ಫೇಸ್‌ಬುಕ್ ಮಾತೃಸಂಸ್ಥೆ ಮೆಟಾದಿಂದ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ಅಧಿಕೃತ!
ಎಲಾನ್ ಮಸ್ಕ್ ಟ್ವಟರ್ ಖರೀದಿ ಮಾಡಿದ ಬಳಿಕ ಅರ್ಧಕ್ಕರ್ಧ ಸಿಬ್ಬಂದಿಗೆ ಗೇಟ್‌ಪಾಸ್ ನೀಡಿದ್ದರು. ಈಗ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಫ್ಲಾಟ್‌ಫಾರ್ಮ್ ತನ್ನಲ್ಲಿನ ಶೇ. 13 ರಷ್ಟು ವರ್ಕ್‌ಫೋರ್ಸ್ ಅಂದರೆ 11 ಸಾವಿರ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡೋದಾಗಿ ಘೋಷಣೆ ಮಾಡಿದೆ.
ನ್ಯೂಯಾರ್ಕ್ (ನ.9): 2022ರ ವರ್ಷದ ಅತಿದೊಡ್ಡ ಲೇಆಫ್ ಅಥವಾ ಉದ್ಯೋಗ ಕಡಿತದಲ್ಲಿ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಫ್ಲಾಟ್‌ಫಾರ್ಮ್ ಇಂಕ್, ತನ್ನಲ್ಲಿನ ಶೇ. 13ರಷ್ಟು ವರ್ಕ್‌ಫೋರ್ಸ್ ಕಡಿತ ಮಾಡುವುದಾಗಿ ಹೇಳಿದೆ. ಅದರರ್ಥ ಮೆಟಾ ಫ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವ 11 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬುಧವಾರ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕಂಪನಿಯ ನಿರಾಶಾದಾಯಕ ಗಳಿಕೆಗಳು, ಹೆಚ್ಚುತ್ತಿರುವ ವೆಚ್ಚಗಳು ಹಾಗೂ ದುರ್ಬಲ ಮಾರುಕಟ್ಟೆಯ ಕಾರಣದಿಂದಾಗಿ ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿ ವೆಚ್ಚ ಕಡಿತ ಮಾಡಲು ನಿರ್ಧರಿಸಿದೆ. ಅದರ ಮೊದಲ ಭಾಗವಾಗಿ ವರ್ಕ್‌ಫೋರ್ಸ್ ಕಡಿತ ಮಾಡಲಾಗುವುದಾಗಿ ತಿಳಿಸಿದೆ. "ಈ ನಿರ್ಧಾರಗಳಿಗೆ ಮತ್ತು ನಾವು ಇಲ್ಲಿಗೆ ಹೇಗೆ ಬಂದೆವು ಎನ್ನುವುದರ ಸಂಪೂರ್ಣ ಹೊಣೆಗಾರಿಕೆಯನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ನನಗೆ ಗೊತ್ತು ಇದು ಎಲ್ಲರಿಗೂ ಅತ್ಯಂತ ಕಠಿಣವಾದ ಸಮಯ. ಆದರೆ, ಈ ನಿರ್ಧಾರದಿಂದ ಪರಿಣಾಮ ಎದುರಿಸಿದವರ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ' ಎಂದು ಮೆಟಾದ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2004 ರಲ್ಲಿ ಫೇಸ್‌ಬುಕ್ ಸ್ಥಾಪನೆಯಾದ ನಂತರ ಇದೇ ಮೊದಲ ಬಾರಿಗೆ ವೆಚ್ಚ ಕಡಿತದ ಕಾರಣಕ್ಕಾಗಿ ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಡಿಜಿಟಿಲ್ ಜಾಹೀರಾತು ಆದಾಯದಲ್ಲಿನ ತೀವ್ರ ಕುಸಿತ, ಆರ್ಥಿಕ ಹಿಂಜರಿತದ ಅಂಚಿನಲ್ಲಿ ತತ್ತರಿಸುತ್ತಿರುವ ಆರ್ಥಿಕತೆ ಮತ್ತು ಮೆಟಾವರ್ಸ್ ಎಂದು ಕರೆಯಲ್ಪಡುವ ಊಹಾತ್ಮಕ ವರ್ಚುವಲ್-ರಿಯಾಲಿಟಿ ಪ್ರಪಂಚದಲ್ಲಿ ಜುಕರ್‌ಬರ್ಗ್ ಅವರ ಭಾರೀ ಹೂಡಿಕೆಯ ಕಾರಣದಿಂದಾಗಿ ಈ ನಿರ್ಧಾರ ಮಾಡಲಾಗಿದೆ.
