ಭಾರತದಲ್ಲಿ ಮಾನವ ಹಕ್ಕುಗಳ ದೌರ್ಜನ್ಯ ಹೆಚ್ಚಳ: ಅಮೆರಿಕ

* ರಾಜನಾಥ್‌, ಜೈಶಂಕರ್‌ ಸಮ್ಮುಖವೇ ಹೇಳಿ ಉದ್ಧಟತನ

* ಆ ಬಗ್ಗೆ ನಾವು ನಿಗಾ ಇಟ್ಟಿದ್ದೇವೆ: ಅಮೆರಿಕ ವಿದೇಶ ಸಚಿವ

* ಭಾರತದಲ್ಲಿ ಮಾನವ ಹಕ್ಕುಗಳ ದೌರ್ಜನ್ಯ ಹೆಚ್ಚಳ: ಅಮೆರಿಕ

Monitoring some recent concerning developments in India including rights abuse Antony Blinken pod

ವಾಷಿಂಗ್ಟನ್‌(ಏ.13): ಭಾರತದಲ್ಲಿ ಮಾನವ ಹಕ್ಕುಗಳ ದೌರ್ಜನ್ಯದಲ್ಲಿ ಹೆಚ್ಚಳವಾಗಿದ್ದು, ಆ ಬಗ್ಗೆ ನಿಗಾ ಇಟ್ಟಿರುವುದಾಗಿ ಅಮೆರಿಕ ಹೇಳಿದೆ. ತನ್ಮೂಲಕ ಭಾರತದೊಳಗಿನ ವಿಚಾರಗಳ ಕುರಿತು ಪ್ರಸ್ತಾಪಿಸಿ ಉದ್ಧಟತನ ಮೆರೆದಿದೆ.

‘ಕೆಲವು ಸರ್ಕಾರ, ಪೊಲೀಸ್‌ ಹಾಗೂ ಕಾರಾಗೃಹ ಅಧಿಕಾರಿಗಳಿಂದ ಮಾನವ ಹಕ್ಕುಗಳ ದೌರ್ಜನ್ಯ ಇತ್ತೀಚೆಗೆ ಹೆಚ್ಚಳವಾಗಿರುವ ಕಳವಳಕಾರಿ ಬೆಳವಣಿಗೆ ನಡೆಯುತ್ತಿದ್ದು, ಆ ಬಗ್ಗೆ ಗಮನಹರಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಅಮೆರಿಕದ ರಕ್ಷಣಾ ಸಚಿವ ಲಾಯ್ಡ್‌ ಆಸ್ಟಿನ್‌, ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಕೂಡ ಇದ್ದರು.

ಯಾವ ರೀತಿ ಮಾನವ ಹಕ್ಕುಗಳ ದೌರ್ಜನ್ಯದಲ್ಲಿ ಹೆಚ್ಚಳವಾಗಿದೆ ಎಂಬ ಬಗ್ಗೆ ಬ್ಲಿಂಕನ್‌ ಅವರು ವಿವರಣೆ ನೀಡಲಿಲ್ಲ. ಬ್ಲಿಂಕನ್‌ ಬಳಿಕ ಮಾತನಾಡಿದ ಜೈಶಂಕರ್‌ ಅವರೂ ಈ ವಿಚಾರವನ್ನು ಪ್ರಸ್ತಾಪಿಸಲಿಲ್ಲ.

‘ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಅಮೆರಿಕ ಹಿಂಜರಿಯುತ್ತಿರುವುದೇಕೆ?’ ಎಂದು ಅಧ್ಯಕ್ಷ ಜೋ ಬೈಡೆನ್‌ ಅವರ ಪಕ್ಷದವರೇ ಆಗಿರುವ ಇಲ್ಹಾನ್‌ ಒಮರ್‌ ಅವರು ಪ್ರಶ್ನಿಸಿದ್ದರು. ಅದರ ಬೆನ್ನಿಗೇ ಅಮೆರಿಕದಿಂದ ಈ ಹೇಳಿಕೆ ಹೊರಬಿದ್ದಿದೆ.

ಹೇಳಿಕೆಗೆ ಇವು ಕಾರಣ?:

ಮತಾಂತರ ನಿಷೇಧ ಕಾಯ್ದೆಯನ್ನು ಹಲವರು ರಾಜ್ಯಗಳು ಅಂಗೀಕರಿಸಿವೆ ಅಥವಾ ಅಂಗೀಕರಿಸಲು ಯತ್ನಿಸುತ್ತಿವೆ. ಇದು ಸಂವಿಧಾನಬದ್ಧವಾಗಿ ದೊರೆತಿರುವ ಧಾರ್ಮಿಕ ನಂಬಿಕೆಯ ಹಕ್ಕಿಗೆ ವಿರುದ್ಧವಾಗಿದೆ ಎಂಬ ದೂರು ಅಮೆರಿಕಕ್ಕೆ ತಲುಪಿದೆ. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ, ನೆರೆದೇಶಗಳ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ವಿಚಾರಗಳು, ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿಷೇಧ ವಿಷಯಗಳ ಹಿನ್ನೆಲೆಯಲ್ಲಿ ಅಮೆರಿಕ ಈ ಹೇಳಿಕೆ ನೀಡಿರಬಹುದು ಎಂಬ ವಾದವೂ ಇದೆ.

Latest Videos
Follow Us:
Download App:
  • android
  • ios