ಅವು ನನ್ನ ಕುಟುಂಬ ದಯವಿಟ್ಟು ಉಳಿಸಿಕೊಡಿ: ಬೆಂಕಿಗೆ ಸಿಕ್ಕ ಶ್ವಾನಗಳ ರಕ್ಷಣೆಗೆ ಕಣ್ಣೀರಿಟ್ಟ ಯುವಕ
ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನಿಂದಾಗಿ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಅನೇಕ ಮನೆಗಳು ನಾಶವಾಗಿವೆ. ಈ ದುರಂತದಲ್ಲಿ, ಯುವಕನೊಬ್ಬ ತನ್ನ ಮನೆಯಲ್ಲಿ ಸಿಲುಕಿರುವ ಸಾಕು ನಾಯಿಗಳನ್ನು ರಕ್ಷಿಸಲು ಕಣ್ಣೀರಿಡುತ್ತಿರುವ ದೃಶ್ಯ ವೈರಲ್ ಆಗಿದೆ.
ಲಾಸ್ ಏಂಜಲೀಸ್ ಎಂದೂ ಕಂಡು ಕೇಳರಿಯದ ಕಾಡ್ಗಿಚ್ಚಿಗೆ ತುತ್ತಾಗಿದ್ದು, ಇದರ ರೌದ್ರಾವತರ ಇನ್ನೂ ನಿಂತಿಲ್ಲ, ಹಾಲಿವುಡ್‌ಗೂ ಈ ಕಾಡ್ಗಿಚ್ಚಿನ ಬಿಸಿ ತಟ್ಟಿದ್ದು, ಅನೇಕ ಸೆಲೆಬ್ರಿಟಿಗಳು ಮನೆ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಅನೇಕ ಕಾಡುಪ್ರಾಣಿಗಳು ಈ ಅನಾಹುತದಲ್ಲಿ ಜೀವ ಕಳೆದುಕೊಂಡಿವೆ. ಅನೇಕ ಮನೆಗಳಿಗೆ ಬೆಂಕಿ ಬಿದ್ದು, ಸ್ಮಶಾನದಂತಾಗಿದೆ. ಹೀಗಿರುವಾಗ ಯುವಕನೋರ್ವ ಬೆಂಕಿಯಲ್ಲಿ ಸಿಲುಕಿದ ತನ್ನ ನಾಯಿಯನ್ನು ಬದುಕುಳಿಸುವಂತೆ ಮಾಡಿದ ಮನವಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.
ಲಾಸ್ ಏಂಜಲೀಸ್‌ನಲ್ಲಿ ಯುವಕನೋರ್ವ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಅಧಿಕಾರಿಗಳ ಬಳಿ ಬಂದು ತನ್ನ ಪೆಸಿಫಿಕ್ ಪಾಲಿಸಡೆಸ್‌ನಲ್ಲಿರುವ ಮನೆಯಲ್ಲಿ ತನ್ನ ಪ್ರೀತಿಯ ಸಾಕುನಾಯಿ ಸಿಲುಕಿಕೊಂಡಿದ್ದು, ಅದನ್ನು ಹೇಗಾದರು ಮಾಡಿ ರಕ್ಷಿಸುವಂತೆ ಅಲ್ಲಿದ್ದ ರಕ್ಷಣಾ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾನೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಜರ್ನಲಿಸ್ಟ್‌ವೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನನಗೆ ನನ್ನ ಶ್ವಾನ ಬೇಕು ಅವು ನನ್ನ ಕುಟುಂಬ ಎಂದು ಯುವಕ ಅಳುತ್ತಾ ಹೇಳುತ್ತಿರುವುದು ವೈರಲ್ ಆಗಿದೆ.
ಮೂಲಗಳ ಪ್ರಕಾರ ಘಟನೆ ನಡೆಯುವ ವೇಳೆ ಯುವಕ ಮನೆಯಲ್ಲಿ ಶ್ವಾನವನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದ. ಆದರೆ ಬೆಂಕಿ ಹಬ್ಬಿದ ವಿಷಯ ತಿಳಿಯುವಷ್ಟರಲ್ಲಿ ಮನೆಗೆ ಹೋಗಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಇತ್ತ ಆತ ಮನೆಗೆ ಹೋಗದಂತೆ ನಿವಾಸಿಗಳನ್ನು ಭದ್ರತಾ ಅಧಿಕಾರಿಗಳನ್ನು ತಡೆದಿದ್ದರು. ಹೀಗಾಗಿ ಆತ ತನ್ನ ಶ್ವಾನಗಳನ್ನು ಉಳಿಸಿಕೊಳ್ಳುವ ಸಲುವಾಗಿ ಬೈಕೊಂದನ್ನು ಬಾಡಿಗೆಗೆ ಪಡೆದು ಆ ಸ್ಥಳಕ್ಕೆ ವೇಗವಾಗಿ ಬಂದಿದ್ದ. ಆದರೆ ಶ್ವಾನಗಳಿರುವ ತನ್ನ ಮನೆಯತ್ತ ಹೋಗಲಾಗದೇ ಆತ ತೀವ್ರ ಸಂಕಟ ಪಡುತ್ತಿರುವ ದೃಶ್ಯ ಮನಕಲಕುವಂತಿದೆ.
