Asianet Suvarna News Asianet Suvarna News

ಕೊಲಂಬಿಯಾದಲ್ಲಿ ಭೂಕುಸಿತ, ಕೆಸರಿನಲ್ಲಿ ಮುಳುಗಿದ ಬಸ್‌, 8 ಮಕ್ಕಳು ಸೇರಿ 34 ಸಾವು!

ಕೊಲಂಬಿಯಾದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಬಸ್‌ವೊಂದು ಕೆಸರಿನಲ್ಲಿ ಮುಳುಗಿ ಹೋಗಿದೆ. ಒಟ್ಟು 8 ಮಕ್ಕಳು ಸೇರಿದಂತೆ 34 ಮಂದಿ ಸಾವಿಗೀಡಾಗಿದ್ದಾರೆ. ಮಣ್ಣಿನ ಗುಡ್ಡ ಯಾವ ರೀತಿಯಲ್ಲಿ ಬಸ್‌ನ ಮೇಲೆ ಬಿತ್ತೆಂದರೆ ಯಾರೊಬ್ಬರೂ ಪಾರಾಗುವ ಸಣ್ಣ ಅವಕಾಶವೂ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
 

Landslide in Colombia Bus buried in mud 34 killed including 8 children san
Author
First Published Dec 6, 2022, 10:47 AM IST

ನವದೆಹಲಿ (ಡಿ.6): ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ ಸೋಮವಾರ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿನ ರಿಸಾರಾಲ್ಡಾ ಪ್ರಾಂತ್ಯದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದ ಬಸ್‌ ಸಂಪೂರ್ಣ ಕೆಸರಿನಿಂದ ಮುಚ್ಚಿಹೋಗಿದೆ. ಈ ಅಫಘಾತದಲ್ಲಿ 8 ಮಂದಿ ಮಕ್ಕಳು ಸೇರಿದಂತೆ 34 ಮಂದಿ ಸಾವು ಕಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣೆ (UNGRD) ಪ್ರಕಾರ, ಸತ್ತವರಲ್ಲಿ ಎಂಟು ಮಕ್ಕಳು ಸೇರಿದ್ದಾರೆ. ಇನ್ನೂ ಅನೇಕ ಜನರು ಅವಶೇಷಗಳ ಅಡಿಯಲ್ಲಿ ಹೂತುಹೋಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ರಿಸಾರಾಲ್ಡಾ ಪ್ರಾಂತ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಆ ಕಾರಣದಿಂದಾಗಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್ ಸಹಿತ ಕೆಲವು ವಾಹನಗಳೂ ಅವಶೇಷಗಳಲ್ಲಿ ಹೂತು ಹೋಗಿವೆ. ಕ್ಯಾಲಿ ನಗರದಿಂದ ಚೋಕೋ ಪ್ರಾಂತ್ಯದ ಕಾಂಡೇಟೋ ನಗರಕ್ಕೆ ಬಸ್‌ ಪ್ರಯಾಣಿಸುತ್ತಿತ್ತು. ಪ್ಯೂಬ್ಲೋ ರಿಕೊ ಮತ್ತು ಸಾಂಟಾ ಸಿಸಿಲಿಯಾ ನಡುವೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾರಾಗುವ ಸಣ್ಣ ಅವಕಾಶ ಕೂಡ ಇರಲಿಲ್ಲ: ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಬಸ್‌ನ ಮೇಲೆ ಅವಶೇಷಗಳು ಯಾವ ರೀತಿಯಲ್ಲಿ ಉರುಳಿಬಿತ್ತೆಂದರೆ, ಪಾರಾಗುವ ಅತೀ ಸಣ್ಣ ಅವಕಾಶ ಕೂಡ ಅವರಿಗೆ ಇದ್ದಿರಲಿಲ್ಲ. ಬಸ್‌ನ ಮುಂದಿದ್ದ ಕಾರ್‌ ಮೊದಲಿಗೆ ಮಣ್ಣಿನಾಳದಲ್ಲಿ ಹೂತುಹೋದರೆ, ಬಳಿಕ ಬಸ್‌ನ ಮೇಲೂ ಕೂಡ ಕೆಸರು ಬಿದ್ದವು. ಇದರಿಂದಾಗಿ ಸಂಪೂರ್ಣ ರಸ್ತೆ ಕೂಡ ಮುಚ್ಚಿಹೋಯಿತು. ಎರಡೂ ಕಡೆಯಿಂದ ಬರುತ್ತಿದ್ದ ವಾಹನಗಳು ಅಲ್ಲಿಯೇ ನಿಂತುಕೊಂಡವು. ಹಠಾತ್ ಭೂಕುಸಿತ ಸಂಭವಿಸಿದಾಗ ಜೀಪ್, ಬಸ್ ಮತ್ತು ಮೋಟಾರ್ ಬೈಕ್ ಅನ್ನು ಸ್ಥಳದಲ್ಲೇ ನಿಲ್ಲಿಸಲಾಗಿತ್ತು. ಅವಶೇಷಗಳು ಎಷ್ಟು ವೇಗವಾಗಿ ಕೆಳಗಿಳಿದವು ಎಂದರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಸ್ಸಿನಲ್ಲಿ ಇಬ್ಬರು ಚಾಲಕರಿದ್ದರು. ಅನೇಕ ಪ್ರಯಾಣಿಕರು ಕೂಡ ಅದರಲ್ಲಿದ್ದರು ಎಂದಿದ್ದಾರೆ.

