- Home
- News
- State
- ಬೆಂಗಳೂರಿಗೆ ಡೆಲಿವರಿ ಬಾಯ್ ಕೆಲಸಕ್ಕೆ ಬಂದ ಬಿಹಾರ ಕಾರ್ಮಿಕ; ತನ್ನದಲ್ಲದ ತಪ್ಪಿಗೆ ಪೆಟ್ಟುತಿಂದು ವಾಪಸ್ ಹೋದ!
ಬೆಂಗಳೂರಿಗೆ ಡೆಲಿವರಿ ಬಾಯ್ ಕೆಲಸಕ್ಕೆ ಬಂದ ಬಿಹಾರ ಕಾರ್ಮಿಕ; ತನ್ನದಲ್ಲದ ತಪ್ಪಿಗೆ ಪೆಟ್ಟುತಿಂದು ವಾಪಸ್ ಹೋದ!
ಬೆಂಗಳೂರಿನ ಮಹದೇವಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ದೀಪಕ್ ಮೇಲೆ ಇಬ್ಬರು ಯುವಕರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಹಲ್ಲೆಕೋರರಿಗೆ ಧರ್ಮದೇಟು ನೀಡಿ ಡೆಲಿವರಿ ಬಾಯ್‌ನನ್ನು ರಕ್ಷಿಸಿದ್ದಾರೆ. ಆದರೆ, ಗಾಯಾಳು ದೀಪಕ್, ಬೆಂಗಳೂರು ಕೆಲಸ ಬಿಟ್ಟು ಬಿಹಾರಕ್ಕೆ ಹೋದನು.

ಬೆಂಗಳೂರು ಕೆಲಸಕ್ಕೆ ಬಂದು ಪೆಟ್ಟುತಿಂದು ವಾಪಸ್ ಹೋದ ಬಿಹಾರ ಬಾಲಕ
ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಹಗಲಿರುಳು ಎನ್ನದೆ ದುಡಿಯುವ ಡೆಲಿವರಿ ಬಾಯ್‌ಗಳ ಸ್ಥಿತಿ ಅದೆಷ್ಟು ಶೋಚನೀಯ ಎಂಬುದಕ್ಕೆ ಮಹದೇವಪುರದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಒಬ್ಬನ ಮೇಲೆ ಬೈಕ್ ಸವಾರರು ಕ್ರೂರವಾಗಿ ಹಲ್ಲೆ ನಡೆಸಿದ್ದರು. ಆದರೆ, ಸುಖಾಸುಮ್ಮನೆ ಹಲ್ಲೆಗೊಳಗಾದ ಯುವಕ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಬಿಹಾರದ ಸ್ವಂತ ಊರಿಗೆ ವಾಪಸ್ ಹೋಗಿದ್ದಾನೆ.
ಇನ್ನು ಈ ದೃಶ್ಯವನ್ನು ನೋಡಿದ್ದ ಸಾರ್ವಜನಿಕರು, ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ ಹುಡುಗರ ಮೇಲೆ ಅಂತಿಮವಾಗಿ ತಕ್ಕ ಪಾಠ ಕಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಇದೀಗ ಅಲ್ಲಿ ನಡೆದ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿ ಅಲ್ತಾಫ್ ಅವರು ಸತ್ಯ ಬಿಚ್ಚಿಟ್ಟಿದ್ದಾರೆ. ಆದರೆ, ಹಲ್ಲೆಗೊಳಗಾದ ಯುವಕ ಊರು ಬಿಟ್ಟು ಹೋಗಿದ್ದಾನೆ.
ಘಟನೆಯ ಹಿನ್ನೆಲೆ
ಮಹದೇವಪುರ ಮುಖ್ಯ ರಸ್ತೆಯಲ್ಲಿ ಬಿಹಾರ ಮೂಲದ ದೀಪಕ್ ಎಂಬ ಡೆಲಿವರಿ ಬಾಯ್ ತನ್ನ ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬರುವಾಗ ಡೆಲಿವರಿ ಬಾಯ್ ದಿಢೀರ್ ಅಡ್ಡ ಬಂದಿದ್ದಾನೆ ಎಂಬ ಕಾರಣಕ್ಕೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸದಲ್ಲಿ ಉಂಟಾದ ಕೋಪವನ್ನು ಆ ಯುವಕರು ಅಮಾಯಕ ದೀಪಕ್ ಮೇಲೆ ತೀರಿಸಿಕೊಂಡಿದ್ದಾರೆ. ದೀಪಕ್‌ನನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿದ ಪುಂಡರು, ಆತನನ್ನು ಕಾಲಿನಿಂದ ಒದ್ದು, ಹೆಲ್ಮೆಟ್‌ನಿಂದ ತಲೆಗೆ ಮನಸೋ ಇಚ್ಛೆ ಹೊಡೆದು ಹಲ್ಲೆ ಮಾಡಿದ್ದಾರೆ.
