ನವದೆಹಲಿ [ಜ.05]:  ಪಾಕಿಸ್ತಾನದ ಲಾಹೋರ್‌ ಸಮೀಪವಿರುವ, ಸಿಖ್‌ ಧರ್ಮ ಸಂಸ್ಥಾಪಕ ಗುರುನಾನಕ್‌ ಅವರ ಜನ್ಮಸ್ಥಳ ನಾನಕಾನ ಸಾಹಿಬ್‌ನಲ್ಲಿನ ಗುರುದ್ವಾರದ ಮೇಲಿನ ಕಲ್ಲುತೂರಾಟ ವಿರುದ್ಧ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿದೆ. ಈ ಘಟನೆ ಖಂಡಿಸಿ ದೇಶದ ವಿವಿಧೆಡೆ ಶನಿವಾರ ಪ್ರತಿಭಟನೆಗಳು ನಡೆದಿವೆ. ದೆಹಲಿಯಲ್ಲಿನ ಪಾಕ್‌ ರಾಯಭಾರ ಕಚೇರಿ ಸಮೀಪ ಕಾಂಗ್ರೆಸ್‌, ಅಕಾಲಿದಳ ಹಾಗೂ ಸಿಖ್ಖರು ಶನಿವಾರ ಪ್ರತಿಭಟನೆ ನಡೆಸಿದ್ದರೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಕೂಡ ರಸ್ತೆಗಿಳಿದು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದ್ದಾರೆ.

ಪಾಕ್‌, ಬಾಂಗ್ಲಾ, ಆಫ್ಘನ್‌ನಿಂದ ನಿರಾಶ್ರಿತರಾಗಿ ಬರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಕಾಯ್ದೆ ಕುರಿತು ದೇಶದಲ್ಲಿ ಆಕ್ರೋಶ ಭುಗಿಲೆದ್ದಿರುವ ಸಂದರ್ಭದಲ್ಲೇ ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ನಡೆದಿರುವ ದಾಳಿ ಬಗ್ಗೆ ಕೇಂದ್ರ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿದೆ. ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ ಪ್ರತಿಕ್ರಿಯಿಸಿ,‘ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಸಾಕ್ಷ್ಯ ಬೇಕೇ?’ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಪ್ರಶ್ನಿಸಿದ್ದಾರೆ.

ಬಾಂಗ್ಲಾ ವಿಡಿಯೋ ಹಾಕಿ ಭಾರತದ್ದು ಎಂದ ಇಮ್ರಾನ್: ಟ್ವೀಟ್ ಟ್ಯಾಗ್ ಬ್ಲಾಕ್!...

ಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳು ಸೇರಿದಂತೆ ಭಾರತದಲ್ಲಿ ಸರ್ವತ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನ, ‘ಗುರುದ್ವಾರದ ಮೇಲೆ ದಾಳಿ ನಡೆದಿಲ್ಲ. ಗುರುದ್ವಾರವು ಸುರಕ್ಷಿತವಾಗಿದೆ. ನಾನಕಾನ ಸಾಹಿಬ್‌ ಬಳಿ ಮುಸ್ಲಿಂ ಗುಂಪುಗಳ ನಡುವೆ ಸಣ್ಣ ಘರ್ಷಣೆ ನಡೆದಿದೆ ಅಷ್ಟೇ’ ಎಂದು ಹೇಳಿಕೊಂಡಿದೆ.

ಸಿಡಿದೆದ್ದ ಭಾರತೀಯರು:

ದಿಲ್ಲಿಯಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿ ಮುಂದೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಹಾಗೂ ಅಕಾಲಿದಳದ ಸದಸ್ಯರು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕೂಡ ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿ ಪಾಕಿಸ್ತಾನದ ವಿರುದ್ಧ ಆಕ್ರೋಶ ಹೊರಹಾಕಿದರು. ಇದೇ ವೇಳೆ, ಪರಿಸ್ಥಿತಿ ಅವಲೋಕನಕ್ಕಾಗಿ ನಾನಕಾನ ಸಾಹಿಬ್‌ಗೆ 4 ಸದಸ್ಯರ ನಿಯೋಗ ಕಳಿಸಲು ಶೀರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ನಿರ್ಧರಿಸಿದೆ.

