G20 Summit -2022: ಜಿ20 ಶೃಂಗದ ಯಶಸ್ಸಿಗೆ ಮೋದಿ ಕಾರಣ : ಅಮೆರಿಕ
- ಜಿ20 ಶೃಂಗ ಯಶಸ್ಸಿನಲ್ಲಿ ಮೋದಿ ಪಾತ್ರ ಹಿರಿದು: ಅಮೆರಿಕ
- ಹಲವು ವಿಷಯಗಳಲ್ಲಿ ದೇಶಗಳ ನಡುವೆ ಒಮ್ಮತ
- ಸಹಮತ ಮೂಡಿಸುವಲ್ಲಿ ಮೋದಿ ಯಶಸ್ವಿ
- ಬೈಡೆನ್ ಮೇಲೇರಿದ್ದ ಹೊರೆ ಇಳಿಸಿದ್ದೂ ಮೋದಿ ಹಿರಿಮೆ
- ಅಮೆರಿಕ ಉಪ ಭದ್ರತಾ ಸಲಹೆಗಾರ ಫೈನರ್ ಪ್ರಶಂಸೆ
ವಾಷಿಂಗ್ಟನ್ (ನ.21): ಇತ್ತೀಚೆಗೆ ಇಂಡೋನೇಷ್ಯಾದ ರಾಜಧಾನಿ ಬಾಲಿಯಲ್ಲಿ ಮುಕ್ತಾಯಗೊಂಡ ಜಿ20 ದೇಶಗಳ ಶೃಂಗ ಸಭೆಯ ಯಶಸ್ಸಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರ ಅತ್ಯಂತ ಹಿರಿದಾದುದು. ವಿವಿಧ ವಿಷಯಗಳಲ್ಲಿ ಜಾಗತಿಕ ನಾಯಕರ ನಡುವೆ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗುವ ಮೂಲಕ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ನ ಹೊರೆ ಇಳಿಸಿದರು ಎಂದು ಅಮೆರಿಕ ಹಾಡಿ ಹೊಗಳಿದೆ.
ಇಲ್ಲಿ ಆಯೋಜಿತ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಅಮೆರಿಕ ರಾಷ್ಟ್ರೀಯ ಉಪ ಭದ್ರತಾ ಸಲಹೆಗಾರ ಜೋನ್ ಫೈನರ್, ‘ರಷ್ಯಾ- ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಇದು ಯುದ್ಧದ ಸಮಯವಲ್ಲ ಎಂಬ ಮೋದಿ ಹೇಳಿಕೆ ಎಲ್ಲರಿಂದಲೂ ಸಹಮತ ಪಡೆದುಕೊಂಡಿತು. ಇದರ ಹೊರತಾಗಿ ಅವರು ಹಲವು ಜಾಗತಿಕ ವಿಷಯಗಳಲ್ಲಿ ನಾನಾ ದೇಶಗಳ ನಡುವೆ ಒಮ್ಮತ ಮೂಡಿಸುವ ಮೂಲಕ, ಏಕಾಂಗಿಯಾಗಿ ಈ ಹೊಣೆ ಹೊತ್ತಿದ್ದ ಅಮೆರಿಕ ಅಧ್ಯಕ್ಷರ ಹೊರೆಯನ್ನು ಕಡಿಮೆ ಮಾಡಿದರು’ ಎಂದು ಹೇಳಿದರು.
ಮೋದಿಗೆ ನೀಡಿದ್ದಂತೆ ಸೌದಿ ರಾಜಗೂ ತನಿಖೆಯಿಂದ ರಕ್ಷಣೆ: ಅಮೆರಿಕ ವಿದೇಶಾಂಗ ಇಲಾಖೆ ವಿವಾದಿತ ಹೇಳಿಕೆ
‘ಅಮೆರಿಕ- ಭಾರತ ನಡುವಿನ ಸಂಬಂಧ ವೃದ್ಧಿಯಲ್ಲಿ 2022 ಅತ್ಯಂತ ಮಹತ್ವದ ವರ್ಷವಾಗಿದ್ದರೆ, 2023 ಇನ್ನಷ್ಟುಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ವಿಶ್ವದ ಯಾವುದೇ ದೇಶಗಳಿಗೆ ಹೋಲಿಸಿದರೆ ಭಾರತದ ಜೊತೆಗಿನ ಸಂಬಂಧವು ಅತ್ಯುತ್ತಮ ಆಪ್ತ ಮತ್ತು ಮಹತ್ವದ್ದು ಎಂದು ಬೈಡೆನ್ ಆಡಳಿತ ಬಲವಾಗಿ ನಂಬಿದೆ’ ಎಂದು ಫೈನರ್ ಹೇಳಿದ್ದಾರೆ.