ನವದೆಹಲಿ(ಜ.04): ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್‌ ಆಗಿದ್ದಾರೆ.  

ಪೌರತ್ವ ತಿದ್ದುಪಡಿ ಕಾಯ್ದೆ ವಿರೊಧಿಸುವ ಬರದಲ್ಲಿ ನಕಲಿ ವಿಡಿಯೋ ಹಾಕಿದ್ದ ಇಮ್ರಾನ್, ಉತ್ತರಪ್ರದೇಶದ ಮುಸ್ಲಿಮರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಮುಸ್ಲಿಮರ ಮೇಲೆ ಅಲ್ಲಿನ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ವಿಡಿಯೋ ಟ್ವೀಟ್ ಮಾಡಿದ್ದರು.

ಆದರೆ ಈ ವಿಡಿಯೋ ಭಾರತದ್ದಾಗಿರದೇ 2013ರಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ Rapid Action Force ನಡೆಸಿದ್ದ ಕಾರ್ಯಾಚರಣೆಯ ವಿಡಿಯೋ ಎಂಬುದು ಸಾಬೀತಾಗಿದೆ.

ಪೌರತ್ವ ತಿದ್ದುಪಡಿ ಜಾರಿಯ ಅಸಲಿಯತ್ತು(?) ಹೇಳಿದ ಇಮ್ರಾನ್!

ಪೊಲೀಸರ ಸಮವಸ್ತ್ರದ ಮೇಲೆ ಬಾಂಗ್ಲಾದೇಶ Rapid Action Force ಎಂದು ಬರೆದಿರುವುದು ಸ್ಪಷ್ಟವಾಗಿದ್ದು, ನಕಲಿ ವಿಡಿಯೋ ಹಾಕಿದ ಇಮ್ರಾನ್ ಖಾನ್ ಅವರನ್ನು ಟ್ರೋಲ್ ಮೂಲಕ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಪಾಕ್ ಪ್ರಧಾನಿಗೆ ಬಾಂಗ್ಲಾ ಪೊಲೀಸರು ಹಾಗೂ ಭಾರತೀಯ ಪೊಲೀಸರ ನಡುವೆ ವ್ಯತ್ಯಾಸ ಗೊತ್ತಿಲ್ಲದಿರುವುದು ಅಚ್ಚರಿ ತಂದಿದೆ ಎಂದು ನೆಟ್ಟಿಗರು ಇಮ್ರಾನ್ ಖಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಟ್ರೋಲಿಗರಲ್ಲಿ ಪಾಕಿಸ್ತಾನಿಯರೂ ಇರುವುದು ವಿಶೇಷ.

ಭಾರತದ ಆಕ್ಷೇಪ:

ಇನ್ನು ಇಮ್ರಾನ್ ಖಾನ್ ಅವರ ನಕಲಿ ವಿಡಿಯೋಗೆ ಪ್ರತಿಕ್ರಿಯಿಸಿರುವ ಭಾರತ, ಸುಳ್ಳು ಸುದ್ದಿಗಳನ್ನು ಹರಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುವ ಪ್ರಯತ್ನ ಪಾಕ್ ಸರ್ಕಾರದ ಆಡಳಿತ ನೀತಿಯಾಗಿದೆ ಎಂದು ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನದ ಕಳ್ಳ ಸುದ್ದಿ ಮತ್ತೆ ಜಗಜ್ಜಾಹೀರಾಗಿದೆ ಎಂದು ಹರಿಹಾಯ್ದಿದ್ದಾರೆ.

ಪೌರತ್ವ ಮಸೂದೆ: ಬೇಡದ ಇರುವೆ ಬಿಟ್ಕೊಂಡ ಪಾಕ್ ಪ್ರಧಾನಿ!

ಇನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಕ್ಬರುದ್ದೀನ್ ಕೂಡ ಇಮ್ರಾನ್ ಖಾನ್ ಟ್ವಿಟ್‌ನ್ನು ಖಂಡಿಸಿದ್ದು, ಭಾರತದ ಜಾತ್ಯಾತೀತ ಸ್ವರೂಪ ಅರಿಯದ ಇಮ್ರಾನ್ ಖಾನ್ ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಟ್ವಿಟ್ ಟ್ಯಾಗ್ ಬ್ಲಾಕ್ ಮಾಡಿದ ಇಮ್ರಾನ್:
ಇನ್ನು ತಮ್ಮ ಟ್ವಿಟ್ ಭಾರೀ ಟ್ರೋಲ್‌ಗೆ ಒಳಗಾಗುತ್ತಿದ್ದಂತೇ ಟ್ವೀಟ್‌ನ್ನು ಡಿಲೀಟ್ ಮಾಡಿರುವ ಪಾಕ್ ಪ್ರಧಾನಿ, ತಮ್ಮ ಟ್ವೀಟ ಟ್ಯಾಗ್ ಆಪ್ಶನ್‌ನ್ನು ಕೂಡ ಬ್ಲಾಕ್ ಮಾಡಿದ್ದಾರೆ.