ಇಲ್ಲಿ ಬಲವಾದ ಗಾಳಿ ಮತ್ತು ಶುಷ್ಕ ಪರಿಸ್ಥಿತಿಯಿಂದ ಉಂಟಾದ ಕಾಡ್ಗಿಚ್ಚು, ಸಾಂತಾ ಮೋನಿಕಾ ಮತ್ತು ಮಾಲಿಬು ನಡುವಿನ 1,262 ಎಕರೆ (510 ಹೆಕ್ಟೇರ್) ಪ್ರದೇಶವನ್ನು ಈಗಾಗಲೇ ಸುಟ್ಟು ಹಾಕಿದೆ, ಇದರಿಂದಾಗಿ 30,000 ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ರಾತ್ರಿಯಿಡೀ ಕೆಟ್ಟ ಗಾಳಿಯ ಪರಿಸ್ಥಿತಿ ನಿರೀಕ್ಷಿಸಲಾಗಿದ್ದು, ಮತ್ತಷ್ಟು ವಿನಾಶದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಗಾಳಿ ಹಾಗೂ ಬೆಂಕಿಯ ಸಮ್ಮಿಲನ ರೌದ್ರವತಾರವನ್ನೇ ಸೃಷ್ಟಿಸಿದ್ದು, ಸನ್‌ಸೆಟ್ ಬೌಲೆವಾರ್ಡ್ ಮತ್ತು ಪೆಸಿಫಿಕ್ ಕೋಸ್ಟ್ ಹೆದ್ದಾರಿಯ ಬಳಿ ಗಾಳಿಯಲ್ಲಿ ಹಾರಿದ ಕೆಂಡಗಳು ಆಕಾಶದೆತ್ತರ ಬೆಳೆದ ತಾಳೆ ಮರಕ್ಕೆ ಬೆಂಕಿ ಹಚ್ಚಿವೆ, ಇದರ ಜೊತೆಗೆ ಟೊಪಾಂಗಾ ಕ್ಯಾನ್ಯನ್ ನಿವಾಸಿಗಳು ಪ್ರಾಣ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಎಲ್ಲವನ್ನು ತೊರೆದು ಓಡುವಾಗ ತಮ್ಮ ವಾಹನಗಳಿಗೆ ಜ್ವಾಲೆಗಳು ವ್ಯಾಪಿಸಿದ್ದಾಗಿ ಹೇಳಿದ್ದಾರೆ. ಬೆಟ್ಟಗಳಲ್ಲಿ ಪ್ರಾರಂಭವಾದ ಬೆಂಕಿ ವೇಗವಾಗಿ ಪೆಸಿಫಿಕ್ ಮಹಾಸಾಗರದ ಕಡೆಗೆ ಹರಡಿತು.
ಕಾಡ್ಗಿಚ್ಚು ಪ್ರಾರಂಭವಾಗುವ ಮೊದಲು, ರಾಷ್ಟ್ರೀಯ ಹವಾಮಾನ ಸೇವೆಯು ಲಾಸ್ ಏಂಜಲೀಸ್ ಕೌಂಟಿಗೆ ಅತ್ಯಧಿಕ ಬೆಂಕಿ ಹಬ್ಬುವ ಎಚ್ಚರಿಕೆಯನ್ನು ನೀಡಿತ್ತು, ಪರ್ವತ ಪ್ರದೇಶಗಳಲ್ಲಿ ಗಂಟೆಗೆ 50 ರಿಂದ 80 mph (80 ರಿಂದ 130 kph) ವೇಗದಲ್ಲಿ ಗಾಳಿ ಬೀಸಲಿದ್ದು, 100 mph (160 kph) ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ಎಲ್ಲವನ್ನು ಆಡಳಿತ ನಿರ್ಲಕ್ಷಿಸಿತೋ ಏನೋ ತಿಳಿಯದು ಎಂದೂ ಕಾಣದ ತೀವ್ರವಾದ ಬೆಂಕಿಯ ಕೋಪ ತಾಪಕ್ಕೆ ಲಾಸ್ ಏಂಜಲೀಸ್ ಎಂಬ ಸುಂದರ ನಗರಿ ತುತ್ತಾಗಿದ್ದು, ಎಲ್ಲವೂ ಭಸ್ಮವಾಗಿದೆ.