ಮೆಟಾ ಫ್ಲಾಟ್‌ಫಾರ್ಮ್‌ನಿಂದ ವಜಾಗೊಂಡಿರುವ ಉದ್ಯೋಗಿಗಳ ಬಗ್ಗೆ ಬುಧವಾರ ಬೆಳಗ್ಗೆ ಮಾಹಿತಿ ತಿಳಿಸಲಾಗುವುದು ಎಂದು, ಮಂಗಳವಾರ ವರ್ಕ್‌ಫೋರ್ಸ್ ಕಡಿತಕ್ಕೆ ಕರೆದ ಸಭೆಯಲ್ಲಿ ಮಾರ್ಕ್ ಜುಕರ್‌ಬರ್ಗ್ ತನ್ನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಾರ್ಯನಿರ್ವಾಹಕ ಸಭೆಯಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ಕಂಪನಿಯ "ತಪ್ಪು ಹೆಜ್ಜೆಗಳಿಗೆ" ತಾನು ಜವಾಬ್ದಾರನಾಗಿದ್ದೇನೆ ಎಂದು ಜುಕರ್‌ಬರ್ಗ್ ಹೇಳಿದರು.
ವ್ಯಾಪಕ ವಜಾಗಳು: ಕಂಪನಿಯ 18 ವರ್ಷಗಳ ಇತಿಹಾಸದಲ್ಲಿ ಮೆಟಾದ ಉದ್ಯೋಗ ಕಡಿತ ಇದೇ ಮೊದಲಾಗಿದೆ. ಕಳೆದವಾರವಷ್ಟೇ ಟ್ವಿಟರ್‌ನಲ್ಲಿ ಅರ್ಧಕ್ಕರ್ಧ ಉದ್ಯೋಗಿಗಳನ್ನು ಕಡಿತ ಮಾಡಲಾಗಿತ್ತು. ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ಬಳಿಕ ಸುಮಾರು ಶೇ. 50ರಷ್ಟು ಉದ್ಯೋಗಿಗಳಿಗೆ ಗೇಟ್‌ಪಾಸ್ ನೀಡಿದ್ದರು.
ಆದರೆ, ಮಸ್ಕ್ ಉದ್ಯೋಗಿಗಳನ್ನು ವಜಾ ಮಾಡಿದ್ದ ರೀತಿ ಕೆಟ್ಟದಾಗಿತ್ತು. ಅನೇಕ ಉದ್ಯೋಗಿಗಳಿಗೆ ಸ್ಲಾಕ್ ಅಥವಾ ಇಮೇಲ್‌ನಲ್ಲಿ ಕೆಲಸ ಕಡಿತವಾಗಿರುವ ಬಗ್ಗೆ ಮಾಹಿತಿ ಸ್ವೀಕರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿನ ನಷ್ಟವನ್ನು ತಡೆಯಲು ಈ ಕ್ರಮಗಳು ಅಗತ್ಯ ಎಂದು ಮಸ್ಕ್ ಹೇಳಿದ್ದಾರೆ. ನಂತರ ಅವರು ಕೆಲವು ವಜಾ ಮಾಡಿದ ಕೆಲ ಉದ್ಯೋಗಿಗಳಿಗೆ ಹಿಂತಿರುಗುವಂತೆಯೂ ಕೇಳಿದ್ದರು.
