿ ಡಾಲರ್ ಹೂಡಲು ವಿದೇಶದಲ್ಲಿ ವಾಸಿಸುವ ನೇಪಾಳಿಗರಿಗೆ ಕರೆ
- ದುಬಾರಿ ಕಾರು, ಚಿನ್ನ ಮತ್ತಿತರ ಐಷಾರಾಮಿ ವಸ್ತು ಆಮದಿಗೆ ನಿರ್ಬಂಧ
