ಒಂದು ತಿಂಗಳನಿಂದ ಊಟ, ನೀರು, ಕಾಫಿ, ತಿಂಡಿ ಎಲ್ಲಾ ಬಿಟ್ಟು ಬರಿ ಬಿಯರ್ ಕುಡಿಯಲು ಆರಂಭಿಸಿದ್ದಾನೆ. ಬೆಳಗ್ಗೆ ತಿಂಡಿಯೂ ಬಿಯರ್, ಮಧ್ಯಾಹ್ನೂ ಊಟವೂ ಬಿಯರ್. ಕೇವಲ 30 ದಿನ. ಮುಂದೇನಾಯ್ತು?
ಬಾನ್ ಚಾಂಗ್ (ಜು.25) ಒಂದೆರಡು ದಿನ ಸರಿಯಾಗಿ ಆಹಾರ ಸೇವಿಸಿಲ್ಲ ಎಂದರೆ ಅಸ್ವಸ್ಥಗೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಇಲ್ಲೊಬ್ಬ ಒಂದು ತಿಂಗಳಿನಿಂದ ಬರಿ ಬಿಯರ್ ಕುಡಿದಿದ್ದಾನೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಎಲ್ಲಾ ಸಮಯದಲ್ಲಿ ಬಿಯರ್ ಮಾತ್ರ ಕುಡಿದಿದ್ದಾನೆ. ಹಸಿವಾದಾಗಲು ಬಿಯರ್, ನಿದ್ದೆ ಬಂದಾಗಲು ಬಿಯರ್ ಕುಡಿದಿದ್ದಾನೆ. ಒಂದು ತಿಂಗಳಿನಿಂದ ಈತ ಬಿಯರ್ ಕುಡಿಯುತ್ತಾ ಕಾಲ ಕಳೆದಿದ್ದಾನೆ. ಇದರ ಪರಿಣಾಮ ತೀವ್ರ ಅಸ್ವಸ್ಥಗೊಂಡ ಈತ ಮೃತಪಟ್ಟ ಘಟನೆ ಥಾಯ್ಲೆಂಡ್‌ನ ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ.
ಬಿಯರ್ ಸಹವಾಸದ ಹಿಂದಿದೆ ನೋವಿನ ಘಟನೆ
44 ವರ್ಷದ ಥವೀಸಕ್ ನಮ್‌ವೋಂಗ್ಸಾ ಮಗ, ಪತ್ನಿ ಜೊತೆ ಸಂಸಾರ ನಡೆಸುತ್ತಿದ್ದ. ಹೆಚ್ಚಿನ ಸಮಸ್ಯೆಗಳಿಲ್ಲದೆ ಸಂಸಾರ ಸಾಗಿತ್ತು. ಇದ್ದಕ್ಕಿದ್ದಂತೆ ಸಂಸಾರದಲ್ಲಿ ಸೃಷ್ಟಿಯಾದ ಬಿರುಗಾಳಿ ಪತಿ ಹಾಗೂ ಪತ್ನಿ ನಡುವೆ ಜಗಳ ತಂದಿಟ್ಟಿತ್ತು. ವಾಗ್ವಾದ, ವಿವಾದ ತೀವ್ರಗೊಂಡ ಕಾರಣ ಪತ್ನಿ 16 ವರ್ಷದ ಮಗ ಕರೆದುಕೊಂಡು ಮನೆ ಬಿಟ್ಟು ಪಕ್ಕದ ಗ್ರಾಮದಲ್ಲಿ ನೆಲೆಸಿದ್ದಾಳೆ. ಇದು ಥವೀಸಕ್ ನಮ್‌ವೋಂಗ್ಸಾಗೆ ತೀವ್ರ ಆಘಾತ ನೀಡಿದೆ. ಪತ್ನಿ ಬಿಟ್ಟು ಹೋದಳು, ಮಗನೂ ಇಲ್ಲ ಎಂದು ಕೊರಗಿದ್ದಾನೆ.
ತನ್ನ ನೋವು, ಆಕ್ರೋಶಕ್ಕೆ ಬಿಯರ್ ಮೊರೆ ಹೋದ
ಸಂಸಾರದಲ್ಲಿ ಸೃಷ್ಟಿಯಾದ ಬಿರುಕು ಥವೀಸಕ್ ನಮ್‌ವೋಂಗ್ಸಾಗೆ ತಡೆಯಲು ಸಾಧ್ಯವಾಗಿಲ್ಲ. ಪ್ರತಿ ದಿನ ನೋವು, ಆಕ್ರೋಶಗಳು ಹೆಚ್ಚಾಗುತ್ತಾ ಹೋಗಿದೆ. ಪತ್ನಿಯನ್ನು ಸಂಪರ್ಕಿಸಿ ಮರಳಿ ಕರೆ ತರವು ಪ್ರಯತ್ನ ಮಾಡಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಅಷ್ಟರಲ್ಲೇ ಪತ್ನಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡಿದ್ದಾಳೆ. ಹೀಗಾಗಿ ಮಗನ ಜೊತೆಗಿರಲು ಸಾಧ್ಯವಾಗುತ್ತಿಲ್ಲ ಎಂದು ಕೊರಗಿದ್ದಾನೆ. ನೋವು ತೀವ್ರಗೊಂಡಿದೆ. ಹೀಗಾಗಿ ಕುಡಿತದ ಚಟ ಆರಂಭಿಸಿದ್ದಾನೆ. ವೀಕೆಂಡ್ ಪಾರ್ಟಿ ಮಾಡುತ್ತಿದ್ದ ಥವೀಸಕ್ ನಮ್‌ವೋಂಗ್ಸಾ ಕೆಲಕ್ಕೆ ಹೋಗದೆ, ಮನೆಯಲ್ಲೇ ಬಿಯರ್ ಕುಡಿಯಲು ಆರಂಭಿಸಿದ್ದಾನೆ.
