ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ದಾಳಿ| ಮ್ಯಾನ್ಮಾರ್ ಸೇನಾ ದಾಳಿ ಸಾವಿನ ಸಂಖ್ಯೆ 114ಕ್ಕೆ: ವಿಶ್ವಸಂಸ್ಥೆ ತೀವ್ರ ಖಂಡನೆ
ಯಾಂಗೋನ್ (ಮಾ.29): ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 114ಕ್ಕೆ ಏರಿದೆ. ಇದರೊಂದಿಗೆ ಕಳೆದ ಫೆಬ್ರುವರಿಯಲ್ಲಿ ಆರಂಭವಾದ ಸೇನಾ ದಾಳಿಗೆ ಬಲಿಯಾದವರ ಸಂಖ್ಯೆ 420 ದಾಟಿದೆ.
ಈ ನಡುವೆ ಶನಿವಾರ ಪ್ರತಿಭಟನಾಕಾರರ ಮೇಲೆ ಸೇನೆಯ ಮಾರಕ ದಾಳಿಯ ಹೊರತಾಗಿಯೂ ಭಾನುವಾರವೂ ಜನರು ಸೇನಾಡಳಿತದ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಮ್ಯಾನ್ಮಾರ್‌ನ ಎರಡು ಅತಿದೊಡ್ಡ ನಗರಗಳಾದ ಯಾಂಗೋನ್ ಹಾಗೂ ಮಂಡಲೇಯ್‌ನಲ್ಲಿ ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆಯನ್ನು ಮುಂದುವರಿಸಲಾಗಿದೆ.
ಇದೇ ವೇಳೆ ಮ್ಯಾನ್ಮಾರ್‌ನಲ್ಲಿ ಪ್ರತಿಭಟನಾಕಾರರ ಹತ್ಯೆಗೆ ವಿಶ್ವದೆಲ್ಲೆಡೆಯಿಂದ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಮ್ಯಾನ್ಮಾರ್‌ನಲ್ಲಿ ಮಕ್ಕಳು ಸೇರಿದಂತೆ ನಾಗರಿಕರ ಹತ್ಯೆ ಆಘಾತಕಾರಿ. ಪ್ರಜಾಪ್ರಭುತ್ವ ಪರವಾದ ಪ್ರತಿಭಟನೆಯನ್ನು ಸೇನಾ ಬಲದಿಂದ ಹತ್ತಿಕ್ಕುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಇದರ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರಿಸ್ ಹೇಳಿದ್ದಾರೆ. ಇದೇ ವೇಳೆ ಮ್ಯಾನ್ಮಾರ್‌ನಲ್ಲಿ ನಡೆದ ಹತ್ಯಾಕಾಂಡವನ್ನು ಅಮೆರಿಕ ವಿದೇಶಾಂಗ ಸಚಿವ ಅಂಥೋನಿ ಬ್ಲಿಕೆಂನ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ.