ಟ್ವಿಟ್ಟರ್ ಆಯ್ತು ಈಗ Meta ಕಂಪನಿಯಿಂದ ಸಾವಿರಾರು ಉದ್ಯೋಗಿಗಳ ವಜಾ..!
ಫೇಸ್‌ಬುಕ್‌ನ ಎದುರಾಳಿಯಾಗಿರುವ ಸ್ನ್ಯಾಪ್‌ಚಾಟ್‌ನ ಮಾತೃಸಂಸ್ಥೆ ಸ್ನ್ಯಾಪ್ ಇಂಕ್ ಕೂಡ ಇದೇ ಸಂಕಷ್ಟ ಎದುರಿಸಿತ್ತು. ಕಳೆದ ಆಗಸ್ಟ್ ವೇಳೆಗೆ ತನ್ನ ವರ್ಕ್‌ಫೋರ್ಸ್‌ನಲ್ಲಿ ಶೇ.20ರಷ್ಟು ಕಡಿತ ಮಾಡಿರುವುದಾಗಿ ಹೇಳಿತ್ತು. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಟೆಕ್ ಸಂಸ್ಥೆಗಳ ಮೌಲ್ಯಗಳು ದೊಡ್ಡ ಮಟ್ಟದಲ್ಲಿ ಏರಿಕೆ ಆಗಿದ್ದವು. ಆದರೆ, ಇದು ಹೆಚ್ಚು ದಿನ ಉಳಿಯಲಿಲ್ಲ. ಎಲ್ಲವೂ ಸಹಜ ಸ್ಥಿತಿಗೆ ಬಂದಿತು ಎನ್ನವಾಗಲೇ, ದಶಕಗಳಲ್ಲಿಯೇ ದೊಡ್ಡ ಮಟ್ಟದ ಹಣದುಬ್ಬರ ಹಾಗೂ ಬಡ್ಡಿದರ ಏರಿಕೆಯನ್ನು ಎದುರಿಸಿದೆ.
ಬೆಂಗಳೂರು: ಜಿಮ್‌ಗೆ ಫೇಸ್‌ಬುಕ್ ಒಡೆಯನ ಸೋದರಿ..!
ಮೆಟಾ ಕಂಪನಿಯ ಷೇರುಗಳು ಅಮೆರಿಕ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ. ಇದರಿಂದಾಗಿ ಕಂಪನಿಯ ವೆಚ್ಚವನ್ನು ಕಡಿತಗೊಳಿಸಲು ಮತ್ತು ಮೊದಲ ತ್ರೈಮಾಸಿಕದ ಮೂಲಕ ತನ್ನ ನೇಮಕಾತಿ ಫ್ರೀಜ್ ಅನ್ನು ವಿಸ್ತರಿಸಲು ಯೋಜಿಸಿದೆ ಎಂದು ಹೇಳಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದ ಮಾರ್ಕ್ ಜುಕುರ್‌ಬರ್ಗ್, ಮೆಟಾ ಖರ್ಚು ಕಡಿಮೆ ಮಾಡಲು ಯೋಚನೆ ಮಾಡುತ್ತಿದೆ. ಅದಲ್ಲದೆ, ಟೀಮ್‌ಗಳನ್ನು ಪುನರ್‌ರಚನೆ ಮಾಡುವ ಯೋಜನೆ ಇದೆ ಎಂದಿದ್ದರು. ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಅನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಮೂಲದ ಮೆನ್ಲೋ ಪಾರ್ಕ್‌ನ ಮೆಟಾ, ನೇಮಕಾತಿ ಫ್ರೀಜ್ ಅನ್ನು ಜಾರಿಗೆ ತಂದಿದೆ ಮತ್ತು 2023 ರಲ್ಲಿ ಮೆಟಾ ಹೆಡ್‌ಕೌಂಟ್ ಬಹಳಷ್ಟ ಕಡಿಮೆ ಆಗಿರಲಿದೆ ಸಿಇಒ ಹೇಳಿದ್ದರು.