ರಕ್ಷಣಾ ಕಾರ್ಯಾಚರಣೆಯ ವೇಳೆ ಸಮುದ್ರದ ನಡುವೆ ಪತನವಾದ ಹೆಲಿಕಾಪ್ಟರ್12 ಗಂಟೆಗಳ ಕಾಲ ಈಜಿ ದಡ ಸೇರಿದ ಜೆಂಡರ್‌ಮೇರಿಯ ರಕ್ಷಣಾ ಕಾರ್ಯದರ್ಶಿಸಾಯೋಕೆ ನನ್ನ ಟೈಮ್ ಇನ್ನೂ ಬಂದಿಲ್ಲ ಎಂದ 57 ವರ್ಷದ ಜನರಲ್ ಸರ್ಜ್ ಗೆಲ್ಲೆ
ಅಂತನಾನರಿವೋ (ಡಿ.23): ರಕ್ಷಣಾ ಕಾರ್ಯಾಚರಣೆಯ ವೇಳೆ ಸಮುದ್ರದ ನಡುವೆ ಹೆಲಿಕಾಪ್ಟರ್ ಪತನಗೊಂಡರೂ, ಬರೋಬ್ಬರಿ 12 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿದ ಮಡಗಾಸ್ಕರ್ (Madagascar) ದೇಶದ ರಕ್ಷಣಾ ಕಾರ್ಯದರ್ಶಿ 57 ವರ್ಷದ ಜನರಲ್ ಸರ್ಜ್ ಗೆಲ್ಲೆ (Serge Gellé ) ಹಾಗೂ ವಾಯುಸೇನೆಯ ಚೀಫ್ ವಾರಂಟ್ ಆಫೀಸ್ ಜಿಮ್ಮಿ ಲೈತ್ಸರಾ (Chief Warrant Officer Jimmy Laitsara)ಜೀವ ಉಳಿಸಿಕೊಂಡಿದ್ದಾರೆ. ಸಮದ್ರದ ದಡಕ್ಕೆ ಹತ್ತಿರ ಬಂದ ವೇಳೆ ಸ್ಥಳೀಯ ಮೀನುಗಾರರು ಇವರಿಬ್ಬರನ್ನು ಗಮನಿಸಿದ್ದು, ಚಿಕ್ಕ ಬೋಟ್ ನಲ್ಲಿ ಇವರನ್ನು ದಡಕ್ಕೆ ಬಂದು ಸೇರಿಸಿದ್ದಾರೆ. ಪ್ರಸ್ತುತ ಇಬ್ಬರಿಗೂ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.
ಸರ್ಜ್ ಗೆಲ್ಲೆ ಹಾಗೂ ಜಿಮ್ಮಿ ಅಲ್ಲದೆ, ಇನ್ನೂ ಇಬ್ಬರು ಹೆಲಿಕಾಪ್ಟರ್ ನಲ್ಲಿದ್ದರು. ಆದರೆ, ಈವರೆಗೂ ಅವರ ಪತ್ತೆ ಸಾಧ್ಯವಾಗದ ಕಾರಣ, ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ. ಸೋಮವಾರ ರಾತ್ರಿ ಮಡಗಾಸ್ಕರ್ ದೇಶದ ಹಿಂದೂ ಮಹಾಸಾಗರದ ಈಶಾನ್ಯದಲ್ಲಿ ಹಡಗು ದುರಂತ ಸಂಭವಿಸಿತ್ತು. ಇದನ್ನು ಪರಿಶೀಲನೆ ಮಾಡಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಾಗಲು ಇವರು ತೆರಳಿದ್ದರು. ಆದರೆ, ಸಚಿವರಿದ್ದ ಹೆಲಿಕಾಪ್ಟರ್ ಪತನಗೊಂಡು ಆತಂಕ ಸೃಷ್ಟಿಯಾಗಿತ್ತು. ಕೊನೆಗೂ ಸರ್ಜ್ ಗೆಲ್ಲೆ ಹಾಗೂ ಜಿಮ್ಮಿ ಈಜುವ ಸಾಹಸ ಮಾಡುವ ಮೂಲಕ ಮಹಾಂಬೋ (Mahambo) ಕರಾವಳಿ ತೀರವನ್ನು ಮುಟ್ಟುವಲ್ಲಿ ಯಶಸ್ವಿಯಾಗಿದ್ದರು.
