* ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯಾ ಅಭಿಮತ* ಲಸಿಕೆ ಮಿಶ್ರಣದಿಂದ ಹೆಚ್ಚು ರೋಗನಿರೋಧಕ ಶಕ್ತಿ ವೃದ್ಧಿ* ಬೇರೆ ಬೇರೆ ಕಂಪನಿಗಳ ತಲಾ ಒಂದೊಂದು ಡೋಸ್‌ ನೀಡಿಕೆ* ಇದರಿಂದ ಲಸಿಕೆ ಕೊರತೆ ನಿಗ್ರಹ, ಲಸಿಕಾಕರಣದ ವೇಗ ಹೆಚ್ಚಳ

ನವದೆಹಲಿ(ಜೂ.22): ಕೊರೋನಾ ವೈರಸ್‌ನ ವಿವಿಧ ರೂಪಾಂತರಿ ತಳಿಗಳು ಆತಂಕ ಸೃಷ್ಟಿಸುತ್ತಿರುವ ನಡುವೆಯೇ ಕೋವಿಡ್‌-19 ಲಸಿಕೆಯ ಮಿಶ್ರಣ ವಿವಿಧ ದೇಶಗಳಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್‌ ಹೇಳಿದ್ದಾರೆ. ಇದರರ್ಥ ಮೊದಲ ಡೋಸ್‌ ಲಸಿಕೆ ಒಂದು ಕಂಪನಿಗೆ ಸೇರಿದ್ದರೆ, 2ನೇ ಡೋಸ್‌ ಲಸಿಕೆ ಇನ್ನೊಂದು ಕಂಪನಿಗೆ ಸೇರಿದ್ದಾಗಿರುತ್ತದೆ.

ಈ ಬಗ್ಗೆ ಮಾತನಾಡಿರುವ ಸೌಮ್ಯಾ, ‘ಲಸಿಕೆಯ ಸಮ್ಮಿಶ್ರಣ ಉತ್ತಮ ಕೆಲಸ ಮಾಡುತ್ತಿದೆ. ಕೆಲವು ದೇಶಗಳಿಗೆ ಮೊದಲನೇ ಡೋಸ್‌ ಲಸಿಕೆ ವಿತರಣೆ ಬಳಿಕ 2ನೇ ಡೋಸ್‌ ವಿತರಣೆಗೆ ಲಸಿಕೆಯ ಕೊರತೆ ಉಂಟಾಗುತ್ತದೆ. ಇಂಥ ದೇಶಗಳು 2ನೇ ಡೋಸನ್ನು ಬೇರೆ ಕಂಪನಿಯ ಲಸಿಕೆ ನೀಡಲು ಅನುವಾಗುತ್ತದೆ’ ಎಂದು ಹೇಳಿದ್ದಾರೆ.

‘ಲಸಿಕೆಯ ಸಮ್ಮಿಶ್ರಣವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈರಸ್‌ಗಳು ದೇಹದ ಒಳಕ್ಕೆ ಸೇರದಂತೆ ಶಕ್ತಿಶಾಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ವೈರಸ್‌ ನಿಂದ ಬಾಧಿತವಾದ ರಕ್ತದ ಕೋಶಗಳನ್ನೂ ನಾಶ ಮಾಡುತ್ತದೆ’ ಎಂದಿದ್ದಾರೆ..

ಮಲೇೕಷ್ಯಾ ಈಗ ಆಸ್ಟ್ರಾಜೆನೆಕಾ ಹಾಗೂ ಫೈಜರ್‌ ಲಸಿಕೆಗಳನ್ನು ವಿವಿಧ 2 ಡೋಸ್‌ಗಳಾಗಿ ನೀಡಲು ಚಿಂತನೆ ನಡೆಸಿದೆ ಎಂದೂ ಅವರು ಹೇಳಿದ್ದಾರೆ. ಮಲೇಷ್ಯಾ ಸರ್ಕಾರವೂ ಇದಕ್ಕೆ ಸಹಮತ ವ್ಯಕ್ತಪಡಿಸಿದೆ. ಇದು ಲಸಿಕಾಕರಣದ ವೇಗ ಹೆಚ್ಚಿಸುತ್ತದೆ ಎಂದು ಹೇಳಿದೆ.

ಆದರೆ ಕೋವಿಡ್‌ ಎರಡೂ ಲಸಿಕೆ ಪಡೆದ ಬಳಿಕ ‘ರೋಗನಿರೋಧಕ ಶಕ್ತಿ’ ಹೆಚ್ಚಿಸುವ 3ನೇ ಚುಚ್ಚುಮದ್ದು ನೀಡುವ ಲಸಿಕೆ ಕಂಪನಿಯ ಯತ್ನದ ಬಗ್ಗೆ ಈಗಲೇ ಏನೂ ಹೇಳಲಾಗದರು ಎಂದು ಸ್ಪಷ್ಟಪಡಿಸಿದ್ದಾರೆ.