ಕೋಲಂಬೊ(ಸೆ.20): ಜನರ ಸಮಸ್ಯೆಗಳಿಗೆ ಉತ್ತರಿಸಲು ಸಾಮಾನ್ಯವಾಗಿ ಸಚಿವರು ಸುದ್ದಿಗೋಷ್ಠಿ ನಡೆಸುತ್ತಾರೆ. ಆದರೆ, ಶ್ರೀಲಂಕಾದ ಸಚಿವರೊಬ್ಬರು ದೇಶ ಎದುರಿಸುತ್ತಿರುವ ತೆಂಗಿನಕಾಯಿ ಕೊರತೆಯ ವಿವರಿಸಲು ತಾವೇ ಸ್ವತಃ ತೆಂಗಿನ ಮರವನ್ನು ಏರಿ ಗಮನ ಸೆಳೆದಿದ್ದಾರೆ.

ತಮ್ಮ ಮನೆಯ ಗಾರ್ಡನ್‌ನಲ್ಲಿ ಬೆಳೆದ ತೆಂಗಿನ ಮರವನ್ನು ಯಂತ್ರದ ಸಹಾಯದಿಂದ ಏರಿದ ತೆಂಗು ಬೆಳೆಗಳ ರಾಜ್ಯಸಚಿವ ಅರುಂದಿಕಾ ಫೆರ್ನಾಂಡೋ, ಕೆಲವು ತೆಂಗಿನ ಕಾಯಿಗಳನ್ನು ಕೊಯ್ದಿದ್ದಾರೆ. ಈ ವೇಳೆ ಮಾತನಾಡಿದ ಅವರು, ತೆಂಗಿನಕಾಯಿಯ ದರವನ್ನು ಇಳಿಸಲು ತಮ್ಮ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಖಾಲಿ ಜಾಗದಲ್ಲಿ ಹೆಚ್ಚು ಹೆಚ್ಚು ತೆಂಗಿನ ಸಸಿಗಳನ್ನು ಬೆಳೆಸುವ ಮೂಲಕ ಸರ್ಕಾರ ಈ ಸಮಸ್ಯೆಯನ್ನು ನೀಗಿಸಲಿದೆ ಎಂದು ಹೇಳಿದ್ದಾರೆ. ಬಳಿಕ ಸಚಿವರ ಬೆಂಬಲಿಗರು ಮನವೊಲಿಸಿ ಅವರನ್ನು ಮರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀಲಂಕಾ ವಿಶ್ವದಲ್ಲೇ ಅತಿ ಹೆಚ್ಚು ತೆಂಗಿನಕಾಯಿ ಉತ್ಪಾದಿಸುವ ದೇಶಗಳಲ್ಲಿ ಒಂದೆನಿಸಿದೆ. ಹೀಗಾಗಿ ಉದ್ದಿಮೆಗಳು ಹೆಚ್ಚಾಗಿ ತೆಂಗು ಬೆಳೆಯನ್ನೇ ನೆಚ್ಚಿಕೊಂಡಿವೆ. ಆದರೆ, ಸ್ಥಳೀಯ ಕೈಗಾರಿಕೆ ಮತ್ತು ಗೃಹ ಬಳಕೆಗೆ ಅಗತ್ಯವಿರುವಷ್ಟುತೆಂಗಿನಕಾಯಿಗಳು ಪೂರೈಕೆ ಆಗುತ್ತಿಲ್ಲ. ಹೀಗಾಗಿ ತೆಂಗಿಗೆ ಭಾರೀ ಬೇಡಿಕೆ ಬಂದಿದ್ದು, 1000 ತೆಂಗಿನ ಕಾಯಿಗೆ 50ರಿಂದ 56 ಸಾವಿರ (ಶ್ರೀಲಂಕಾ ರುಪಾಯಿ)ಗೆ ಮಾರಾಟವಾಗುತ್ತಿದೆ. ಮತ್ತೊಂದೆಡೆ ತೆಂಗಿನಕಾಯಿಯ ಕೊಯ್ಲು ಮಾಡಲು ಕಾರ್ಮಿಕರ ಕೊರತೆ ಎದುರಾಗಿದೆ. ಒಂದು ಅಂದಾಜಿನ ಪ್ರಕಾರ ಶ್ರೀಲಂಕಾದ ಸ್ಥಳೀಯ ಕೈಗಾರಿಕೆಗಳು 70 ಕೋಟಿ ತೆಂಗಿನಕಾಯಿಗಳ ಕೊರತೆಯನ್ನು ಎದುರಿಸುತ್ತಿವೆ.