ದಡಕ್ಕೆ ಮುಟ್ಟಿದ ಬಳಿಕ ಮಾತನಾಡಿರುವ ಸರ್ಜ್ ಗೆಲ್ಲೆ, "ಸಾಯೋಕೆ ನನ್ನ ಟೈಮ್ ಇನ್ನೂ ಬಂದಿಲ್ಲ ಎಂದು ಕಾಣುತ್ತದೆ. ಥ್ಯಾಂಕ್ ಗಾಡ್. ನಾನು ಹುಷಾರಾಗಿದ್ದೇನೆ. ಸಾಕಷ್ಟು ಗಂಟೆಗಳ ಕಾಲ ಈಜಿದ್ದರಿಂದ ಶೀತವಾಗಿದೆ. ನನ್ನ ಮತ್ತಿಬ್ಬರು ಸ್ನೇಹಿತರು ಬದುಕಿದ್ದಾರೆಯೇ ಎನ್ನುವುದು ತಿಳಿದಿಲ್ಲ. ಅದಕ್ಕಾಗಿ ಬೇಸರವಾಗುತ್ತಿದೆ" ಎಂದು ಮಡಗಾಸ್ಕರ್ ರಕ್ಷಣಾ ಇಲಾಖೆ ಟ್ವಿಟರ್ ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.
ಸಮುದ್ರದ ಮಧ್ಯದಲ್ಲಿ ಸುಳಿಗಾಳಿಗೆ ಸಿಕ್ಕ ಹೆಲಿಕಾಪ್ಟರ್ ಸಮುದ್ರಕ್ಕೆ ಬಿದ್ದಿತ್ತು. ಕಳೆದ ರಾತ್ರಿ 7.30ಕ್ಕೆ ನಾನು ಈಜಲು ಪ್ರಾರಂಭ ಮಾಡಿದ್ದೆ. ಬೆಳಗ್ಗೆ 7.30ರವರೆಗೂ ನಾನು ಈಜುತ್ತಲೇ ಇದ್ದೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ನನ್ನ ಕುಟುಂಬಕ್ಕೆ ತಲುಪಿಸಿ. ಸಂಬಂಧಪಟ್ಟವರೆಲ್ಲಗೂ ಮುಟ್ಟಿಸಿ ನಾನು ಬದುಕಿದ್ದೇನೆ ಎನ್ನುವುದು ಅವರಿಗೆ ತಿಳಿಯಲಿ ಎಂದು ವಿಡಿಯೋದಲ್ಲಿ ಗೆಲ್ಲೆ ಮಾತಾಡಿದ್ದಾರೆ.
Helicopter Accidents : ಕಳೆದ 5 ವರ್ಷಗಳಲ್ಲಿ 15 ಸೇನಾ ದುರಂತ!
ಹೆಲಿಕಾಪ್ಟರ್ ನ ಸೀಟ್ ವೊಂದನ್ನು ಗೆಲ್ಲೆ ಅವರು ಸಮುದ್ರದಲ್ಲಿ ತೇಲಲು ಬಳಕೆ ಮಾಡಿಕೊಂಡಿದ್ದರು. ಅವರು ಅಸಾಧಾರಣ ಕ್ರೀಡಾಪಟು. ಸಚಿವರಾದ ಬಳಿಕವೂ ಇದೇ ರಿದಮ್ ಅನ್ನು ಅವರು ಕಾಯ್ದುಕೊಂಡಿದ್ದರು. 30 ವರ್ಷದ ಹುಡುಗರ ರೀತಿ ಉಕ್ಕಿನ ದೇಹವನ್ನು ಹೊಂದಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಜಾಫಿಸಂಬತ್ರ ರಾವೊವಿ (Police chief Zafisambatra Ravoavy) ಹೇಳಿದ್ದಾರೆ. ಸರ್ಜ್ ಗೆಲ್ಲೆ ಅವರು ಕಳೆದ ಆಗಸ್ಟ್ ನಲ್ಲಿ ಸಚಿವರಾಗಿ ನಿಯುಕ್ತಿಯಾಗುವ ಮುನ್ನ ಮುರು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.
