ಹಾಸಿಗೆ ಹಿಡಿದ ಗಂಡ 6 ವರ್ಷ ಆರೈಕೆ ಮಾಡಿದ ಹೆಂಡ್ತಿಗೆ ಕೊಟ್ಟ ಡಿವೋರ್ಸ್
ಆರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ಗಂಡನನ್ನು ಆರೈಕೆ ಮಾಡಿದ ಪತ್ನಿಗೆ ಗುಣಮುಖನಾದ ಬಳಿಕ ಪತಿಯಿಂದ ಡಿವೋರ್ಸ್. ಒಂದೇ ವಾರದಲ್ಲಿ ಮತ್ತೊಂದು ಮದುವೆ.
ಮದುವೆ ಅನ್ನೋದು ಸುಂದರ ಅನುಬಂಧ. ಎರಡು ಜೀವಗಳು ಕೊನೆಗಾಲದವರೆಗೂ ಒಬ್ಬರಿಗೊಬ್ಬರು ಆಸರೆಯಾಗಿ ಕಷ್ಟ ಸುಖಕ್ಕೆ ಹೆಗಲಾಗಿ ಚೆನ್ನಾಗಿ ಬಾಳಲ್ಲಿ ಎಂಬ ಉದ್ದೇಶದಿಂದ ರೂಪುಗೊಂಡ ಮದುವೆಗೆ ಈಗ ಮೊದಲಿನಂತೆ ವ್ಯಾಲಿಡಿಟಿ ಇಲ್ಲ, ಯಾವಾಗ ಬೇಕಾದರು ಮದುವೆ ಮುರಿದು ಬೀಳಬಹುದು. ಇದಕ್ಕೆ ಕಾರಣಗಳು ಹಲವು. ಆದರೆ ಕಷ್ಟಕಾಲದಲ್ಲಿ ಆಸರೆಯಾದವರನ್ನು ಬದುಕಿಗೆ ಬೆಳಕಾದವರನ್ನು ಜೀವಕ್ಕೆ ಒಲವಾದವರನ್ನು ತಾನು ಸಧೃಡ ಎಂಬುದು ತಿಳಿಯುತ್ತಿದ್ದಂತೆ ಬಿಟ್ಟು ಹೋಗುವುದು ಎಷ್ಟು ಸರಿ. ಇಲ್ಲೊಂದು ಕಡೆ ತನ್ನ ಕಷ್ಟಕಾಲದಲ್ಲಿ ಆಸರೆಯಾಗಿದ್ದ ಪತ್ನಿಗೆ ಪತಿಯೊಬ್ಬ ಡಿವೋರ್ಸ್ ನೀಡಿ ಮತ್ತೊಬ್ಬಳ ಹಿಂದೆ ಹೊರಟು ಹೋಗಿದ್ದಾನೆ. ಮಲೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಗಂಡನ ಈ ಸ್ವಾರ್ಥಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಮಲೇಷ್ಯಾದ ಮಹಿಳೆಯೊಬ್ಬಳು ಅಪಘಾತದ ಬಳಿಕ ಮೇಲೆಳಲಾಗದೇ ಆರು ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ತನ್ನ ಗಂಡನನ್ನು ಮಗುವಿನಂತೆ ತುಂಬಾ ಚೆನ್ನಾಗಿ ನೋಡಿಕೊಂಡು ಆರೈಕೆ ಮಾಡಿದ್ದಳು. ಆದರೆ ಆತ ಸಂಪೂರ್ಣವಾಗಿ ಗುಣಮುಖವಾಗುತ್ತಿದ್ದಂತೆ ತನ್ನನ್ನು ಇಷ್ಟು ದಿನಗಳ ಕಾಲ ಸ್ವಲ್ಪವೂ ಬೇಸರಿಸದೇ ಆರೈಕೆ ಮಾಡಿದ್ದ ಪತ್ನಿಗೆ ಡಿವೋರ್ಸ್ ನೀಡಿದ್ದಾನೆ. ಬರೀ ಇಷ್ಟೇ ಅಲ್ಲ, ಡಿವೋರ್ಸ್ ಆದ ಒಂದೇ ವಾರಕ್ಕೆ ಆತ ಬೇರೆ ಮದುವೆಯನ್ನು ಆಗಿದ್ದಾನೆ.