ರಕ್ಷಣೆಗಿಳಿದ ಸ್ಥಳೀಯರು - ಹಲ್ಲೆಕೋರರಿಗೆ ಗೂಸಾ
ಡೆಲಿವರಿ ಬಾಯ್ ಮೇಲೆ ನಡೆಯುತ್ತಿದ್ದ ಈ ಅಮಾನವೀಯ ಹಲ್ಲೆಯನ್ನು ಕಂಡ ಸ್ಥಳೀಯರು ಸುಮ್ಮನೆ ಕೂರಲಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಲ್ತಾಫ್ ಮತ್ತು ಇತರ ಸಾರ್ವಜನಿಕರು ದೀಪಕ್‌ನನ್ನು ರಕ್ಷಿಸಿ, ಹಲ್ಲೆ ಮಾಡುತ್ತಿದ್ದ ಯುವಕರನ್ನು ಹಿಡಿದು ಸರಿಯಾಗಿ 'ಧರ್ಮದೇಟು' ನೀಡಿದ್ದಾರೆ. ಸಾರ್ವಜನಿಕರು ಹಿಡಿದು ಥಳಿಸಲು ಆರಂಭಿಸುತ್ತಿದ್ದಂತೆ, ಎಚ್ಚೆತ್ತ ಹಲ್ಲೆಕೋರರು ಎದ್ನೋ ಬಿದ್ನೋ ಎಂದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಪ್ರತ್ಯಕ್ಷದರ್ಶಿ ಅಲ್ತಾಫ್ ಹೇಳಿಕೆ
ಡೆಲಿವರಿ ಬಾಯ್‌ನದ್ದು ಯಾವುದೇ ತಪ್ಪಿರಲಿಲ್ಲ. ಬೈಕ್ ಮತ್ತು ಆತನ ವಾಹನ ಟಚ್ ಕೂಡ ಆಗಿರಲಿಲ್ಲ. ಬೈಕ್ ಸವಾರರು ತಾವಾಗಿಯೇ ನಿಯಂತ್ರಣ ತಪ್ಪಿ ಬಿದ್ದಿದ್ದರು. ಆದರೂ ದೀಪಕ್‌ನನ್ನು ಹಿಡಿದು ಹೆಲ್ಮೆಟ್‌ನಿಂದ ತೀವ್ರವಾಗಿ ಹೊಡೆದರು. ಆತನ ತಲೆಯಿಂದ ರಕ್ತ ಬರುತ್ತಿತ್ತು ಮತ್ತು ಪ್ರಜ್ಞೆ ತಪ್ಪುವ ಸ್ಥಿತಿಯಲ್ಲಿದ್ದ. ನಾವು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವು' ಎಂದು ಘಟನೆಯನ್ನು ವಿವರಿಸಿದ್ದಾರೆ.
ನೊಂದು ಊರಿಗೆ ಮರಳಿದ ದೀಪಕ್
ಹಲ್ಲೆಗೊಳಗಾದ ದೀಪಕ್ ಸಹೋದ್ಯೋಗಿ ವರುಣ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, 'ದೀಪಕ್ ಕಳೆದ ಒಂದು ವರ್ಷದಿಂದ ನಮ್ಮ ಜೊತೆ ಕೆಲಸ ಮಾಡುತ್ತಿದ್ದ. 24 ಗಂಟೆ ಸರ್ವೀಸ್ ನೀಡುವ ನಮಗೆ ಟ್ರಾಫಿಕ್ ನಡುವೆ ಕೆಲಸ ಮಾಡುವುದು ಸವಾಲಿನ ಕೆಲಸ. 10 ನಿಮಿಷ ಲೇಟ್ ಆದರೂ ಜನ ರೇಗಾಡುತ್ತಾರೆ. ಎಲ್ಲಿಂದಲೋ ಬಂದು ಹೊಟ್ಟೆಪಾಡಿಗಾಗಿ ಬದುಕು ಕಟ್ಟಿಕೊಂಡವರ ಮೇಲೆ ಇಂತಹ ಹಲ್ಲೆ ಮಾಡಬಾರದು.
ದೀಪಕ್ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ನೊಂದು ತನ್ನ ಊರಿಗೆ ವಾಪಸ್ ಹೋಗಿದ್ದಾನೆ' ಎಂದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.
Road Rage Gone Mad in Mahadevpura: Two Scooty Riders Assault Zepto Delivery Boy
A shocking incident of road rage was reported in the Mahadevpura area, where a Zepto delivery rider was brutally assaulted by two scooty riders following a minor collision between their two-wheelers.… pic.twitter.com/FehJfaSSe2— Karnataka Portfolio (@karnatakaportf) January 8, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

