ಬೆಂಗಳೂರು ಘಟನೆಗೆ ಸೇಡು: ಕಾಂಗೋದಲ್ಲಿ ಭಾರತೀಯರ ಅಂಗಡಿಗಳ ಮೇಲೆ ಉದ್ರಿಕ್ತರ ದಾಳಿ ಅಂಗಡಿ ದಾಳಿ ಮಾಡಿ ದೋಚಿದ ಯುವಕರು
ಕಾಂಗೋ(ಆ.14): ಬೆಂಗಳೂರಿನಲ್ಲಿ ಪೊಲೀಸರ ವಶದಲ್ಲಿದ್ದ ಕಾಂಗೋ ಮೂಲದ ವಿದ್ಯಾರ್ಥಿ ಸಾವಿಗೀಡಾಗಿದ್ದಕ್ಕೆ ಪ್ರತೀಕಾರವಾಗಿ ಆಫ್ರಿಕಾದ ಕಾಂಗೋದಲ್ಲಿ ಭಾರತೀಯರ ಒಡೆತನದಲ್ಲಿರುವ ಅಂಗಡಿಗಳ ಮೇಲೆ ಉದ್ರಿಕ್ತ ಗುಂಪು ಗುರುವಾರ ದಾಳಿ ಮಾಡಿದೆ. ಆಗಸ್ಟ್ 1ರಂದು ಡ್ರಗ್ ಮಾರಾಟದ ವಿಚಾರವಾಗಿ ಬೆಂಗಳೂರಿನ ಪೊಲೀಸರು ಜೋಯಲ್ ಶಿಂದಾನಿ (27) ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದರು. ಆಗಸ್ಟ್ 2ರಂದು ಪೊಲೀಸ್ ಠಾಣೆಯಲ್ಲಿ ಆತ ಮೃತಪಟ್ಟಿದ್ದ.
ಇದಕ್ಕೆ ಸೇಡು ತೀರಿಸಿಕೊಳ್ಳಲು ಕೆಲವು ಯುವಕರು ಕಾಂಗೋದಲ್ಲಿ ಭಾರತೀಯರ ಒಡೆತನದ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿಗಳನ್ನು ದೋಚಿದ್ದಾರೆ. ಈ ಸಂಬಂಧ ಕಾಂಗೋ ಪೊಲೀಸರು 3 ಜನರನ್ನು ಬಂಧಿಸಿದ್ದಾರೆ. ಶಿಂದಾನಿ ಸಾವಿನ ನಂತರ ಕರಿಯರ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ ಎನ್ನುವ ಅಭಿಯಾನ ಪ್ರಪಂಚದಾದ್ಯಂತ ಶುರುವಾಗಿತ್ತು. ಇದರಿಂದಾಗಿ ಅವರು ಅಂಗಡಿಗಳ ಮೇಲೆ ದಾಳಿ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರಲ್ಲಿ ಆಫ್ರಿಕಾ ಪ್ರಜೆಗಳ ಗೂಂಡಾಗಿರಿ: ಎಸ್‌ಐ ಮೇಲೆ ಹಲ್ಲೆ!
ಭಾರತದಲ್ಲಿ ವಾಸಿಸುತ್ತಿರುವ ತಮ್ಮ ನಾಗರಿಕರ ವಿರುದ್ಧ ವರ್ಣಭೇದ ನೀತಿಯ ಬಗ್ಗೆ ಆಫ್ರಿಕನ್ ರಾಜತಾಂತ್ರಿಕರು ಈ ಹಿಂದೆ ದೂರು ನೀಡಿದ್ದರು. ಅದರಲ್ಲೂ ವಿಶೇಷವಾಗಿ 2016 ರಲ್ಲಿ ದೆಹಲಿಯಲ್ಲಿ ಕಾಂಗೋ ದೇಶದ ವ್ಯಕ್ತಿಯನ್ನು ಹೊಡೆದು ಸಾಯಿಸಲಾಯಿತು.
ಭಾರತದಲ್ಲಿ ಎರಡನೇ ಕಾಂಗೋ ಪ್ರಜೆ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ವದಂತಿಗೆ ಪ್ರತಿಕ್ರಿಯೆಯಾಗಿ ಜನಸಮೂಹವು ಆಗಸ್ಟ್ 12 ರಂದು ಭಾರತೀಯ ಅಂಗಡಿಗಳು ಮತ್ತು ಗೋದಾಮುಗಳನ್ನು ಲೂಟಿ ಮಾಡಿತು. ಕಾರನ್ನು ಸುಟ್ಟುಹಾಕಿತು ಮತ್ತು ಕಿನ್ಶಾಸಾದ ಲಿಮೆಟೆ ನೆರೆಹೊರೆಯಲ್ಲಿ ಇತರ ಮೂರು ವಾಹನಗಳಿಗೆ ಕಲ್ಲು ಹಾಕಿತು ಎಂದು ಕಾಂಗೋ ಪೊಲೀಸರು ತಿಳಿಸಿದ್ದಾರೆ.
