Pak New PM ಮೈಕ್ ಕಂಡರೆ ಸಾಕು ಮೈಮೇಲೆ ಬರುತ್ತೆ ದೆವ್ವ, ಪಾಕಿಸ್ತಾನ ನೂತನ ಪ್ರಧಾನಿ ಫುಲ್ ಟ್ರೋಲ್!
- ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶೆಹಬಾಜ್ ಅಧಿಕಾರ ಸ್ವೀಕಾರ
- ಷರೀಫ್ ವಿರುದ್ಧ ಸಾಮಾಜಿಕ ಜಾಲತಾಣಲ್ಲಿ ಟ್ರೋಲ್ಸ್, ಮೆಮ್ಸ್
- ಭಾಷಣ, ಸುದ್ದಿಗೋಷ್ಠಿಯಲ್ಲಿ ಮೈಕ್ ತಳ್ಳಿಹಾಕುವ ಭಾಷಣಕಾರ
ನವದೆಹಲಿ(ಏ.12): ಪಾಕಿಸ್ತಾನ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇದೀಗ ಆರ್ಥಿಕ ಬಿಕ್ಕಟ್ಟು ನೂತನ ಪ್ರಧಾನಿ ಮುಂದಿದೆ. ಇದರ ನಡುವೆ ಶೆಹಬಾಜ್ ಷರೀಫ್ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಪ್ರಧಾನಿಯಾಗುವ ಮೊದಲೇ ಹಲವು ಬಾರಿ ಟ್ರೋಲ್‌ಗೆ ಗುರಿಯಾಗಿರುವ ಶೆಹಬಾಜ್ ಷರೀಫ್ ಇದೀಗ ಮತ್ತೆ ತಮ್ಮ ಮೈಕ್ ಡ್ರಾಪ್ ಟ್ರೋಲ್‌ಗೆ ಗುರಿಯಾಗಿದ್ದಾರೆ
ಶಹಬಾಜ್ ಷರೀಪ್‌ಗೆ ಮೈಕ್ ಮುಂದೆ ನಿಂತರೆ ಎಲ್ಲಿಲ್ಲದ ಜೋಶ್. ಭಾಷಣದ ಶೈಲಿಯೂ ಭಿನ್ನ. ಆಕ್ರೋಶ ಹಾಗೂ ಏರು ಧ್ವನಿಯಲ್ಲಿ ಮಾತನಾಡುವ ಶಹಬಾಜ್ , ಮೈಕ್ ತಳ್ಳಿ ಹಾಕುವುದೇ ಸ್ಟೈಲ್. ಇದಕ್ಕಾಗಿ ಮೈಕ್ ಡ್ರಾಪ್ ಘಟನೆಗೆ ಹೋಲಿಸಲಾಗುತ್ತದೆ. ಇದೀಗ ಶಹಬಾಜ್ ಕಿಂಗ್ ಆಫ್ ಮೈಕ್ ಡ್ರಾಪ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪ್ರಧಾನಿಯಾಗುತ್ತಿದ್ದಂತೆ ಶೆಹಬಾಜ್ ಷರೀಫ್ ಹಳೇ ವಿಡಿಯೋಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಕೆಲ ವಿಡಿಯೋಗಳು ಇಲ್ಲಿವೆ.
ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರ ಶೆಹಬಾಜ್ ಷರೀಫ್ ಅವರನ್ನು ಪಾಕಿಸ್ತಾನದ ಸಂಸತ್ತು ಪ್ರಧಾನಿಯಾಗಿ ಸೋಮವಾರ ಅವಿರೋಧ ಆಯ್ಕೆ ಮಾಡಿದೆ. ಈ ಮೂಲಕ ಷರೀಫ್ ಪಾಕಿಸ್ತಾನದ 23ನೇ ಪ್ರಧಾನಿಯಾಗಿದ್ದಾರೆ.
ಪ್ರಧಾನಿಯಾದ ಬೆನ್ನಲ್ಲೇ ಕಾಶ್ಮೀರ ವಿಚಾರ ಕೆದಕಿ ಭಾರತದ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಕಾಶ್ಮೀರಿ ಸಹೋದರ, ಸಹೋದರಿಯರ ಧ್ವನಿಯನ್ನು ಎಲ್ಲ ವೇದಿಕೆಗಳಲ್ಲಿ (ಅಂತಾರಾಷ್ಟ್ರೀಯ ಮಟ್ಟದಲ್ಲಿ) ನಾವು ತಲುಪಿಸುತ್ತವೆ’ ಎಂದು ಭರವಸೆ ನೀಡಿದ ಪ್ರಧಾನಿ, ‘ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಕುರಿತು ಪ್ರಸ್ತಾಪಿಸುವ ಮೂಲಕ ಕಾಶ್ಮೀರಿಗರಿಗೆ ನಾವು ರಾಜಕೀಯ, ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲ ಒದಗಿಸಲಿದೆ’ ಎಂದರು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದ ವಿಷಯದ ಇತ್ಯರ್ಥಕ್ಕೆ ಮುಂದೆ ಬರಬೇಕು ಎಂದು ಈ ವೇಳೆ ಮನವಿ ಮಾಡಿದ ಅವರು, ಉಭಯ ದೇಶಗಳು ಸೇರಿ ಕಾಶ್ಮೀರದ ಗಡಿಯ ಎರಡೂ ಬದಿಯಲ್ಲಿರುವ ಜನರು ಬಡತನ, ನಿರುದ್ಯೋಗ ಹಾಗೂ ಔಷಧಿಗಳ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರತಯತ್ನ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಮ್ರಾನ್ ವಿರುದ್ಧ ದೇಶದ್ರೋಹ ಪ್ರಕರಣ ವಜಾ
ಈ ನಡುವೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವಾರು ಸಚಿವರ ವಿರುದ್ಧ ದೇಶದ್ರೋಹದ ಆರೋಪದಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಚ್ ಸೋಮವಾರ ವಜಾಗೊಳಿಸಿದೆ. ಇದರೊಂದಿಗೆ ಇಮ್ರಾನ್ ತಮ್ಮ ಸರ್ಕಾರವನ್ನು ಉರುಳಿಸುವಲ್ಲಿ ವಿದೇಶಿ ಶಕ್ತಿಗಳ ಕೈವಾಡವಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನೂ ವಜಾಗೊಳಿಸಲಾಗಿದೆ.
ಮೌಲ್ವಿ ಇಕ್ಬಾಲ್ ಹೈದರ್ ಎಂಬುವವರು ಇಮ್ರಾನ್ ಸೇರಿದಂತೆ ಇನ್ನಿತರ ಸಚಿವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ, ವಿದೇಶಗಳಿಗೆ ಹೋಗದಂತೆ ಇವರ ಮೇಲೆ ತಡೆಯೊಡ್ಡಬೇಕು ಎಂದು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಕೋರ್ಚ್ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಅರ್ಜಿದಾರನ ಮೇಲೆಯೇ 1 ಲಕ್ಷ ರು. ದಂಡವನ್ನು ಹೇರಿದೆ