IAF Chopper Crash Fact Check: ವಾಯುಸೇನೆ ಹೆಲಿಕಾಪ್ಟರ್ ಪತನದ ಸ್ಯಾಟ್‌ಲೈಟ್ ದೃಶ್ಯಾವಳಿ ವೈರಲ್?
ಹೆಲಿಕಾಪ್ಟರ್ ನಲ್ಲಿ ನಾಲ್ಕು ಮಂದಿ ಇದ್ದೆವು. ನಾವೆಲ್ಲರೂ ಪೈಲಟ್ ನ ಹಿಂದೆ ಕುಳಿತಿದ್ದೆವು. ಲೈಫ್ ಜಾಕೆಟ್ ಇಲ್ಲದ ಕಾರಣ, ಹೆಲಿಕಾಪ್ಟರ್ ನ ಸೀಟ್ ಅನ್ನೇ ಬಿಚ್ಚಿ ಅದನ್ನು ನೀರಿನ ಮೇಲೆ ತೇಲುವಂತೆ ಬಳಸಿದ್ದೆ. ಆ ಕ್ಷಣದಲ್ಲಿ ತುಂಬಾ ಶಾಂತವಾಗಿ ಯೋಚನೆ ಮಾಡಿ, ನನ್ನ ದೇಹದ ಮೇಲಿದ್ದ ಭಾರವಾದ ವಸ್ತುಗಳನ್ನೆಲ್ಲಾ ತೆಗೆದು ಹಾಕಿದೆ. ಬೂಟ್ ಗಳು ಮತ್ತು ಬೆಲ್ಟ್ ಗಳನ್ನು ಬಿಚ್ಚಿ ಹಾಕಿದೆ. ಒಟ್ಟಾರೆ ಬದುಕಲು ಏನು ಬೇಕೋ ಎಲ್ಲವನ್ನೂ ನಾನು ಈಜುವ ವೇಳೆ ಮಾಡಿದೆ ಎಂದು ಗೆಲ್ಲೆ ಹೇಳಿದ್ದಾರೆ. ಅಪಘಾತದಲ್ಲಿ ನನ್ನ ಮೊಬೈಲ್ ಕಳೆದುಹೋಗಿದ್ದು, ಉಳಿದಂತೆ ವೈಯಕ್ತಿಕವಾಗಿ ಯಾವುದೇ ಹಾನಿಯಾಗಿಲ್ಲ. ಇನ್ನು 24 ಗಂಟೆಯ ಒಳಗೆ ಮತ್ತೆ ಕೆಲಸಕ್ಕೆ ಮರಳಲಿದ್ದೇನೆ ಎಂದು ವಿಶ್ವಾಸದಲ್ಲಿ ಹೇಳಿದ್ದಾರೆ.
ಗೆಲ್ಲೆ ಅವರನ್ನು ಶ್ಲಾಘಿಸಿರುವ ಮಡಗಾಸ್ಕರ್ ಜನತೆ, ಅವರನ್ನು "ಹೀರೋ", "ಅಸಾಧಾರಣ ಕ್ರೀಡಾಪಟು" ಹಾಗೂ "ಆದರ್ಶ ವ್ಯಕ್ತಿಗೆ ಉದಾಹರಣೆ" ಎನ್ನುವ ಹೆಸರಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೊಂಡಾಡಿದ್ದಾರೆ. ಇನ್ನು ಹೆಲಿಕಾಪ್ಟರ್ ಅಫಘಾತಕ್ಕೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಲಾಗಿದ್ದಯ, ತನಿಖೆ ಪ್ರಗತಿಯಲ್ಲಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
