ಅಮೆರಿಕದ ತೆರಿಗೆಗೆ ಹೆದರಿ ಹಲವು ದೇಶಗಳು ತೆರಿಗೆ ಒಪ್ಪಂದಕ್ಕಾಗಿ ತಮ್ಮನ್ನು ಬೇಡುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಚೀನಾ ಟ್ರಂಪ್ ವಿರುದ್ಧ ಒಗ್ಗಟ್ಟಾಗುವ ಸಾಧ್ಯತೆ ಇದೆ. ಶೀಘ್ರದಲ್ಲೇ ಔಷಧ ಕ್ಷೇತ್ರಕ್ಕೂ ತೆರಿಗೆ ವಿಧಿಸಲು ಟ್ರಂಪ್ ಸುಳಿವು ನೀಡಿದ್ದಾರೆ.
ವಾಷಿಂಗ್ಟನ್: 'ಅಮೆರಿಕ ಹಾಕಿರುವ ಆಮದು ತೆರಿಗೆಗೆ ಥರಗುಟ್ಟಿರುವ ಹಲವು ದೇಶಗಳು ನಮ್ಮ ಜತೆಗೆ ತೆರಿಗೆ ಒಪ್ಪಂದ ಮಾಡಿಕೊಳ್ಳಿ ಎಂದು ನನಗೆ ದಂಬಾಲು ಬೀಳುತ್ತಿವೆ. ತೆರಿಗೆ ಒಪ್ಪಂದಕ್ಕಾಗಿ ಅವರನನ್ನ ಪೃಷ್ಠವನ್ನು ನೆಕ್ಕುತ್ತಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೀಳು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರು ಪ್ರತಿ ತೆರಿಗೆ ಹೇರಿರುವ ದೇಶಗಳು ಯಾವ ರೀತಿ ಹತಾಶಗೊಂಡಿವೆ ಎಂಬುದರ ಕುರಿತು ವ್ಯಂಗ್ಯವಾಡಿದ್ದಾರೆ.
ನ್ಯಾಷನಲ್ ರಿಪಬ್ಲಿಕನ್ ಕಾಂಗ್ರೆಸ್ಸೆಷನಲ್ ಕಮಿಟಿ ಜತೆಗಿನ ಸಭೆಯಲ್ಲಿ ಬುಧವಾರ ಬೆಳಗ್ಗೆ ಮಾತನಾಡಿದ ಅವರು, 'ನಾವು ಪ್ರತಿ ತೆರಿಗೆ ಹೇರಿರುವ ದೇಶಗಳಿಂದ ನನಗೆ ಕರೆಗಳು ಬರುತ್ತಿವೆ. ತೆರಿಗೆ ಒಪ್ಪಂದ ಮಾಡಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಅವರು ಹೇಳುತ್ತಿದ್ದಾರೆ. ಅವರು ನನ್ನ ಪಷ್ಟ ನೆಕ್ಕುತ್ತಿದ್ದಾರೆ' ಎಂದು ಹೇಳಿದ್ದಾರೆ.
ಅಮೆರಿಕದ ಪ್ರತಿತೆರಿಗೆ ಪರಿಣಾಮ ಏನು ಎನ್ನುವುದು ಇನ್ನೂ ತಿಳಿದಿಲ್ಲ. ಆದರೆ ಇದನ್ನು ನಿರ್ವಹಿಸಲು ಭಾರತ ಅಮೆರಿಕದ ಜತೆ ದ್ವಿಪಕ್ಷೀಯ ವ್ಯಾಪಾರ ಚರ್ಚೆ ನಡೆಸುತ್ತಿದೆ.
ವರ್ಷದೊಳಗೆ ಅದು ಸಾಕಾರವಾಗಬಹುದು ಎಂದು ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿಕೆ ನೀಡಿದ್ದಾರೆ.
ಟ್ರಂಪ್ ವಿರುದ್ಧ ಭಾರತ-ಚೀನಾ ಒಗ್ಗಟ್ಟು: ಕ್ಸಿ ಕರೆ
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಮೇಲೆ ಶೇ.26 ಹಾಗೂ ಚೀನಾ ವಸ್ತುಗಳ ಮೇಲೆ ಕಂಡು ಕೇಳರಿಯದ ಶೇ.125ಆಮದು ಸುಂಕ ಹೇರುತ್ತಿದ್ದಂತೆಯೇ, ‘ಭಾರತ-ಚೀನಾ ಒಟ್ಟಾಗಿ ಟ್ರಂಪ್ ವಿರುದ್ಧ ನಿಲ್ಲಬೇಕು’ ಎಂದು ಚೀನಾ ಆಗ್ರಹಿಸಿದೆ. ಈ ಮೂಲಕ ಶತ್ರುವಿನ ಶತ್ರು ಮಿತ್ರ ಎಂಬ ತತ್ವ ಪಾಲನೆಗೆ ಮುಂದಾಗಿದೆ.
