ವಿಶ್ವದ ಅನೇಕ ದೇಶಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ಕ್ರಮ ಬುಧವಾರ ಭಾಗಶಃ ಜಾರಿಗೆ ಬಂದಿದೆ. 

ಬೀಜಿಂಗ್‌/ಬ್ರಸೆಲ್ಸ್‌ (ಏ.10): ವಿಶ್ವದ ಅನೇಕ ದೇಶಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಕಠಿಣ ಕ್ರಮ ಬುಧವಾರ ಭಾಗಶಃ ಜಾರಿಗೆ ಬಂದಿದೆ. 75 ದೇಶಗಳ ಮೇಲಿನ ತೆರಿಗೆ ಹೇರಿಕೆಗೆ ಅವರು 90 ದಿನ ತಡೆ ನೀಡಿದ್ದರೂ ಚೀನಾಗೆ ತಡೆ ನೀಡಿಲ್ಲ. ಹೀಗಾಗಿ ಅಮೆರಿಕದಿಂದ ಕಂಡು ಕೇಳರಿಯದ ರೀತಿಯಲ್ಲಿ ಶೇ.104ರಷ್ಟು ಆಮದು ಸುಂಕಕ್ಕೆ ಒಳಗಾಗಿರುವ ಚೀನಾ, ಶೇ.84ರಷ್ಟು ಪ್ರತಿತೆರಿಗೆ ಘೋಷಿಸಿದೆ. ಇನ್ನು ಯುರೋಪ್‌ ಒಕ್ಕೂಟ ಕೂಡ ತಿರುಗಿಬಿದ್ದಿದ್ದು, ಅಮೆರಿಕದಿಂದ ಆಮದಾಗುವ 23 ಶತಕೋಟಿ ಡಾಲರ್‌ ಉತ್ಪನ್ನಗಳ ಮೇಲೆ ಹಂತ ಹಂತವಾಗಿ ಪ್ರತಿತೆರಿಗೆ ಹಾಕುವುದಾಗಿ ಘೋಷಿಸಿದೆ. ಇದರಿಂದಾಗಿ ಮತ್ತೊಂದು ಜಾಗತಿಕ ತೆರಿಗೆ ಯುದ್ಧ ಅಧಿಕೃತವಾಗಿ ಆರಂಭವಾದಂತಾಗಿದೆ.

ಚೀನಾದಿಂದ ಶೇ.84 ತೆರಿಗೆ: ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ, ಬೀಜಿಂಗ್ ಬುಧವಾರ ಅಮೆರಿಕದ ಸರಕುಗಳ ಮೇಲೆ ಶೇ. 84 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದೆ. ಇದು ಹಿಂದೆ ಘೋಷಿಸಲಾದ ಶೇ. 34ಕ್ಕಿಂತ ಗಮನಾರ್ಹ ಹೆಚ್ಚಳವಾಗಿದೆ. ಮಂಗಳವಾರವಷ್ಟೇ ಟ್ರಂಪ್, ಚೀನಾ ಮೇಲೆ ಈ ಮೊದಲಿನ ಶೇ.54ಕ್ಕಿಂತ ಹೆಚ್ಚುವರಿಯಾಗಿ ಶೇ.50 ಸುಂಕ ಘೋಷಿಸಿದ್ದರು ಹಾಗೂ ಒಟ್ಟು ಸುಂಕವನ್ನು ಶೇ.104ಕ್ಕೆ ಹೆಚ್ಚಿಸಿದ್ದರು. ಬಳಿಕ ಶೇ125ಕ್ಕೆ ಏರಿಸಿದರು. ಇದರ ವಿರುದ್ಧ ಗುಡುಗಿರುವ ಚೀನಾ, ಈ ಹಿಂದಿನ ಶೇ.34ರಷ್ಟು ತೆರಿಗೆ ಹೇರಿಕೆಯನ್ನು ಶೇ.84ಕ್ಕೆ ಪರಿಷ್ಕರಿಸಿದೆ. ಏ.10ರಿಂದ ಇದು ಜಾರಿಗೆ ಬರಲಿದೆ ಎಂದು ಹೇಳಿದೆ. ‘ಅಮೆರಿಕದ ತೆರಿಗೆ ಬೆದರಿಕೆಗೆ ಪ್ರತಿಯಾಗಿ ಚೀನಾ ದೃಢನಿಶ್ಚಯದ ಹಾಗೂ ಪರಿಣಾಮಕಾರಿ ಕ್ರಮ ಜರುಗಿಸಲಿದೆ’ ಎಂದೂ ಚೀನಾ ಹೇಳದೆ.

ಅಮೆರಿಕ ಎಚ್ಚರಿಕೆಗೂ ಚೀನಾ ಡೋಂಟ್ ಕೇರ್; ಗದಾಪ್ರಹಾರ ನಡೆಸಿದ ಡೊನಾಲ್ಡ್ ಟ್ರಂಪ್

ಇಯು ಪ್ರತೀಕಾರ: ಟ್ರಂಪ್‌ ಅವರ ತೆರಿಗೆ ಹೇರಿಕೆ ಕ್ರಮ ವಿರೋಧಿಸಿರುವ ಯುರೋಪ್‌ ಒಕ್ಕೂಟ (ಇಯು), 23 ಶತಕೋಟಿ ಡಾಲರ್ ಮೌಲ್ಯದ ಅಮೆರಿಕದ ಉತ್ಪನ್ನಗಳ ಮೇಲೆ ಹಂತ ಹಂತವಾಗಿ ತೆರಿಗೆ ಹೇರುವುದಾಗಿ ಘೋಷಿಸಿದೆ. ಏ.15, ಮೇ 15 ಹಾಗೂ ಡಿಸೆಂಬರ್ 1- ಹೀಗೆ 3 ಹಂತಗಳಲ್ಲಿ ತೆರಿಗೆ ಹಾಕಲಾಗುವುದು ಎಂದು ನಿರ್ಣಯಿಸಿದೆ. ಅಮೆರಿಕದಿಂದ ಯುರೋಪ್‌ಗೆ ಸೋಯಾಬೀನ್, ಮೋಟಾರ್ ಸೈಕಲ್‌ಗಳು ಮತ್ತು ಸೌಂದರ್ಯ ಉತ್ಪನ್ನಗಳು ಸೇರಿ ಅನೇಕ ಉತ್ಪನ್ನಗಳು ರಫ್ತಾಗುತ್ತವೆ. ಆದರೆ ಅವುಗಳ ಮೇಲೆ ಎಷ್ಟು ಸುಂಕ ಹೇರಲಾಗುತ್ತದೆ ಎಂಬುದನ್ನು ಇಯು ಹೇಳಿಲ್ಲ.