ದಾಳಿ ನಡೆದಿಲ್ಲ- ಪಾಕ್‌:

‘ಲಾಹೋರ್‌ ಬಳಿಯ ನಾನಕಾನ ಸಾಹಿಬ್‌ ಗುರುದ್ವಾರಕ್ಕೆ ಯಾವ ಹಾನಿಯೂ ಸಂಭವಿಸಿಲ್ಲ. ಗುರುದ್ವಾರದ ಮೇಲೆ ದಾಳಿ ಮಾಡಿ ಹಾನಿ ಮಾಡಲಾಗಿದೆ ಎಂಬುದು ಸುಳ್ಳು’ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಂಡಿದೆ.

ಶನಿವಾರ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ಬಗ್ಗೆ ಸ್ಪಷ್ಟನೆ ನೀಡಿ, ‘ನಾನಕಾನ ಸಾಹಿಬ್‌ ನಗರದಲ್ಲಿ ಶುಕ್ರವಾರ ಎರಡು ಮುಸ್ಲಿಂ ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಚಹಾ ಅಂಗಡಿಯಲ್ಲಿ ನಡೆದ ಸಣ್ಣ ಹೊಡೆದಾಟ ಇದಾಗಿದ್ದು, ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿದರು. ಗುರುದ್ವಾರವನ್ನು ಯಾರೂ ಮುಟ್ಟಿಲ್ಲ ಹಾಗೂ ಅದಕ್ಕೆ ಹಾನಿಯಾಗಿಲ್ಲ. ಈ ಹೊಡೆದಾಟಕ್ಕೆ ಕೋಮು ಬಣ್ಣ ಕಟ್ಟಲಾಗುತ್ತಿದೆ. ಗುರುದ್ವಾರ ಅಪವಿತ್ರಗೊಳಿಸಲಾಗಿದೆ ಎಂಬುದು ಸುಳ್ಳು’ ಎಂದು ಹೇಳಿದೆ.

ಕಾಂಗ್ರೆಸ್ಸಿನ ನವಜೋತ್‌ ಸಿಂಗ್‌ ಸಿಧು ಈಗ ಎಲ್ಲಿದ್ದಾರೆ? ಇಷ್ಟೆಲ್ಲಾ ಆದ ಮೇಲೂ ಐಸಿಸ್‌ ಮುಖ್ಯಸ್ಥರನ್ನು ಅಪ್ಪಿಕೊಳ್ಳಲು ಬಯಸಿದರೆ, ಆ ಬಗ್ಗೆ ಕಾಂಗ್ರೆಸ್‌ ಗಮನಹರಿಸಬೇಕು.

- ಮೀನಾಕ್ಷಿ ಲೇಖಿ, ಬಿಜೆಪಿ ನಾಯಕಿ

ನಾನಕಾನ ಸಾಹಿಬ್‌ ಗುರುದ್ವಾರದ ಮೇಲಿನ ದಾಳಿ ಖಂಡನಾರ್ಹ. ಧರ್ಮಾಂಧತೆ ಅಪಾಯಕಾರಿ. ಗಡಿ ಅರಿಯದ ಪುರಾತನ ವಿಷ. ಪ್ರೀತಿ, ಪರಸ್ಪರ ಗೌರವ, ತಿಳುವಳಿಕೆಯೇ ಇದಕ್ಕೆ ಸೂಕ್ತ ಮದ್ದು.

- ರಾಹುಲ್‌ ಗಾಂಧಿ ಕಾಂಗ್ರೆಸ್‌ ನಾಯಕ