ಟ್ರಂಪ್ ಶೇ.125ರಷ್ಟು ತೆರಿಗೆ ಹೇರಿದ ಬಳಿಕ ಮೊದಲ ಬಾರಿ ಮಾತನಾಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ಅಕ್ಕಪಕ್ಕದ ದೇಶಗಳು ಭಿನ್ನಮತ ಬಗೆಹರಿಸಿಕೊಂಡು ತಮ್ಮ ಬಾಂಧವ್ಯ ಬಲಪಡಿಸಿಕೊಳ್ಳಬೇಕು. ಪರಸ್ಪರ ವ್ಯಾಪಾರವನ್ನು ಬಾಂಧವ್ಯ ಹೆಚ್ಚಿಸಿಕೊಳ್ಳಬೇಕು’ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದ ಮೇಲೆ ಚೀನಾ, ಯುರೋಪ್ ಒಕ್ಕೂಟ ಜಂಟಿ ತೆರಿಗೆ ದಾಳಿ
ಇನ್ನು ಭಾರತದಲ್ಲಿನ ಚೀನಾ ವಿದೇಶಾಂಗ ಕಚೇರಿ ವಕ್ತಾರೆ ಯು ಜಿಂಗ್ ಟ್ವೀಟ್ ಮಾಡಿದ್ದು, ‘ಚೀನಾ-ಭಾರತ ಆರ್ಥಿಕ ಮತ್ತು ವ್ಯಾಪಾರ ಸಂಬಂಧವು ಪರಸ್ಪರ ಲಾಭಗಳನ್ನು ಆಧರಿಸಿದೆ. ವಿಶೇಷವಾಗಿ ‘ಜಾಗತಿಕ ದಕ್ಷಿಣ’ದಲ್ಲಿರುವ ದೇಶಗಳ ಅಭಿವೃದ್ಧಿಯ ಹಕ್ಕನ್ನು ಕಸಿದುಕೊಳ್ಳುವ ಅಮೆರಿಕದ ಸುಂಕ ಕಸಿದುಕೊಳ್ಳುತ್ತಿದೆ. ಇಂಥ ಸವಾಲಿನ ಪರಿಸ್ಥಿತಿ ಎದುರಿಸಲು ಈ ಪ್ರದೇಶದ ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕು’ ಎಂದು ಮನವಿ ಮಾಡಿದ್ದಾರೆ.
ಔಷಧ ಕ್ಷೇತ್ರಕ್ಕೂ ಶೀಘ್ರ ತೆರಿಗೆ: ಟ್ರಂಪ್ ಸುಳಿವು
ಅಮೆರಿಕದ ಪ್ರತಿ ತೆರಿಗೆ ಬಿಸಿಯು ಇದೀಗ ಭಾರತದ ಫಾರ್ಮಾ (ಔಷಧ) ಕ್ಷೇತ್ರದ ಮೇಲೂ ಬೀಳುವುದು ಸ್ಪಷ್ಟವಾಗಿದೆ. ಈವರೆಗೆ ಫಾರ್ಮಾ ಕ್ಷೇತ್ರವನ್ನು ಪ್ರತಿ ತೆರಿಗೆಯಿಂದ ಹೊರಗಿಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಆ ಕ್ಷೇತ್ರದ ಮೇಲೂ ಶೀಘ್ರದಲ್ಲಿ ತೆರಿಗೆ ಹೇರಲಿದ್ದೇನೆ ಎಂದಿದ್ದಾರೆ. ಭಾರತದಿಂದ 2,41,731 ಲಕ್ಷ ಕೋಟಿ ರು. ಔಷಧ ರಫ್ತು ಆಗುತ್ತಿದ್ದು, ಇದರಲ್ಲಿ ಅಮೆರಿಕದ ಶೇ.31 (75 ಸಾವಿರ ಕೋಟಿ ರು.) ಆಗಿದೆ.
ಚೀನಾದಿಂದ ಶೇ.84 ತೆರಿಗೆ:
ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ, ಬೀಜಿಂಗ್ ಬುಧವಾರ ಅಮೆರಿಕದ ಸರಕುಗಳ ಮೇಲೆ ಶೇ. 84 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದೆ. ಇದು ಹಿಂದೆ ಘೋಷಿಸಲಾದ ಶೇ. 34ಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ.
ಇದನ್ನೂ ಓದಿ: ಉಲ್ಟಾ ಹೊಡೆದ ಟ್ರಂಪ್: 90 ದಿನ ತೆರಿಗೆ ಹೊಡೆತಕ್ಕೆ ತಡೆ; ವಿಶ್ವ ಷೇರುಪೇಟೆ ಇಂದು ಚೇತರಿಕೆ ಸಾಧ್ಯತೆ