ಬಸ್‌ ಕೆಸರಿನ ಅಡಿಯಲ್ಲಿ ಮುಳುಗಿಹೋಗಿರುವ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಅಪಘಾತದ ಮಾಹಿತಿ ಸಿಕ್ಕಿ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣೆ ತಂಡ ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಿತ್ತು. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದು, ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಗೆ ಪ್ರತಿಕ್ರಿಯೆ ನೀಡಿರುವ ಕೊಲಂಬಿಯಾ ಅಧ್ಯಕ್ಷ ಗುಸ್ತಾವೋ ಪೆಟ್ರೋ, ಈ ಕಠಿಣ ಸಮಯದಲ್ಲಿ ಸರ್ಕಾರ ಸಂತ್ರಸ್ಥರ ಕುಟುಂಬದ ಪರವಾಗಿ ನಿಲ್ಲಲಿದೆ ಎಂದಿದ್ದಾರೆ. ಈವರೆಗೂ ಭೂಕುಸಿತದಲ್ಲಿ 9 ಮಂದಿಯನ್ನು ರಕ್ಷಣೆ ಮಾಡಲಾಗಿದೆ. 7 ವರ್ಷದ ಬಾಲಕಿಯನ್ನು ಅವಶೇಷಗಳ ಅಡಿಯಿಂದ ಜೀವಂತವಾಗಿ ಹೊರತೆಗೆಯಲಾಗಿದ್ದು, ಆಕೆಯ ತಾಯಿ ಘಟನೆಯಲ್ಲಿ ಸಾವು ಕಂಡಿದ್ದಾರೆ.

ಈ ವರ್ಷದ ಭಾರೀ ಮಳೆಗೆ ಮಣಿಪಾಲದಲ್ಲೂ ಹಲವಡೆ ಭೂಕುಸಿತ!

ಹೆಂಡತಿ ಮಕ್ಕಳನ್ನು ಉಳಿಸಿ ಸಾವು ಕಂಡ ತಂದೆ: ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳು ಹೇಳುವ ಪ್ರಕಾರ, ಗಿಲ್ಲೆರ್ಮೊ ಇಬಾರ್ಗುನ್‌ ಹೆಸರಿನ ವ್ಯಕ್ತಿಯ ಶವವನ್ನು ಹೊರತೆಗೆಯಲಾಗಿದೆ. ಅವರ ಪುತ್ರ ತಂದೆಯ ಶವವನ್ನು ಗುರುತು ಮಾಡಿದ್ದಾರೆ. ಅಪಘಾತದ ಬಳಿಕ ನನಗೆ ಹೆದರಿಕೆಯಾಗಿತ್ತು. ಬಸ್‌ನಿಂದ ತಕ್ಷಣವೇ ಹೊರಹೋಗಲು ಅಪ್ಪ ನನಗೆ ಸಹಾಯ ಮಾಡಿದ್ದರು. ಕಿಟಿಕಿಯಿಂದ ಹೊರಗೆ ಹಾರುವಂತೆ ಅವರು ಹೇಳಿದ್ದರು. ನಾನು ಹೊರಬಿದ್ದ ಬೆನ್ನಲ್ಲೇ ಮಣ್ಣಿ ಬಸ್‌ನ ಮೇಲೆ ಬೀಳಲು ಆರಂಭವಾಗಿತ್ತು. ತಾಯಿ ಹಾಗೂ ಸಹೋದರಿಯನ್ನೂ ಈ ಸಮಯದಲ್ಲಿ ಅವರು ಹೊರಹಾಕಿದ್ದರು. ಆದರೆ, ತಾವು ಹೊರಬರುವ ವೇಳೆಗೆ ಬಸ್‌ನ ಮೇಲೆ ಮಣ್ಣು ಬಿದ್ದಿಬಿಟ್ಟಿತು ಎಂದು ಹೇಳಿದ್ದಾರೆ.

Bengaluru Landslide; ಆರ್‌ಆರ್‌ ನಗರದಲ್ಲಿ ಉರುಳಿಬಿದ್ದ 20 ಟನ್‌ ತೂಕದ ಬಂಡೆ!

2022 ಕೊಲಂಬಿಯಾದ ರಾಷ್ಟ್ರೀಯ ವಿಪತ್ತು ಅಪಾಯ ನಿರ್ವಹಣೆ (UNGRD) ಪ್ರಕಾರ, 2022 ರಲ್ಲಿ ಇಲ್ಲಿಯವರೆಗೆ ಇಂಥ ಘಟನೆನಳಿಂದ 216 ಜನರು ಸಾವನ್ನಪ್ಪಿದ್ದಾರೆ ಎಂದಿದೆ. 5 ಲಕ್ಷ 38 ಸಾವಿರಕ್ಕೂ ಹೆಚ್ಚು ಜನರು ಕೂಡ ವಿಪತ್ತಿನಿಂದ ನಿರಾಶ್ರಿತರಾಗಿದ್ದಾರೆ ಎನ್ನುವ ಮಾಹಿತಿ ನೀಡಿದೆ.

Follow Us:
Download App:
  • android
  • ios