ನವದೆಹಲಿ(ಫೆ.03): ನೆರೆಹೊರೆಯವರನ್ನು ಬೆದರಿಸುವ ಚೀನಾ ತಂತ್ರ ಕಳವಳಕಾರಿಯಾಗಿದ್ದು, ಇಂಥಹ ಯತ್ನಗಳನ್ನು ತಾನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ ಅವರ ಆಡಳಿತ ಪ್ರತಿಕ್ರಿಯಿಸಿದೆ.

ಭಾರತ- ಚೀನಾ ನಡುವಿನ ಇತ್ತೀಚಿನ ಬಿಕ್ಕಟ್ಟಿನ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಬೈಡೆನ್‌ ಆಡಳಿತ ‘ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವವಾದ ಇಂಡೋ-ಪೆಸಿಫಿಕ್‌ ವಲಯದಲ್ಲಿ ಪರಸ್ಪರ ಮೌಲ್ಯ, ಭದ್ರತೆಯನ್ನು ನಮ್ಮ ಮಿತ್ರದೇಶಗಳ ಜೊತೆ ಹಂಚಿಕೊಳ್ಳಲು ನಾವು ಸದಾ ಸಿದ್ಧ. ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಉಭಯ ದೇಶಗಳ ನಡುವಿನ ಮಾತುಕತೆಯನ್ನೂ ನಾವು ಗಮನಿಸುತ್ತಿದ್ದೇವೆ.

ನೇರ ಮಾತುಕತೆ ಮೂಲಕ ಗಡಿ ವಿವಾದಕ್ಕೆ ಶಾಂತಿಯುತ ಇತ್ಯರ್ಥವನ್ನು ನಾವು ಬಯಸುತ್ತೇವೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಎಮಿಲಿ ಜೆ ಹಾರ್ನೆ ಪ್ರತಿಕ್ರಿಯಿಸಿದ್ದಾರೆ.