ಆದರೆ ಪರಿಸ್ಥಿತಿ ಹೀಗಿದ್ದು, ಹೆಂಡತಿಯದ್ದು ಅದೆಂಥಾ ದೊಡ್ಡಮನಸ್ಸೆಂದರೆ ಆಕೆ ತನಗೆ ಕೈಕೊಟ್ಟು ಬೇರೊಬ್ಬಾಕೆಯೊಂದಿಗೆ ಮದುವೆಯಾದ ತನ್ನ ಮಾಜಿ ಪತಿಗೆ ಸಾರ್ವಜನಿಕವಾಗಿಯೇ ಮನದುಂಬಿ ಹಾರೈಸಿದ್ದಾಳೆ. ಆದರೆ ಆಕೆಗಿರುವಷ್ಟು ದೊಡ್ಡ ಮನಸ್ಸು ಜನರಿಗಿಲ್ಲ, ಈ ವಿಚಾರಕ್ಕೆ ಅಲ್ಲಿನ ನೆಟ್ಟಿಗರು ಮಾತ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೃದಯ ಇಲ್ಲದವ ಮಾನವೀಯತೆ ಇಲ್ಲದವ ಕೃತಜ್ಞತೆ ಇಲ್ಲದವ ಎಂದು ಆಕೆಯ ಮಾಜಿ ಗಂಡನನ್ನು ಒಂದೇ ಸಮನೇ ದೂರುತ್ತಿದ್ದಾರೆ ಅಲ್ಲಿನ ಸೋಶಿಯಲ್ ಮೀಡಿಯಾ ಬಳಕೆದಾರರು.
ಅಂದಹಾಗೆ ಗಂಡನಿಂದ ಹೀಗೆ ದ್ರೋಹಕ್ಕೆ ಒಳಗಾದ ಮಹಿಳೆಯ ಹೆಸರು ನೂರುಲ್ ಸಯಾಜ್ವಾನಿ, 2016ರಲ್ಲಿ ಈಕೆ ತನ್ನ ಪತಿಯನ್ನು ಮದುವೆಯಾಗಿದ್ದಳು. ಇದಾಗಿ ಲಾಂಗ್ ಡಿಸ್ಟೆನ್ಸ್ ರಿಲೇಷನ್‌ಶಿಪ್‌ನಲ್ಲಿ ಬದುಕುತ್ತಿದ್ದ ವೇಳೆ ಈತನಿಗೆ ಕಾರು ಅಪಘಾತವಾಗಿದೆ. ಇದರಿಂದ ಆರು ವರ್ಷಗಳ ಕಾಲ ಆತ ಹಾಸಿಗೆ ಹಿಡಿದಿದ್ದಾನೆ.
ಆತನ ಚೇತರಿಕೆಯ ಸಮಯದಲ್ಲಿ, ನೂರುಲ್ ಅವರು ನಾಸೊಗ್ಯಾಸ್ಟ್ರಿಕ್ ಟ್ಯೂಬ್ ಮೂಲಕ ಅವನಿಗೆ ಆಹಾರ ನೀಡುವುದು, ಅವನ ಡೈಪರ್‌ಗಳನ್ನು ಬದಲಾಯಿಸುವುದು ಮತ್ತು ಸ್ನಾನ ಮಾಡಿಸುವುದು ಸೇರಿದಂತೆ ದಾದಿಯಂತೆ ಆತನ ಸೇವೆ ಮಾಡಿದ್ದಾಳೆ. ತಮ್ಮ ಬಾಂಧವ್ಯದ ಕತೆಯನ್ನು ಈಕೆ 2019ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಬಂದಿದ್ದಾರೆ. ಇದು ಆಕೆಗೆ 36 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ತಂದು ಕೊಟ್ಟಿತ್ತು. ಆ ಸಮಯದಲ್ಲಿ, ಆತ ಕೆಮ್ಮಿದರು ನಾನು ಭಯಗೊಳ್ಳುತ್ತಿದೆ. ನಾನು ಪ್ರತಿದಿನ ಅವನಿಗೆ ಆರೈಕೆ ಮಾಡಿದ್ದೇನೆ ಮತ್ತು ನನ್ನ ಕುಟುಂಬವು ಪ್ರತಿದಿನ ನನ್ನ ಸಹಾಯಕ್ಕೆ ಬರುತ್ತಿತ್ತು. ನನಗೆ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟಿತು ಎಂದು ಆಕೆ ಸದಾ ಕಾಲ ತನ್ನ ಬದುಕಿನ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಳು.
ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಈಕೆ ಇಷ್ಟು ವರ್ಷಗಳ ಕಾಲ ಆರೈಕೆ ಮಾಡಿದ ಪತಿ ಬೇರೊಬ್ಬಾಕೆಯ ಜೊತೆ ಮದುವೆ ಆಗಿರುವ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಅಲ್ಲದೇ ತನ್ನ ಪತಿಯ ಹೊಸ ದಾಂಪತ್ಯ ಜೀವನಕ್ಕೆ ಆಕೆ ಶುಭ ಹಾರೈಸಿದ್ದಾಳೆ. ನನ್ನ ಪತಿಗೆ ಅಭಿನಂದನೆಗಳು, ನೀನು ಆಯ್ಕೆ ಮಾಡಿಕೊಂಡಿರುವವಳ ಜೊತೆ ನೀನು ಖುಷಿಯಾಗಿರುವೆ ಎಂಬ ಭರವಸೆಯಲ್ಲಿ ನಾನಿದ್ದೇ. ದಯವಿಟ್ಟು, ಐಫಾ ಅಜಿಮ್, ನಾನು ಆರೈಕೆ ಮಾಡಿದಂತೆ ನೀನು ಆತನನ್ನು ಚೆನ್ನಾಗಿ ನೋಡಿಕೊ, ನನ್ನ ಕೆಲಸ ಮುಗಿಯಿತು. ಈಗ ನಿನ್ನ ಜವಾಬ್ದಾರಿ ಎಂದು ಆಕೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಈಕೆಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಜನರು ಆಕೆಯ ಪತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಕೆ ಕೊನೆಗೆ ಪೋಸ್ಟನ್ನೇ ಡಿಲೀಟ್ ಮಾಡಿದ್ದಾಳೆ. ಇದಾದ ನಂತರ ಆಕೆ ಮತ್ತೊಂದು ಪೋಸ್ಟ್ ಮಾಡಿದ್ದು, ನಾವಿಬ್ಬರು ನಮ್ಮ ಜವಾಬ್ದಾರಿ ಮುಗಿಸಿದ್ದೇವೆ ಅಕ್ಟೋಬರ್ 6 ರಂದು ನಾವು ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದೇವೆ ಎಂದು ಆಕೆ ಬರೆದುಕೊಂಡಿದ್ದಾಳೆ. ಅಲ್ಲದೇ ತಮ್ಮ ಮಗುವಿಗೆ ಕೋ ಪೆರೇಂಟ್ ಆಗಿ ಇರುತ್ತೇವೆ ಹೀಗಾಗಿ ಆತನನ್ನು ಟೀಕಿಸದಿರಿ ಪ್ರತಿಯೊಂದು ಕಾರಣವಿದ್ದೆ ನಡೆಯುತ್ತದೆ ಎಂದು ಆಕೆ ಬರೆದುಕೊಂಡಿದ್ದಾಳೆ.
ನೋಡಿದ್ರಲ್ಲ, ಈ ಹೆಂಡ್ತಿ ಎಷ್ಟೊಂದು ವಿಶಾಲ ಹೃದಯದವಳು ಅಂತ, ಈ ವಿಚಾರದ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.