ತಂದೆಗೆ ಆಹಾರ ನೀಡುತ್ತಿದ್ದ ಮಗ
ನೋವು ತೀವ್ರಗೊಳ್ಳುತ್ತಿದ್ದಂತೆ ಥವೀಸಕ್ ನಮ್‌ವೋಂಗ್ಸಾ ಊಟ, ಆಹಾರ ನೀರು ಎಲ್ಲಾ ಬಿಟ್ಟಿದ್ದಾನೆ. ಕೇವಲ ಬಿಯರ್ ಮಾತ್ರ ಕುಡಿಯಲು ಆರಂಭಿಸಿದ್ದಾನೆ. ಇತ್ತ ಮಗ ಪ್ರತಿ ಶಾಲೆಗೆ ಹೋಗುವಾಗ ತಂದೆಗೆ ಬಾಕ್ಸ್‌ನಲ್ಲಿ ತಿಂಡಿ, ಊಟ ನೀಡಿ ತೆರಳುತ್ತಿದ್ದ. ಈ ಆಹಾರ ಊಟವನ್ನು ಥವೀಸಕ್ ನಮ್‌ವೋಂಗ್ಸಾ ಮುಟ್ಟಲೇ ಇಲ್ಲ. ಪ್ರತಿ ದಿನ ಚೆಲ್ಲಿ ಬಾಕ್ಸ್ ಮರಳಿ ನೀಡುತ್ತಿದ್ದ. ಸರಿಸುಮಾರು ಒಂದು ತಿಂಗಳಿನಿಂದ ಆಹಾರ ಸೇವಿಸುತ್ತಲೇ ಇರಲಿಲ್ಲ. ತಂದೆ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಮಗ ಆಹಾರ ತಿನ್ನಿಸಲು ಪ್ರಯತ್ನಿಸಿದ್ದಾನೆ. ಆದರೆ ತಂದೆ ನಿರಾಕರಿಸಿದ್ದಾನೆ.
ಬೆಳಗ್ಗೆ ಆಹಾರ ತಂದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ ಅಪ್ಪ
ಎಂದಿನಂತೆ ಆಹಾರ ತಂದ ಮಗನಿಗೆ ಆಘಾತವಾಗಿದೆ. ತಂದೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಬಳಿಕ ತಂದೆಯನ್ನು ಆಸ್ಪತ್ರೆ ದಾಖಲಿಸಿದ್ದಾನೆ. ಆದರೆ ಅಷ್ಟರಲ್ಲೇ ಥವೀಸಕ್ ನಮ್‌ವೋಂಗ್ಸಾ ಮೃತಪಟ್ಟಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ವೈದ್ಯರು ಮರಣೋತ್ತರ ಪರೀಕ್ಷೆ ನೆಡೆಸಿದ್ದಾರೆ. ಈ ವೇಳೆ ಥವೀಸಕ್ ನಮ್‌ವೋಂಗ್ಸಾ ಒಂದು ತಿಂಗಳಿನಿಂದ ಆಹಾರ ಸೇವಿಸದೆ ಕೇವಲ ಬಿಯರ್ ಮಾತ್ರ ಕುಡಿದಿರುವು ಪತ್ತೆಯಾಗಿದೆ. ಆಹಾರವೆಲ್ಲಾ ಮನೆಯಲ್ಲೇ ಚೆಲ್ಲಿರುವುದು ಪತ್ತೆಯಾಗಿದೆ. ಪತ್ನಿ ಜೊತೆಗಿನ ಜಗಳದ ನೋವು, ಆಕ್ರೋಶ ತಣಿಸಲು ಬಿಯರ್ ಕುಡಿಯುತ್ತಾ ಥವೀಸಕ್ ನಮ್‌ವೋಂಗ್ಸಾ ಪ್ರಾಣ ಬಿಟ್ಟಿದ್ದಾನೆ.ಇತ್ತ ಮಗ ತಂದೆಯನ್ನು ಕಳೆದು ಕೊಂಡಿದ್ದಾನೆ. ಸಂಸಾರದಲ್ಲಿನ ಬಿರುಕು ಒಂದು ಜೀವವನ್ನೇ ಬಲಿ ಪಡೆದುಕೊಂಡಿದೆ.
